ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, ಸರ್ಕಾರದ ಆಂತರಿಕ ಕಿತ್ತಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಡಗಿನ ಕರ್ತೋಜಿಯಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಕೊಡಗು (ಫೆ.25): ರಾಜ್ಯದಲ್ಲಿ ಮತ್ತೆ ಸಿಎಂ ಹಾಗೂ ಸಚಿವ ಸ್ಥಾನಕ್ಕಾಗಿ ಕಿತ್ತಾಟ ಶುರುವಾಗಿದ್ದು, ನಿಮ್ಮ ಖುರ್ಚಿಯ ಹಗ್ಗ ಜಗ್ಗಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ನಿಮ್ಮ ಕಿತ್ತಾಟದಲ್ಲಿ ರಾಜ್ಯದ ಅಭಿವೃದ್ಧಿ ಹಿಂದೆ ಬಿದ್ದಿದೆ. ಇದು ಆಗಬಾರದು ಎಂದು ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲೆಯ ಕರ್ತೋಜಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಇದನ್ನು ಈ ಜಿಲ್ಲೆಯ ಇಬ್ಬರು ಶಾಸಕರನ್ನೇ ಕೇಳಬೇಕು ಎಂದು ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯಿಸಿದರು.

ಸರ್ಕಾರಿ ಉದ್ಯೋಗಗಳ ಭರ್ತಿ ಮಾಡದ ಹಿನ್ನೆಲೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವ ವಿಚಾರಕ್ಕೆ ಮಾತನಾಡಿದ ಅವರು ಮೊದಲು ರಾಷ್ಟ್ರದಲ್ಲಿ ಹೆಚ್ಚು ನಿರುದ್ಯೋಗವಿತ್ತು, ಕಳೆದ ಹತ್ತು ವರ್ಷಗಳಲ್ಲಿ ಅದು 3.8 ಕ್ಕೆ ಇಳಿಕೆಯಾಗಿದೆ. ಆದರೆ ಇದರ ಪ್ರಮಾಣ ರಾಜ್ಯದಲ್ಲಿ ಸ್ವಲ್ಪ ಜಾಸ್ತಿಯೇ ಇದೆ. ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಆ ಕಡೆಗೆ ಸರ್ಕಾರ ಗಮನ ಕೊಡಲಿ ಎಂದು ಸಂಸದ ಯದುವೀರ್ ಒಡೆಯರ್ ಆಗ್ರಹಿಸಿದ್ದಾರೆ.

ಉದಾಹರಣೆಗೆ ಕೊಡಗಿನ ಆಸ್ಪತ್ರೆಗಳಲ್ಲಿ ತೆಗೆದುಕೊಳ್ಳಿ ಅಲ್ಲಿ ವೈದ್ಯರಿಲ್ಲ, ಜಿಲ್ಲೆಯ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಇದೆಲ್ಲವೂ ಸರ್ಕಾರಿ ಉದ್ಯೋಗಗಳು ಖಾಲಿ ಇವೆ ಎನ್ನುವುದನ್ನು ಸೂಚಿಸುತ್ತವೆ. ಇದನ್ನು ಮನಗಂಡು ನಾನು ಹಲವು ಕೌಶಲಾಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಅದರ ಸದುಪಯೋಗ ವಿದ್ಯಾರ್ಥಿಗಳಿಗೆ ಆಗುತ್ತಿದೆ ಎಂದು ಸಂಸದ ಯದುವೀರ್ ಒಡೆಯರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೂ ಮೊದಲು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಪದೇ ಪದೇ ಭೂಕುಸಿತವಾಗುತ್ತಿದ್ದ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅವರು ಭೂಮಿ ಪೂಜೆ ನೆರವೇರಿಸಿದರು. ಒಟ್ಟು 18 ಸ್ಥಳಗಳಲ್ಲಿ 94.08 ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಕೊಡಗು ಜಿಲ್ಲೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 275ಬ ರಲ್ಲಿ ಮಡಿಕೇರಿಯಿಂದ ಸಂಪಾಜೆವರೆಗೆ ಹಲವೆಡೆ ಭೂಕುಸಿತವಾಗಿತ್ತು. ಮಳೆಗಾಲ ಬಂತೆಂದರೆ ನಿರಾಂತಕ ಪ್ರಯಾಣವುದು ಸಾಧ್ಯತೆವೇ ಇಲ್ಲ ಎನ್ನುವಂತ ಪರಿಸ್ಥಿತಿ ಇತ್ತು.

2018 ರಿಂದ 2021 ರವರೆಗೆ ಕೊಡಗು ಜಿಲ್ಲೆಯಲ್ಲಿ ಪ್ರತೀ ವರ್ಷವೂ ಹೆದ್ದಾರಿ ಬದಿಯಲ್ಲಿ ಭೂಕುಸಿತವಾಗುತಿತ್ತು. ಕಳೆದ ವರ್ಷವೂ ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ತೋಜಿ ಎಂಬಲ್ಲಿ ಬೆಟ್ಟದ ಮಣ್ಣು ಭಾರೀ ಪ್ರಮಾಣದಲ್ಲಿ ಕುಸಿದು ಬಂದಿತ್ತು. ದ್ವಿಪಥ ರಸ್ತೆ ಒಂದು ಬದಿ ಮಣ್ಣಿನಿಂದ ಸಂಪೂರ್ಣ ಆವೃತವಾಗಿತ್ತು. ಉಳಿದ ಒಂದೇ ಬದಿಯಲ್ಲಿ ವಾಹನಗಳು ಓಡಾಡಬೇಕಾಗಿತ್ತು. ಈ ಕುರಿತು ಸುವರ್ಣ ನ್ಯೂಸ್ 2025 ರ ಡಿಸೆಂಬರ್ 27 ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ಇದೀಗ ಹೆದ್ದಾರಿಯಲ್ಲಿ ಭೂಕುಸಿತವಾಗುವ ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಲು ಮುಂದಾಗಿದ್ದು ಇದು ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್.

ಸದ್ಯ ತಡೆಗೋಡೆ ಕಾಮಗಾರಿಗೆ ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ. ಕಾಮಗಾರಿ ಪೂರ್ಣಗೊಂಡಲ್ಲಿ ಯಾವುದೆ ಅಡೆತಡೆ ಇಲ್ಲದೆ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಸಂಚರಿಸಲು ಅನುಕೂಲವಾಗಲಿದೆ. ಆದಷ್ಟು ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲಿ ಎಂದ ಸ್ಥಳೀಯ ಮುಖಂಡರು ಆಶಯ ವ್ಯಕ್ತಪಡಿಸಿದ್ದಾರೆ.

18 ತಿಂಗಳ ಒಳಗಾಗಿ ಕಾಮಗಾರಿ ಮಾಡಲು ಸೂಚಿಸಿದ್ದೇನೆ. ಕರ್ತೋಜಿಯಲ್ಲಿ ಭೂಮಿಯೇ ಹುಬ್ಬಿ ಬರುತ್ತದೆ. ಅದಕ್ಕೆ ಸರಿಯಾದ ಯೋಜನೆ ರೂಪಿಸಿ ತಡೆಗೋಡೆ ಮಾಡಲಾಗುವುದು. ಹೆದ್ದಾರಿ ಎಂಜಿನಿಯರ್ಸ್ ಈಗಾಗಲೇ ಅದಕ್ಕೆ ಸೂಕ್ತ ಯೋಜನೆ ರೂಪಿಸಲಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.

YouTube video player