ಕೆಆರ್‌ಎಸ್ ಅಣೆಕಟ್ಟೆಯ ನಿರ್ಮಾಣದಲ್ಲಿ ಟಿಪ್ಪು ಸುಲ್ತಾನನ ಪಾತ್ರದ ಕುರಿತು ಸಚಿವ ಎಚ್.ಸಿ. ಮಹದೇವಪ್ಪ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇತಿಹಾಸ ತಿರುಚುವ ಯತ್ನ ಎಂದು ಆರೋಪಿಸಿದ್ದಾರೆ.
ಮೈಸೂರು: ಕೆಆರ್‌ಎಸ್ ಅಣೆಕಟ್ಟಿಗೆ ಮೊದಲ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಇತಿಹಾಸವನ್ನು ತಿರುಚಲು ಕೈಗೊಂಡ ಈ ಪ್ರಯತ್ನ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ವ್ಯಂಗ್ಯವಾಗಿ ಪ್ರತಾಪ್ ಸಿಂಹ , ಜ್ಯೂನಿಯರ್ ಡಾಕ್ಟರ್ ಯತೀಂದ್ರ ‘ನಾಲ್ವಡಿಗಿಂತ ನಮ್ಮಪ್ಪ ದೊಡ್ಡವರು’ ಎಂದಿದ್ದರು. ಈಗ ಸಿನೀಯರ್ ಡಾಕ್ಟರ್ ಮಹದೇವಪ್ಪ, ನಾಲ್ವಡಿ ಕೃಷ್ಣರಾಜ ಒಡೆಯರ್ ಶ್ರಮಿಸಿ ನಿರ್ಮಿಸಿದ ಕೆಆರ್‌ಎಸ್ ಅಣೆಕಟ್ಟಿಗೆ ಟಿಪ್ಪು ಸುಲ್ತಾನ್ ಶಿಲಾನ್ಯಾಸ ಮಾಡಿದ್ದಾರೆ ಎಂಬ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ. ಜ್ಯೂನಿಯರ್ ಡಾಕ್ಟರ್ ಹೊಸ ಇತಿಹಾಸ ಬರೆಯಲು ಹೊರಟರೆ, ಸಿನೀಯರ್ ಡಾಕ್ಟರ್ ಇತಿಹಾಸ ತಿರುಚಲು ಯತ್ನಿಸಿದ್ದಾರೆ. ಒಬ್ಬ ಟಿಪ್ಪು ಸುಲ್ತಾನ್ ಶಿಲಾನ್ಯಾಸ ಮಾಡಿದ್ದಾರೆ ಅಂದ್ರೆ, ಆಗ ಡಿಪಿಆರ್ ತಯಾರಿಸಿದವರು ಯಾರು? ಯಾವ ಎಂಜಿನಿಯರ್? ಯಾರೋ ಮುಲ್ಲಾನ ಮೌಲ್ವಿ ಡಿಪಿಆರ್ ಮಾಡಿರಬೇಕು ತಾನೇ? ಅವರು ಯಾರು ಅಂತಾ ಹೇಳಿ ಎಂದು ಪ್ರಶ್ನಿಸಿದರು.
ಟಿಪ್ಪು ಆಳ್ವಿಕೆ ಇದ್ದ ವೇಳೆ ವಿಶ್ವೇಶ್ವರಯ್ಯ ಹುಟ್ಟಿಯೇ ಇರಲಿಲ್ಲ. ನಾಲ್ವಡಿ ಒಡೆಯರ್, ವಿಶ್ವೇಶ್ವರಯ್ಯ ಇರದಿದ್ದರೆ ಕೆಆರ್ ಎಸ್ ಜಲಾಶಯವೇ ನಿರ್ಮಾಣ ಆಗುತ್ತಿರಲಿಲ್ಲ. 1799 ರಲ್ಲಿ ಟಿಪ್ಪು ಸತ್ತು ಹೋದ. 1911 ರಲ್ಲಿ ಕೆಆರ್ ಎಸ್ ಕಟ್ಟಲು ಶುರು ಮಾಡಿದರು. ಎಲ್ಲಿಂದ ಎಲ್ಲಿಗೆ ಲಿಂಕ್ ಇದೆ ಮಹದೇವಪ್ಪ ಅವರೇ? ನಾಲ್ವಡಿ ಬಗ್ಗೆ ಯಾಕೆ ನಿಮಗೆಲ್ಲಾ ಇಷ್ಟು ಕೋಪ? ನಾಲ್ವಡಿ ಕೃಷ್ಣರಾಜ ಒಡೆಯರ್‌ಗಳ ದೂರದೃಷ್ಟಿಯಿಲ್ಲದೇ ಈ ಮಹತ್ವದ ಜಲಾಶಯ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ.
"ಈಗ ನಿಮಗೆ ಏನು ಬಾಕಿಯಾಗಿದೆ? ದಸರಾ ಗಜಪಯಣದ ವೇಳೆ ಟಿಪ್ಪು ಸುಲ್ತಾನ್‌ನೇ ದಸರಾ ಹಬ್ಬವನ್ನು ಪ್ರಾರಂಭಿಸಿದ್ದಾರೆ ಅಂತಲೂ ಹೇಳಿ ಬಿಡಿ!" ಎಂದು ಕಟು ವ್ಯಂಗ್ಯವಾಡಿದರು. ಯತೀಂದ್ರ ಕಳೆದ ವಾರ ಅವಹೇಳನ ಮಾಡಿದರು. ಈಗ ನೀವು ಮುಂದುವರಿಸಿದ್ದಿರಿ. ಫೇಕ್ ನ್ಯೂಸ್ ಹರಡಿದವರ ಮೇಲೆ ಕೇಸ್ ಹಾಕೋಕೆ ಕಾಯ್ದೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕಾಯ್ದೆಯಲ್ಲಿ ಮೊದಲ ಕೇಸ್ ಗಳು ಮಹದೇವಪ್ಪ, ಪ್ರಿಯಾಂಕ ಖರ್ಗೆ, ಲಾಡ್, ಯತೀಂದ್ರ ಮೇಲೆಯೆ ಹಾಕಿಸಿ. ಮಹಾರಾಜರ ಬಗ್ಗೆ ಸಿದ್ದರಾಮಯ್ಯಗೆ ರಕ್ತಗತವಾಗಿ ದ್ವೇಷ ಬಂದಿದೆ. ಈ ವರ್ತನೆ ಪ್ರಜಾಪ್ರಭುತ್ವಕ್ಕೆ ಮಸಿಯೆಳೆದಂತಾಗಿದೆ. ಸಿದ್ದರಾಮಯ್ಯ ಅವರಿಗೆ ಮೈಸೂರಿನ ಮಹಾರಾಜರ ವಿರುದ್ಧ ರಕ್ತಗತ ದ್ವೇಷವಿದೆಯೆಂಬುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
"ಟಿಪ್ಪು ಬ್ರಿಟಿಷ್ ರ ವಿರುದ್ದ ಹೋರಾಟ ಮಾಡಿದ್ದ ಅದಕ್ಕೆ ತಕರಾರು ಇಲ್ಲ. ಆದರೆ ಅವನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ವರ್ಣಿಸುವುದು ಸರಿಯಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಟೈಂ ಲೈನ್ ಇಲ್ವಾ? ಟಿಪ್ಪು ಕಾಲದಲ್ಲಿ 'ಸ್ವಾತಂತ್ರ್ಯ ಹೋರಾಟ' ಎಂಬ ಕಲ್ಪನೆಯೇ ಇರಲಿಲ್ಲ. ಆತ ತಮಗೆ ಸೇರಿದ ಸಂಸ್ಥಾನವನ್ನು ಉಳಿಸಿಕೊಳ್ಳಲು ಹೋರಾಡಿದ. ಇದು ವೈಯಕ್ತಿಕ, ಆಲೌಕಿಕ ಹೋರಾಟವಾಗಿತ್ತು, ರಾಷ್ಟ್ರದ ಪರವಾಗಿಯಲ್ಲ. ಒಂದು ಸಮುದಾಯದ ಮತಕ್ಕಾಗಿ ಇತಿಹಾಸ ತಿರುಚುವುದು ಮಹದೇವಪ್ಪಗೆ ಶೋಭೆ ತರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
