ಬೆಳಗಾವಿ ಜಿಲ್ಲೆಯ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸಲು ಮಹಾರಾಷ್ಟ್ರಕ್ಕೆ ತೆರಳಿದ್ದ ಹಾರೂಗೇರಿ ಪೊಲೀಸರ ಮೇಲೆ ಆರೋಪಿಗಳು ಮತ್ತು ಅವರ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ. ಜನವರಿಯಲ್ಲಿ ನಡೆದ ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಕರ್ತವ್ಯ ನಿರತ ಪೊಲೀಸರ ಮೇಲಿನ ಹಲ್ಲೆ ಆತಂಕ ಮೂಡಿಸಿದೆ.

ಬೆಳಗಾವಿ (ಮಾ.17): ಕಳ್ಳತನ ಪ್ರಕರಣವೊಂದರ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸ್ ತಂಡದ ಮೇಲೆ ಆರೋಪಿಗಳು ಹಾಗೂ ಅವರ ಬೆಂಬಲಿಗರು ಕಲ್ಲು ತೂರಾಟ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸರು ನೀಡಿದ ಖಚಿತ ಮಾಹಿತಿಯ ಮೇರೆಗೆ ಮಹಾರಾಷ್ಟ್ರದ ಜಾಲನಾ ಜಿಲ್ಲೆಯ ಪೊಲೀಸರು ಕಾರ್ಯಾಚರಣೆಗೆ ಇಳಿದಾಗ ಈ ಆತಂಕಕಾರಿ ಘಟನೆ ಸಂಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಕರಣದ ಹಿನ್ನೆಲೆ:

ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಜನವರಿ ತಿಂಗಳಿನಲ್ಲಿ ದೊಡ್ಡ ಮಟ್ಟದ ಕಳ್ಳತನ ಪ್ರಕರಣವೊಂದು ವರದಿಯಾಗಿತ್ತು. ಈ ಪ್ರಕರಣದ ಬೆನ್ನತ್ತಿದ ಹಾರೂಗೇರಿ ಪೊಲೀಸರಿಗೆ, ಆರೋಪಿಗಳು ಮಹಾರಾಷ್ಟ್ರದ ಜಾಲನಾ ಜಿಲ್ಲೆಯ 'ಗೋಂದಿ ತಾಂಡಾ'ದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು.

ಜಂಟಿ ಕಾರ್ಯಾಚರಣೆ ವೇಳೆ ಕಲ್ಲು ತೂರಾಟ:

ಆರೋಪಿಗಳು ಬೇರೆ ರಾಜ್ಯದಲ್ಲಿದ್ದ ಕಾರಣ, ಹಾರೂಗೇರಿ ಪೊಲೀಸರು ತಕ್ಷಣವೇ ಮಹಾರಾಷ್ಟ್ರದ ಜಾಲನಾ ಜಿಲ್ಲೆಯ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು. ಸ್ಥಳೀಯ ಪೊಲೀಸರ ಸಹಾಯವಿಲ್ಲದೆ ಆರೋಪಿಗಳನ್ನು ಹಿಡಿಯುವುದು ಕಷ್ಟವೆಂದು ಅರಿತ ತಂಡವು ಜಂಟಿ ಕಾರ್ಯಾಚರಣೆಗೆ ಮುಂದಾಗಿತ್ತು. ಹಾರೂಗೇರಿ ಪೊಲೀಸರ ಮಾಹಿತಿಯಂತೆ ಜಾಲನಾ ಪೊಲೀಸರು ಗೋಂದಿ ತಾಂಡಾದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾದರು.

ಆದರೆ, ಈ ಸಂದರ್ಭದಲ್ಲಿ ಸಿನಿಮಾ ಶೈಲಿಯಲ್ಲಿ ಪ್ರತಿರೋಧ ತೋರಿದ ಆರೋಪಿಗಳು ಮತ್ತು ಅವರ ಕಡೆಯವರು ಪೊಲೀಸರ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ತಮಗೆ ಸುತ್ತುವರಿಯುತ್ತಿರುವುದನ್ನು ಕಂಡು ಕಂಗಾಲಾದ ಕಳ್ಳರು, ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ವೈರಲ್ ಆದ ವಿಡಿಯೋ:

ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ದೃಶ್ಯಗಳನ್ನು ಸ್ಥಳೀಯರು ಹಾಗೂ ಕೆಲವು ಪೊಲೀಸರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ವಿಡಿಯೋದಲ್ಲಿ ಪೊಲೀಸರು ಕಲ್ಲುಗಳಿಂದ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿರುವುದು ಮತ್ತು ಪರಿಸ್ಥಿತಿ ಉದ್ವಿಗ್ನಗೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಜೊತೆಗೆ, ಪೊಲೀಸರ ಬಳಿ ಇದ್ದ ಗನ್ ಹಿಡಿದು ಶೂಟ್ ತೋರಿಸಿದ್ದು, ಎಲ್ಲಿ ಶೂಟ್ ಮಾಡುತ್ತಾರೆಂಬ ಭಯದಿಂದ ಕಳ್ಳರು ಹಾಗೂ ಆತನ ಸಂಬಂಧಿಕರು ಪೊಲೀಸರ ಮೇಲೆ ಹಲ್ಲೆ ಮಾಡುವುದಕ್ಕೆ ಹಿಂದೇಟು ಹಾಕಿದ್ದಾರೆ. ಪೊಲೀಸರ ಬಳಿ ಗನ್ ಇದ್ದಿದ್ದರಿಂದ ಖಾಕಿಪಡೆ ಅಲ್ಲಿಂದ ಪರಾಗಿ ಬಂದಿದೆ.

ಕಳೆದ ಜನವರಿ ತಿಂಗಳಿನಲ್ಲಿ ಈ ಘಟನೆ ನಡೆದಿದ್ದರೂ, ಈಗ ವಿಡಿಯೋ ವೈರಲ್ ಆಗುವ ಮೂಲಕ ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿದೆ. ಕರ್ತವ್ಯ ನಿರತ ಪೊಲೀಸರ ಮೇಲೆಯೇ ಈ ರೀತಿ ಹಲ್ಲೆಗೆ ಮುಂದಾಗಿರುವುದು ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಹಾರೂಗೇರಿ ಮತ್ತು ಜಾಲನಾ ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.