Asianet Suvarna News Asianet Suvarna News

ಇಂಡಿ: ಕೆರೆಗಳ ಒಡಲು ತುಂಬಿದ ಕೃಷ್ಣೆಯ ನೀರು

ಅಧಿವೇಶನದಲ್ಲಿ ಧ್ವನಿ ಎತ್ತಿ ಈ ಭಾಗದ ಕೆರೆಗಳಿಗೆ ನೀರುಣಿಸುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ

Krishna River Water Fills the Lakes at Indi in Vijayapura grg
Author
First Published Dec 14, 2022, 1:00 PM IST

ಖಾಜು ಸಿಂಗೆಗೋಳ

ಇಂಡಿ(ಡಿ.14):  ಪ್ರತಿವರ್ಷ ಜನರು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಇತ್ತು. ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್‌ ಮೂಲಕ ನೀರು ಹರಿಸುತ್ತಿದ್ದರು. ದನಕರುಗಳು ಬೇಸಿಗೆ ವೇಳೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಇಂತಹ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಿ ಈ ಭಾಗದ ಕೆರೆಗಳಿಗೆ ನೀರುಣಿಸುವ ಮೂಲಕ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

ಬಿಜೆಪಿ ಸರ್ಕಾರವಿದ್ದರೂ ಜನಪರವಾಗಿ ಕೆಲಸ ಮಾಡುವ ಮೂಲಕ .100.49 ಕೋಟಿ ವೆಚ್ಚದ ಕೆರೆ ತುಂಬಿಸುವ ಯೋಜನೆಗಳನ್ನು ಕ್ಷೇತ್ರಕ್ಕೆ ತಂದು ಜನರ, ರೈತರ ಆಶಯಗಳನ್ನು ಈಡೇರಿಸಿದ್ದಾರೆ ಶಾಸಕರು. ಈ ಮೂಲಕ ಕ್ಷೇತ್ರದ ಜನರು ಕೂಡ ಈಗ ಮಂದಸ್ಮಿತರಾಗಿದ್ದಾರೆ. ಮುಳವಾಡ ಏತ ನೀರಾವರಿ ಹಂತ-3ರ ಅಡಿಯಲ್ಲಿ ಬರುವ ತಿಡಗುಂದಿ ಶಾಖಾ ಕಾಲುವೆಯ 56ಕಿಮೀಯಿಂದ 66ರವರೆಗಿನ ಕಾಮಗಾರಿಯ ಮುಖಾಂತರ ರಾಜನಾಳ (ಅಥರ್ಗಾ), ತಡವಲಗಾ ಹಾಗೂ ಹಂಜಗಿ ಕೆರೆಗಳನ್ನು ತುಂಬಿಸುವ .100.49 ಕೋಟಿ ವೆಚ್ಚದ ಯೋಜನೆ ಯಶಸ್ವಿಯಾಗಿದೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ, ಶಾಸಕ ಯಶವಂತರಾಯಗೌಡ ಪಾಟೀಲ ಅವರ ವಿಶೇಷ ಕಾಳಜಿಯಿಂದ 3 ಕೆರೆಗಳಿಗೆ ಕೃಷ್ಣೆ ಹರಿದಿದ್ದಾಳೆ.

ಕುಟುಂಬ ರಾಜಕಾರಣಕ್ಕೆ ಬಿಜೆಪಿಯಲ್ಲಿ ಬ್ರೇಕ್‌ ಬೀಳಲಿದೆ: ಯತ್ನಾಳ

ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಕ ಇಂಡಿ ತಾಲೂಕಿನ ಅಥರ್ಗಾ, ಮಿಂಚನಾಳ, ಲಿಂದಹಳ್ಳಿ, ನಿಂಬಾಳ ಕೆಡಿ, ಚವಡಿಹಾಳ ಸುತ್ತಮುತ್ತಲಿನ ರಾಜನಾಳ, ತಡವಲಗಾ, ಹಂಜಗಿ ಕೆರೆಗಳಿಗೆ ಕೃಷ್ಣೆ ಆಗಮನವಾಗಿದ್ದು, ಎಲ್ಲ ಕೆರೆಗಳು ಭರ್ತಿಯಾಗಿವೆ. ಈಗ ಉಳಿದಿರುವುದು ಸಣ್ಣ ಪ್ರಮಾಣದ ಕೆರೆ, ಹಳ್ಳ, ಕೊಳ್ಳಗಳು ಮಾತ್ರ. ತಿಡಗುಂದಿ ಶಾಖಾ ಕಾಲುವೆಯ ಕಿಮೀ 56ರ ನಂತರ ಗುರುತ್ವಾಕರ್ಷಣೆ ಎಂ.ಎಸ್‌.ಪೈಪ್‌ ವಿತರಣೆ ಜಾಲದ ಮೂಲಕ ಕೆರೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆಯಿಂದ ಸುಮಾರು 14,500 ಹೆ.ಪ್ರದೇಶ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.

ಇಂಡಿ ತಾಲೂಕಿನ ರಾಜನಾಳ, ಅಥರ್ಗಾ, ಮಿಂಚನಾಳ, ಲಿಂಗದಹಳ್ಳಿ, ಗಣವಲಗಾ, ನಿಂಬಾಳ ಬಿಕೆ, ತೆನ್ನಿಹಳ್ಳಿ,ಬೋಳೆಗಾಂವ, ಹಂಜಗಿ, ರೂಗಿ, ಇಂಡಿ, ಚಿಕ್ಕಬೇವನೂರ, ಚವಡಿಹಾಳ, ಬಬಲಾದ, ಚೋರಗಿ ಸೇರಿ 15 ಗ್ರಾಮಗಳು ನೀರಾವರಿಗೆ ಒಳಪಡುತ್ತವೆ. ತಾಲೂಕಿನ ವಿವಿಧ ಕೆರೆಗಳಿಗೆ ನೀರು ತುಂಬಿಸಿದ್ದ ಆಯಾ ಭಾಗದ ರೈತರಿಗೆ, ಜನ-ಜಾನುವಾರುಗಳಿಗೆ ವರದಾನವಾಗಿದೆ.

ಹಂಜಗಿ ಕೆರೆ:

ತಾಲೂಕಿನ ಹಂಜಗಿ ಕೆರೆ ಅಂದಾಜು 640 ಎಕರೆ ವಿಸ್ತಾರವಾಗಿದ್ದು, ಸುಮಾರು 70 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಈ ಕೆರೆ 14 ವರ್ಷದ ಬಳಿಕ ಇಂದು ಭರ್ತಿಯಾಗಿದೆ. ಈ ಕೆರೆಯ ಮೂಲಕವೇ ತಾಲೂಕಿನ 33 ಗ್ರಾಮಗಳಿಗೆ ಅನುಕೂಲವಾಗುವ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೂ ಅನುಕೂಲವಾಗಿದೆ ಎನ್ನುತ್ತಾರೆ ಹಂಜಗಿ ಗ್ರಾಮದ ಮುಖಂಡ, ರೈತ ಮುತ್ತಪ್ಪ ಪೋತೆ.

ರಾಜನಾಳ (ಅಥರ್ಗಾ) ಕೆರೆ:

ಈ ಕೆರೆ 450 ಎಕರೆ ವಿಸ್ತಾರ ಹೊಂದಿದ್ದು,ಸುಮಾರು 35 ಎಂಸಿಎಫ್‌ಟಿ ನೀರು ಸಂಗ್ರಹವಾಗುವ ಸಾಮರ್ಥ್ಯ ಹೊಂದಿದೆ. ರಾಜ್ಯ ಬಿಜೆಪಿ ಸರ್ಕಾರ .100.49 ಅನುದಾನ ನೀಡಿ, ಕೆರೆಗಳನ್ನು ತುಂಬಿಸಿದ್ದರಿಂದ ಅಥರ್ಗಾ ಸುತ್ತಮುತ್ತಲಿನ ರೈತರಿಗೆ ತುಂಬಾ ಅನುಕೂಲವಾಗಿದೆ. ಕೆರೆಗಳಿಗೆ ನೀರು ತುಂಬಿಸಲು ಶ್ರಮಿಸಿದ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ, ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಅಥರ್ಗಾ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎನ್ನುತ್ತಾರೆ ಅಥರ್ಗಾ ಗ್ರಾಮದ ತಾಪಂ ಸದಸ್ಯ ಗಣಪತಿ ಬಾಣಿಕೋಲ.

ತಡವಲಗಾ ಕೆರೆ:

ಈ ಕೆರೆ 2018ರಲ್ಲಿ ಮಹಾಮಳೆಯಿಂದ ಭರ್ತಿಯಾಗಿದ್ದು, ನಂತರದ ದಿನದಲ್ಲಿ ಬತ್ತಿಹೋಗಿತ್ತು. ಸಧ್ಯ ಕೆರೆಗೆ ನೀರು ಬಂದಿರುವುದರಿಂದ ಈ ಭಾಗದಲ್ಲಿ ಮೊದಲಿನಿಂದಲೂ ಪ್ರಸಿದ್ಧಿ ಪಡೆದಿರುವ ಲಿಂಬೆ ಬೆಳೆಗಾರರಿಗೆ, ಕುಡಿಯುವ ನೀರಿಗೆ ಅನುಕೂಲವಾಗಿದೆ. ಸುಮಾರು 360 ಎಕರೆ ಪ್ರದೇಶದಲ್ಲಿರುವ ಈ ಕೆರೆಯಲ್ಲಿ 50 ಎಂಸಿಎಫ್‌ಟಿ ನೀರು ಸಂಗ್ರಹವಾಗುತ್ತದೆ. ಸಧ್ಯ ಶಾಸಕ ಯಶವಂತರಾಯಗೌಡ ಪಾಟೀಲ ಅವರ ವಿಶೇಷ ಕಾಳಜಿಯಿಂದ ಸರ್ಕಾರದ ಮೇಲೆ ಒತ್ತಡ ಹೇರಿ ಕೆರೆಗೆ ನೀರು ಹರಿಸಿದ್ದಾರೆ ಎನ್ನುತ್ತಾರೆ ತಡವಲಗಾ ಗ್ರಾಮದ ಅಶೋಕ ಮಿರ್ಜಿ.

ಹೋರಾಟದ ಹಾದಿ

ಇಂಡಿ ತಾಲೂಕಿನ ಎಲ್ಲ ಕೆರೆಗಳು ತುಂಬಿಸಬೇಕು. ನೀರಾವರಿ ಆಗದ ಪ್ರದೇಶ ನೀರಾವರಿಗೆ ಒಳಪಡಿಸಲು ಸರ್ಕಾರ ಯೋಜನೆ ರೂಪಿಸಿ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸದನದಲ್ಲಿ ಧ್ವನಿ ಎತ್ತುವ ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ಅಲ್ಲದೆ ಝಳಕಿಯಲ್ಲಿ ರೈತರು, ಇಂಡಿಯಲ್ಲಿ ಜೆಡಿಎಸ್‌ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ, ರಕ್ತದ ಮೂಲಕ ಪತ್ರ ಚಳವಳಿ, ಹೆದ್ದಾರಿ ತಡೆದು ಪ್ರತಿಭಟನೆ ಮಾಡಿ ಸರ್ಕಾರದ ಮೇಲೆ ಒತ್ತಡ ಹೆರಿದ್ದರು.

ಅನುದಾನ ಒದಗಿಸಿದ ಸರ್ಕಾರಕ್ಕೆ ಧನ್ಯವಾದ

ಸದಾ ಬರಗಾಲದಿಂದ ತತ್ತರಿಸಿ ಹೋಗಿರುವ ಇಂಡಿ ಭಾಗ ಸಂಪೂರ್ಣ ನೀರಾವರಿ ಆಗಬೇಕು. ಈ ಭಾಗದ ಕೆರೆಗಳು ತುಂಬಬೇಕು ಎಂಬುದು ನನ್ನ ಆಸೆಯಾಗಿದೆ. ಈಗಾಗಲೇ ತಾಲೂಕಿನ ದೊಡ್ಡ ಕೆರೆಗಳು ಭರ್ತಿಯಾಗಿವೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಂಡರೆ ಅನುಕೂಲ ಆಗುತ್ತದೆ. ಅದಕ್ಕೂ ಶೀಘ್ರದಲ್ಲಿ ಚಾಲನೆ ದೊರೆಯಲಿದೆ.

ಸರ್ಕಾರದಿಂದ 10 ಕೋಟಿ ಬಂದಿದ್ದು ಮಠದ ಅಭಿವೃದ್ಧಿಗೆ: ವಚನಾನಂದ ಶ್ರೀ

ಹೊರ್ತಿ, ತಡವಲಗಾ, ಹಂಜಗಿ, ಅಥರ್ಗಾ ಗ್ರಾಮದ ರೈತರು, ಜನರು ಬೇಸಿಗೆಯಲ್ಲಿ ಕುಡಿವ ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದರು. ಬೆಳೆಗಳಿಗೆ ಟ್ಯಾಂಕರ್‌ ಮೂಲಕ ನೀರು ಹಾಯಿಸಿ, ಬೆಳೆ ಉಳಿಸಿಕೊಳ್ಳುತ್ತಿರುವುದು ಕಂಡಿದ್ದೇನೆ. ರೈತರ ನೋವು ಅರಿತು ಈ ಭಾಗದ ಕೆರೆಗಳನ್ನು ತುಂಬಿಸಬೇಕು. ತಾಲೂಕಿನ ಎಲ್ಲ ಪ್ರದೇಶ ನೀರಾವರಿಗೆ ಒಳಪಡಿಸಲು ಪಣತೊಟ್ಟು ಸದನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ.

ಮೂರು ಕೆರೆಗಳು ತುಂಬಲು ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿ ಕೆರೆಗೆ ನೀರು ತುಂಬಿಸಲಾಗಿದೆ. ಈ ಯೋಜನೆಗೆ ಅನುದಾನ ಒದಗಿಸಿ, ಕೆರೆಗೆ ನೀರು ತುಂಬಲು ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ ಅವರಿಗೆ ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕಾಲಮಿತಿಯೊಳಗೆ ಕೆರೆಗಳನ್ನು ತುಂಬುವ ಕಾರ್ಯ ನಡೆದಿರುವುದು ಸಂತಸ ತಂದಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದ್ದಾರೆ.
 

Follow Us:
Download App:
  • android
  • ios