ಕಾರವಾರದಿಂದ ಅಂಕೋಲಾಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು ನಿದ್ದೆಯಲ್ಲಿದ್ದಾಗ, ಪಕ್ಕದ ಸೀಟಿನಲ್ಲಿದ್ದ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಧೈರ್ಯಗೆಡದ ಯುವತಿ ಆತನ ಕೃತ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಉತ್ತರ ಕನ್ನಡ/ಅಂಕೋಲಾ (ಡಿ.31): ಸಾರ್ವಜನಿಕ ಸಾರಿಗೆಯಲ್ಲೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದ್ದು, ಚಲಿಸುವ ಬಸ್‌ನಲ್ಲಿ ನಿದ್ದೆ ಮಾಡುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಮುಕನ ಈ ನೀಚ ಕೃತ್ಯವನ್ನು ಎದೆಗುಂದದೆ ವಿಡಿಯೋ ಮಾಡಿದ ಯುವತಿ, ಆತನ ಮುಖವಾಡವನ್ನು ಸೋಷಿಯಲ್ ಮೀಡಿಯಾದಲ್ಲಿ ಬಯಲು ಮಾಡಿದ್ದಾರೆ.
ಘಟನೆಯ ವಿವರ
ಬಾಧಿತ ಯುವತಿ ಕಾರವಾರದಿಂದ ಅಂಕೋಲಾ ಕಡೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸುದೀರ್ಘ ಪ್ರಯಾಣದ ಆಯಾಸದಿಂದ ಯುವತಿ ಸೀಟಿನಲ್ಲಿ ನಿದ್ದೆಗೆ ಜಾರಿದ್ದರು. ಆಗ ಪಕ್ಕದ ಸೀಟಿನಲ್ಲಿದ್ದ ಕಾಮುಕ ಯುವಕ, ಯುವತಿ ನಿದ್ದೆಯಲ್ಲಿದ್ದಾಗ ಆಕೆಯ ಎದೆಯ ಮೇಲೆ ಕೈ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಿದ್ದೆಯಲ್ಲಿದ್ದ ಯುವತಿಗೆ ಏನೋ ಸ್ಪರ್ಶವಾದಂತಾಗಿ ಒಮ್ಮೆಲೇ ಎಚ್ಚರಗೊಂಡಾಗ, ಆರೋಪಿಯ ಕೈ ಆಕೆಯ ಎದೆಯ ಮೇಲಿತ್ತು. ಈ ವೇಳೆ ಆಕೆ ದಿಗ್ಭ್ರಾಂತಳಾಗಿ ನಡುಗಲಾರಂಭಿಸಿದ್ದಾಳೆ. ಈಕೆ ಸಹಾಯಕ್ಕೆ ಮನೆಯ ಹಿರಿಯರೂ ಜೊತೆಗಿಲ್ಲ ಎಂದು ಯೋಚನೆ ಮಾಡಿದ್ದಾಳೆ.
ಧೈರ್ಯ ತೋರಿದ ಯುವತಿ
ನಂತರ ಘಟನೆಯಿಂದ ಆಘಾತಕ್ಕೊಳಗಾದರೂ ಧೈರ್ಯ ಕಳೆದುಕೊಳ್ಳದ ಯುವತಿ, ತಕ್ಷಣವೇ ಮೊಬೈಲ್ ಹೊರತೆಗೆದು ಆರೋಪಿಯ ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಸಾರ್ವಜನಿಕವಾಗಿ ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, 'ನಮ್ಮ ರಕ್ಷಣೆಗೆ ನಾವೇ ಮುಂದಾಗಬೇಕು, ಇಂತಹ ಕಾಮುಕರಿಗೆ ತಕ್ಕ ಶಾಸ್ತಿಯಾಗಬೇಕು' ಎಂದು ಮಹಿಳೆಯರಿಗೆ ಸಂದೇಶ ನೀಡಿದ್ದಾರೆ. ಅಲ್ಲದೆ, ಪೊಲೀಸ್ ಹಿರಿಯ ಅಧಿಕಾರಿಗಳನ್ನು ಟ್ಯಾಗ್ ಮಾಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.
ಎಸ್ಪಿ ದೀಪನ್ ಎಂ.ಎನ್. ಖಡಕ್ ಸೂಚನೆ
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪನ್ ಎಂ.ಎನ್. ಅವರು ತಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಕರಣದ ತನಿಖೆ ನಡೆಸಿ, ಕೂಡಲೇ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಂತೆ ಅಂಕೋಲಾ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಸದ್ಯ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಪ್ರಕ್ರಿಯೆ ನಡೆಯುತ್ತಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.


