ಕೆಆರ್‌ಎಸ್ ಅಣೆಕಟ್ಟು ನಿರ್ಮಾಣದಲ್ಲಿ ಟಿಪ್ಪು ಸುಲ್ತಾನನ ಪಾತ್ರವಿಲ್ಲ ಎಂದು ಇತಿಹಾಸಕಾರ ತಲಕಾಡು ಚಿಕ್ಕರಂಗೇಗೌಡ ಸ್ಪಷ್ಟಪಡಿಸಿದ್ದಾರೆ. ನಿಜವಾದ ಕೊಡುಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದ್ದು ಎಂದು ಅವರು ಹೇಳಿದ್ದಾರೆ. ಸಚಿವ ಮಹದೇವಪ್ಪನವರ ಹೇಳಿಕೆಯನ್ನು ಅವರು ಖಂಡಿಸಿದ್ದಾರೆ.

ಬೆಂಗಳೂರು: ಕೆಆರ್‌ಎಸ್ ಅಣೆಕಟ್ಟಿಗೆ ಟಿಪ್ಪು ಸುಲ್ತಾನ್ ಅಡಿಪಾಯ ಹಾಕಿದ ಎಂಬ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿಕೆಗೆ ಈಗ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸಚಿವರ ವಿವಾದಾತ್ಮಕ ಹೇಳಿಕೆಗೆ ಮೈಸೂರು ಸಂಸದ ಯದುವೀರ್ ಒಡೆಯರ್ ಕೂಡ ಖಂಡನೆ ವ್ಯಕ್ತಪಡಿಸಿದ್ದರು. ಇದೀಗ ಅವರು ನೀಡಿದ ಟಿಪ್ಪು ಸುಲ್ತಾನ್ ಸಂಬಂಧಿತ ಹೇಳಿಕೆ ವಿರುದ್ಧ ಇತಿಹಾಸಕಾರ ತಲಕಾಡು ಚಿಕ್ಕ ರಂಗೇಗೌಡ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಂಬೇಡ್ಕರ್ ಅವರ ಚಿಂತನೆಗಳನ್ನು ಅರಿದು ಕುಡಿದಂತಹ ವ್ಯಕ್ತಿ ಇಂತಹ ಅಜ್ಞಾನಪೂರ್ಣ ಹೇಳಿಕೆಯನ್ನು ನೀಡಿರುವುದು ವಿಷಾದಕರ" ಎಂದು ಚಿಕ್ಕ ರಂಗೇಗೌಡ ಹೇಳಿದ್ದಾರೆ.

ಕನ್ನಡನಾಡಿನ ಇತಿಹಾಸಕ್ಕೆ ಸ್ಪಷ್ಟ ದಾಖಲೆಗಳು ಇವೆ:

ತಲಕಾಡು ಚಿಕ್ಕ ರಂಗೇಗೌಡ ಅವರ ಪ್ರಕಾರ, ಮಂಡ್ಯ ಜಿಲ್ಲೆ ಮತ್ತು ಮೈಸೂರು ಜಿಲ್ಲೆ ಹಿಂದೆ ಒಂದೇ ಪ್ರದೇಶವಾಗಿದ್ದ ಕಾಲದಲ್ಲಿ ಗಂಗರು ಹಾಗೂ ಹೊಯ್ಸಳರು ಅಣೆಕಟ್ಟೆ ಕಟ್ಟಬೇಕೆಂಬ ಕನಸು ಕಂಡಿದ್ದರು. ಅದೇ ಮಾದರಿಯಲ್ಲಿ ಟಿಪ್ಪು ಸುಲ್ತಾನೂ ಕನ್ನಂಬಾಡಿ ಪ್ರದೇಶದಲ್ಲಿ ಅಣೆಕಟ್ಟೆ ನಿರ್ಮಾಣವಾಗಲಿ ಎಂಬ ಆಶಯ ಹೊಂದಿದ್ದ. ಆದರೆ ಆತ ಒಂದು ಕಲ್ಲು ಕೂಡ ಇಟ್ಟಿಲ್ಲ, ಅವನಿಂದ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ. "ಅದು ಆತನ ಕನಸು ಆಗಿತ್ತು, ಆ ಕನಸು ಕನಸಾಗೇ ಉಳಿದಿದೆ. ಟಿಪ್ಪು ಸುಲ್ತಾನ್ ಗೂ ಕನ್ನಂಬಾಡಿ ಕಟ್ಟೆಗೂ ಯಾವುದೇ ಸಂಬಂಧ ಇಲ್ಲಾ. ಆ ಕನಸು ನಿಜವಾದದ್ದು ಮಾತ್ರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವ್ರಿಂದ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೆಆರ್‌ಎಸ್ ನಿರ್ಮಾಣದಲ್ಲಿ ಟಿಪ್ಪುವಿನ ಯಾವುದೇ ಪಾತ್ರವಿಲ್ಲ

ಕನ್ನಂಬಾಡಿ ಅಣೆಕಟ್ಟೆಯನ್ನು ಟಿಪ್ಪು ಸುಲ್ತಾನ್ ನಿರ್ಮಿಸಿದ್ದಾರೆ ಎಂಬುದು ಸಂಪೂರ್ಣ ಸುಳ್ಳಾಗಿದೆ. ನಿಜವಾಗಿ ಆ ಯೋಜನೆಯ ಜವಾಬ್ದಾರಿ ತೆಗೆದುಕೊಂಡವರು ಮೈಸೂರು ರಾಜವಂಶದ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರು ಬ್ರಿಟಿಷ್ ಇಂಜಿನಿಯರಿಂಗ್ ತಂತ್ರಜ್ಞಾನವನ್ನು ಬಳಸಿ ಈ ಯೋಜನೆಯನ್ನು ರೂಪಿಸಿದ್ದರು. ಅಂದಿನ ಅಧಿಕಾರಿ ಬ್ಯಾನರ್ಜಿ ಅವರಿಂದ ಅನುಮತಿ ಕೇಳಿದಾಗ ಅದು ನಿರಾಕರಿಸಲ್ಪಟ್ಟಿತ್ತು. ಇಡೀ ರಾಜ್ಯವನ್ನೇ ಒತ್ತೆ ಇಡೋ ಸಂದರ್ಭ ಬಂತು. ಆದರೆ ತಾಯಿ ಕೆಂಪನಂಜಮ್ಮಣ್ಣಿ ಮತ್ತು ಪತ್ನಿ ಪ್ರತಾಪಕುಮಾರಿಯವರು ತಮ್ಮ ಸ್ವಂತ ಆಭರಣಗಳನ್ನು ಒತ್ತೆಯಿಟ್ಟು ಕೊಟ್ಟು ಹಣ ಸಂಗ್ರಹಿಸಿ, ಅದನ್ನೇ ಉಪಯೋಗಿಸಿ ಡ್ಯಾಮ್ ನಿರ್ಮಾಣ ಮಾಡಲಾಯಿತು. 1924ರಲ್ಲಿ ಕೆಆರ್‌ಎಸ್ ನಿರ್ಮಾಣ ಪೂರ್ಣಗೊಂಡಿದ್ದು,ನಾಲ್ವಡಿ ಕೃಷ್ಣರಾಜರಿಗೂ ಇದು ಟಿಪ್ಪು ಸುಲ್ತಾನ್ ಅವರ ಕನಸು ಅಂತ ಗೊತ್ತಿತ್ತು. ಆತನ 1 ರೂ ಹಣ ಕೂಡ ಇದಕ್ಕೆ ಬಳಕೆಯಾಗಿಲ್ಲ ಎಂದು ಇತಿಹಾಸಕಾರರು ತಿಳಿಸಿದ್ದಾರೆ.

ರಾಜಕೀಯ ಹೇಳಿಕೆಗಳ ಹಿಂದೆ ಇತಿಹಾಸವನ್ನು ದೂಷಿಸಬಾರದು

ಚಿಕ್ಕ ರಂಗೇಗೌಡ ಮತ್ತಷ್ಟು ವಿವರಿಸಿ, "ಮಹದೇವಪ್ಪ ಅವರಿಗೆ ಇತಿಹಾಸ ಗೊತ್ತಿಲ್ಲದೆ ಇಂತಹ ಹೇಳಿಕೆ ನೀಡಿರುವುದು ವಿಷಾದನೀಯ. ಇತಿಹಾಸಕ್ಕೆ ಸಂಬಂಧಿಸಿದ ಯಾವುದೇ ವಿವಾದಾತ್ಮಕ ಹೇಳಿಕೆಗೆ ಮುನ್ನ ಇತಿಹಾಸಕಾರರನ್ನು ಅಥವಾ ದಾಖಲೆಗಳನ್ನು ಅಧ್ಯಯನ ಮಾಡಬೇಕು. ಯಾರೋ ಒಬ್ಬರನ್ನು ಮೆಚ್ಚಿಸಲು ಇತಿಹಾಸವನ್ನು ಬದಲಾಯಿಸುವ ರೀತಿಯಲ್ಲಿ ಮಾತನಾಡುವುದು ಖಂಡನೀಯ" ಎಂದಿದ್ದಾರೆ. ಕರ್ನಾಟಕಕ್ಕೆ ಟಿಪ್ಪು ಸುಲ್ತಾನ್ ಕೊಡುಗೆ ಇದೆ, ಆದರೆ ಕನ್ನಂಬಾಡಿ ಅಣೆಕಟ್ಟು ನಿರ್ಮಾಣದಲ್ಲಿ ಯಾವುದೇ ಕೊಡುಗೆ ಇಲ್ಲ ಎಂಬುದನ್ನು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಿಸಲಾಗಿದೆ ಎಂದು ತಲಕಾಡು ಚಿಕ್ಕ ರಂಗೇಗೌಡ ಸ್ಪಷ್ಟಪಡಿಸಿದ್ದಾರೆ.