ಗದಗ-ಯಲವಿಗಿ ರೈಲು ಮಾರ್ಗ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದ್ದು, ಕಾಮಗಾರಿ ಸ್ಥಗಿತಗೊಂಡಿದೆ. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಯೋಜನೆಯನ್ನು ಕಾರ್ಯರೂಪಕ್ಕೆ ತರಲು ರೈಲ್ವೆ ಮಾರ್ಗ ಹೋರಾಟ ಸಮಿತಿಯು ನೂತನ ಸಭಾಪತಿ ಜಿ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದೆ.

ಗದಗ: ಬಹುದಿನಗಳ ಬೇಡಿಕೆಯಾಗಿರುವ ಗದಗ-ಯಲವಿಗಿ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಕಾಮಗಾರಿಗೆ ವೇಗ ನೀಡಬೇಕು ಎಂದು ಗುರುವಾರ ಶಿರಹಟ್ಟಿ ಫಕೀರೇಶ್ವರ ಮಠದಲ್ಲಿ ನೂತನ ಸಭಾಪತಿ ಜಿ.ಎಸ್. ಪಾಟೀಲ ಅವರಿಗೆ ಗದಗ-ಶಿರಹಟ್ಟಿ-ಯಲವಿಗಿ ರೈಲ್ವೆ ಮಾರ್ಗ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

2021-22ನೇ ಸಾಲಿನ ಬಜೆಟ್‌ನಲ್ಲಿಯೇ ಅನುಮೋದನೆ

ಈ ವೇಳೆ ರೈಲ್ವೆ ಮಾರ್ಗ ಹೋರಾಟ ಸಮಿತಿ ಅಧ್ಯಕ್ಷ ಈರಣ್ಣ ಕೋಟಿ ಹಾಗೂ ಉಪಾಧ್ಯಕ್ಷ ರಾಯೇಸಾಬ್ ಢಾಲಯತ ಮಾತನಾಡಿ, 2021-22ನೇ ಸಾಲಿನ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿಗಳು ಗದಗ ಯಲವಿಗಿ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗೆ ಅನುಮೋದನೆ ಘೋಷಿಸಿದ್ದರು. ಆದರೆ ಆರ್ಥಿಕ ಅನುಮೋದನೆ ದೊರೆತು 4-5 ವರ್ಷಗಳೆ ಗತಿಸಿದರೂ ಭೂ ಸ್ವಾಧೀನ ಪ್ರಕ್ರಿಯೆ ಕಾರ್ಯರೂಪಕ್ಕೆ ಬಂದಿಲ್ಲ. ಕಾರಣ ತಮ್ಮ ಅನುಭವ ಮತ್ತು ಮಾರ್ಗದರ್ಶನದ ಮೂಲಕ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಯೋಜನೆ ಅನುಷ್ಠಾನದ ಅಗತ್ಯತೆ ಮನವರಿಕೆ ಮಾಡಿಕೊಡುವ ಮೂಲಕ ಈ ಭಾಗದ ಜನರ ದಶಕಗಳ ಆಸೆಗೆ ಕಾರ್ಯರೂಪ ನೀಡಬೇಕು ಎಂದರು.

ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ

ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದಿರುವುದರಿಂದ ಕಾಮಗಾರಿಯ ಪ್ರಗತಿಗೆ ಅಡಚಣೆಯಾಗುತ್ತಿದೆ. ಭೂಮಿಯನ್ನು ತ್ವರಿತವಾಗಿ ಸ್ವಾಧೀನಪಡಿಸಿಕೊಂಡು, ಭೂಮಾಲೀಕರಿಗೆ ನಿಯಮಾನುಸಾರ ಪರಿಹಾರ ಒದಗಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ..

ಇದನ್ನೂ ಓದಿ: ತದಡಿ-ಅಘನಾಶಿನಿ ಬಾರ್ಜ್‌ನ ಪ್ರಯಾಣದ ದರ ಪಟ್ಟಿ ಅಳವಡಿಸಲು ಸಿದ್ಧತೆ; ಪ್ರಯಾಣಿಕರಲ್ಲಿ ಗೊಂದಲ

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮುಖಂಡರಾದ ವಿ.ವಿ. ಕಪ್ಪತ್ತನವರ, ಹುಮಾಯೂನ ಮಾಗಡಿ, ಸಿ.ಸಿ. ನೂರಶೆಟ್ಟರ, ಬಾಬಣ್ಣ ಮುಂಡವಾಡ, ಡಾ. ಸುನೀಲ ಬುರಬುರೆ ಹಾಗೂ ರೈಲು ಮಾರ್ಗ ಹೋರಾಟ ಸಮಿತಿ ಸದಸ್ಯರು ಇದ್ದರು.

ಇದನ್ನೂ ಓದಿ: ಬಿ ನಾಗೇಂದ್ರ ರಾಜೀನಾಮೆ ಆಯ್ತು, ಕೆಪಿಎಸ್‌ಸಿ ಎಇಇ ನೇಮಕಾತಿ ಹಗರಣದಲ್ಲಿ ಈಗ ಪ್ರಿಯಾಂಕ್ ಖರ್ಗೆ ಸರದಿ! ಹೆಚ್‌ಡಿಕೆ ಗಂಭೀರ ಆರೋಪ!