ಗುತ್ತಲ(ನ.21): ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹಾವೇರಿ ಡಿಪೋಗೆ ಸೇರಿದ ಸರ್ಕಾರಿ ಬಸ್‌ನ ಸ್ಟೇರಿಂಗ್‌ ಕಟ್‌ ಆಗಿ ಬಸ್‌ ಪಲ್ಟಿಯಾದ ಘಟನೆ ಸಮೀಪದ ತಿಮ್ಮಾಪುರ ಎಂ.ಜಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗುತ್ತಲದಿಂದ ಕೂರಗುಂದ ಗ್ರಾಮದ ಮೂಲಕ ಹಾವೇರಿಗೆ ತೆರಳುತಿದ್ದ ಬಸ್‌ ತಿಮ್ಮಾಪುರ ಎಂ.ಜಿ ಗ್ರಾಮದ ತಿರುವಿನ ಬಸ್‌ನ ಸ್ಟೇರಿಂಗ್‌ ಕಟ್‌ ಆಗಿ ತಗ್ಗು ಪ್ರದೇಶದಲ್ಲಿನ ಖಣದಲ್ಲಿ ರಾಶಿ ಮಾಡಲಾಗಿದ್ದ ಮೆಕ್ಕೆಜೋಳದ ತೆನೆಗಳ ರಾಶಿಯ ಮೇಲೆ ನಿಧಾನವಾಗಿ ಪಲ್ಟಿಯಾಗಿದೆ. ಈ ವೇಳೆ ಬಸ್‌ನಲ್ಲಿದ್ದ ಸುಮಾರು 20 ಪ್ರಮಾಣಿಕರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಘಟನೆ ಸಾರಿಗೆಯ ಇಲಾಖೆಯಲ್ಲಿನ ದೋಷಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಕಳಪೆ ಗುಣಮಟ್ಟದ ಬಸ್‌ಗಳನ್ನು ಗ್ರಾಮಾಂತರ ಪ್ರದೇಶಕ್ಕೆ ಕಳುಹಿಸುತ್ತಿದ್ದು, ಸರಿಯಾದ ಸಮಯಕ್ಕೆ ಸಣ್ಣ ಪುಟ್ಟದುರಸ್ತಿನೂ ಮಾಡಲ್ಲ. ಉತ್ತಮ ದರ್ಜೆಯ ಸಲಕರಣೆಗಳನ್ನು ಅಳವಡಿಸಲ್ಲ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ ಎಂದು ಪ್ರಯಾಣಿಕರು ಆರೋಪಿಸಿದರು. ಚಾಲಕ ನಿಧಾನವಾಗಿ ಬಸ್ಸನ್ನು ಚಲಿಸುತ್ತಿದ್ದರಿಂದ ದೊಡ್ಡ ಅವಘಡದಿಂದ ಪಾರಾದಂತಾಗಿದೆ ಎಂದರು.
ಘಟನೆ ಕುರಿತು ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.