ಬೆಂಗಳೂರು (ಮೇ.27):  ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯತೆ ಆರಂಭವಾಗುತ್ತಿದ್ದಂತೆಯೇ ವಿದೇಶದಲ್ಲಿ ಶಿಕ್ಷಣ ಪಡೆಯಬಯಸುವ ವಿದ್ಯಾರ್ಥಿಗಳ ದೊಡ್ಡ ದಂಡು ಲಸಿಕೆ ಹಾಕಿಸಿಕೊಳ್ಳಲು ದಾಂಗುಡಿಯಿಡುತ್ತಿದ್ದು, ಇದರಿಂದಾಗಿ ನಗರದಲ್ಲಿ ಲಸಿಕೆ ಲಭ್ಯವಿರುವ ಖಾಸಗಿ ಆಸ್ಪತ್ರೆಗಳಲ್ಲಿ ಭಾರಿ ಜನ ದಟ್ಟಣೆ ಉಂಟಾಗುತ್ತಿದೆ.

ರಾಜ್ಯ ಸರ್ಕಾರವು 18 ರಿಂದ 44 ವರ್ಷದೊಳಗಿನ ಆದ್ಯತಾ ಗುಂಪುಗಳಿಗೆ ಮಾತ್ರ ಸರ್ಕಾರಿ ಕೋಟಾದಲ್ಲಿ ಕೋವಿಡ್  ಲಸಿಕೆ ನೀಡುತ್ತಿದೆ. ಹೀಗಾಗಿ ಈ ವಯೋಮಾನದಲ್ಲಿ ಬರುವ ವಿದೇಶಕ್ಕೆ ಶಿಕ್ಷಣಕ್ಕೆ ಹಾರ ಬಯಸುವ ವಿದ್ಯಾರ್ಥಿಗಳು, ವಿದೇಶದಲ್ಲಿ ಉದ್ಯೋಗದಲ್ಲಿರುವವರು ಖಾಸಗಿ ಆಸ್ಪತ್ರೆಗಳ ಲಸಿಕಾ ಕೇಂದ್ರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ.

ನಿರ್ಲಕ್ಷ್ಯದ ಪರಮಾವಧಿ: ಕೊರತೆ ಇದ್ದರೂ ಲಸಿಕೆ ಹಾಳು ಮಾಡುತ್ತಿವೆ ರಾಜ್ಯಗಳು! ..

ಮುಂದಿನ ದಿನಗಳಲ್ಲಿ ವಿದೇಶಕ್ಕೆ ಹಾರಲು ಲಸಿಕಾ ಪಾಸ್‌ಪೋರ್ಟ್‌ ಅಥವಾ ಲಸಿಕಾ ಪ್ರಮಾಣ ಪತ್ರ ಕಡ್ಡಾಯವಾಗಲಿದೆ ಎಂಬ ಆತಂಕ ಈ ದಟ್ಟಣೆ ನಿರ್ಮಾಣ ಮಾಡಿದೆ.

ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ತೆರಳ ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷದ ಪರೀಕ್ಷೆಯ ಚಿಂತೆ ಒಂದೆಡೆಯಾದರೆ ಅನೇಕ ದೇಶಗಳು, ವಿಶ್ವವಿದ್ಯಾಲಯಗಳು ವಿದೇಶದಿಂದ ಬರುವವರಿಗೆ ಲಸಿಕೆ ಪಡೆದಿರುವುದನ್ನು ಕಡ್ಡಾಯ ಮಾಡುವ ಚಿಂತನೆಯಲ್ಲಿದೆ. ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಆಗಸ್ಟ್‌- ಸೆಪ್ಟೆಂಬರ್‌ನಲ್ಲಿ ಪ್ರಾರಂಭಗೊಳ್ಳುವ ಹಿನ್ನೆಲೆಯಲ್ಲಿ ಈಗ ಮೊದಲ ಡೋಸ್‌ ಪಡೆದರೆ ಆಗಸ್ಟ್‌ ಒಳಗೆ ಎರಡನೇ ಡೋಸ್‌ ಪಡೆಯಬಹುದು. ಈ ಮೂಲಕ ವಿದೇಶಗಳಲ್ಲಿ ಲಸಿಕೆ ಕಡ್ಡಾಯ ಮಾಡಿದರೂ ಕೊನೆ ಕ್ಷಣದ ಗೊಂದಲದಿಂದ ಪಾರಾಗಬಹುದು ಎಂಬುದು ವಿದ್ಯಾರ್ಥಿಗಳ ಚಿಂತನೆ.

ಕಳೆದ ವರ್ಷ ಕೋವಿಡ್‌ ಮೊದಲ ಅಲೆಯಿಂದಾಗಿ ವಿದೇಶಕ್ಕೆ ತೆರಳಿ ಶಿಕ್ಷಣ ಪಡೆಯುವ ಬಯಕೆಗೆ ಬಹುತೇಕ ವಿದ್ಯಾರ್ಥಿಗಳು ಬ್ರೇಕ್‌ ಹಾಕಿದ್ದರು. ಈ ವಿದ್ಯಾರ್ಥಿಗಳು ಕೂಡ ಈ ವರ್ಷ ತಮ್ಮ ಶಿಕ್ಷಣ ಮುಂದುವರಿಸುವ ಬಯಕೆ ಹೊಂದಿದ್ದಾರೆ. ಅದರೆ ಸರ್ಕಾರಿ ವ್ಯವಸ್ಥೆಯಲ್ಲಿ ಸದ್ಯ ವಿದ್ಯಾರ್ಥಿಗಳು ಲಸಿಕೆಯ ಆದ್ಯತಾ ವಲಯದಲ್ಲಿ ಇಲ್ಲದಿರುವ ಹಿನ್ನೆಲೆಯಲ್ಲಿ ಲಸಿಕೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಲಸಿಕೆ ಪಡೆಯುತ್ತಿದ್ದಾರೆ.

‘ಸರ್ಕಾರ ನಮಗೆ ಯಾವಾಗ ಲಸಿಕೆ ನೀಡಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲದ ಕಾರಣ ಖಾಸಗಿ ಆಸ್ಪತ್ರೆಯೊಂದರಲ್ಲಿ ಲಸಿಕೆ ಪಡೆದಿದ್ದೇನೆ. ಲಸಿಕೆ ಪಡೆದಿಲ್ಲ ಎಂಬ ಕಾರಣಕ್ಕೆ ನನ್ನ ಶೈಕ್ಷಣಿಕ ವರ್ಷ ಮೊಟಕುಗೊಳ್ಳಬಾರದು ಎಂಬುದು ನನ್ನ ಉದ್ದೇಶ. ವೃತ್ತಿ, ಶಿಕ್ಷಣ ಸಲಹೆ ನೀಡುವವರು ಕೂಡ ಯಾವುದಕ್ಕೂ ಲಸಿಕೆ ಪಡೆದಿರಿ ಎಂದು ಹೇಳಿದ್ದರು’ ಎಂದು ಉನ್ನತ ಶಿಕ್ಷಣಕ್ಕೆ ಇಂಗ್ಲೆಂಡ್‌ಗೆ ಹಾರುವ ಕನಸು ಹೊಂದಿರುವ ಮೈತ್ರಿ ಭಟ್‌ ಹೇಳುತ್ತಾರೆ.

ಇದೇ ರೀತಿ ವಿದೇಶದಿಂದ ಭಾರತಕ್ಕೆ ಆಗಮಿಸಿ ಇದೀಗ ಮತ್ತೆ ವಿದೇಶಕ್ಕೆ ತೆರಳುವ ಯೋಚನೆ ಹೊಂದಿರುವ ಆನೇಕರ ಲಸಿಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಸರ್ಕಾರಿ ವ್ಯವಸ್ಥೆಯಲ್ಲಿ 44 ವರ್ಷದೊಳಗೆ ಲಸಿಕೆ ಪಡೆಯುವ ಅವಕಾಶ ಇಲ್ಲ. ಆದರೆ ಗಲ್‌್ಫ ರಾಷ್ಟ್ರಗಳು ಸೇರಿದಂತೆ ಕೆಲ ದೇಶಗಳು ಲಸಿಕೆ ಪಾಸ್‌ಪೋರ್ಟ್‌ ಕಡ್ಡಾಯ ಮಾಡುವ ಚಿಂತನೆಯಲ್ಲಿದೆ. ಹಾಗೆಯೇ ಕೆಲವು ದೇಶಗಳು ಲಸಿಕೆ ಪಡೆಯದವರು ಕ್ಲಬ್‌, ರೆಸಾರ್ಟ್‌ ಸೇರಿದಂತೆ ಕೆಲ ಪ್ರದೇಶಗಳಿಗೆ ನಿರ್ಬಂಧ ಹೇರುತ್ತಿವೆ. ಇದರಿಂದಾಗಿ ವಿದೇಶಕ್ಕೆ ಹಾರಲು ಕಾಯುತ್ತಿರುವವರು ಕೂಡ ಲಸಿಕೆ ಪಡೆಯಲು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ.

ದುಬಾರಿ ದರ :  ಇತ್ತ ಖಾಸಗಿ ಆಸ್ಪತ್ರೆಗಳು ಕೋವ್ಯಾಕ್ಸಿನ್‌ ಲಸಿಕೆಗೆ 1,250 ರು.ಗಳಿಂದ 1,400 ರು. ದರ ವಸೂಲಿ ಮಾಡುತ್ತಿವೆ. ಅದೇ ಕೋವಿಶೀಲ್ಡ್‌ ಲಸಿಕೆಗೆ 850 ರುಗಳಿಂದ 1,100 ರುಗಳನ ತನಕ ದರ ನಿಗದಿ ಮಾಡಿವೆ. ಖಾಸಗಿ ಆಸ್ಪತ್ರೆಗಳ ಲಸಿಕೆಯ ಗರಿಷ್ಠ ದರವನ್ನು ಸರ್ಕಾರ ನಿಗದಿ ಮಾಡಿಲ್ಲ. ಆದರೆ ಸಾವಿರ ರು. ಗಳಿಗಿಂತ ಹೆಚ್ಚು ಹಣ ನೀಡಿ ಲಸಿಕೆ ಪಡೆಯುವುದು ಜನ ಸಾಮಾನ್ಯರಿಗೆ ಹೊರೆಯಾಗಿದೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona