ಕುಟುಂಬ ರಾಜಕಾರಣಕ್ಕೆ ಬಿಜೆಪಿಯಲ್ಲಿ ಬ್ರೇಕ್ ಬೀಳಲಿದೆ: ಯತ್ನಾಳ
ಈಗ ಸಚಿವ ಸಂಪುಟ ವಿಸ್ತರಣೆ ಮಾಡಿ ಪ್ರಯೋಜನವೇನು? ಈಗ ಸಂಪುಟ ವಿಸ್ತರಣೆ ಯಾರಿಗೂ ಬೇಕಾಗಿಲ್ಲ. ಎಲ್ಲರೂ ಹೊಸ ಸರ್ಕಾರದಲ್ಲಿ ಮಂತ್ರಿಯಾಗಬೇಕು ಎಂದು ಸುಮ್ಮನಿದ್ದಾರೆ. ಚುನಾವಣೆಗೆ ಮೂರ್ನಾಲ್ಕು ತಿಂಗಳಿರುವಾಗ ಸಂಪುಟ ವಿಸ್ತರಣೆ ಮಾಡಿ ಪ್ರಯೋಜನವಿಲ್ಲ ಎಂದ ಯತ್ನಾಳ
ಬೆಳಗಾವಿ(ಡಿ.13): ಚುನಾವಣೆಗೆ ನಾಲ್ಕು ತಿಂಗಳಿರುವಾಗ ರಾಜ್ಯ ಸಂಪುಟ ವಿಸ್ತರಣೆ ಯಾರಿಗೂ ಬೇಕಾಗಿಲ್ಲ, ಎಲ್ಲಾ ಖಾತೆಯನ್ನೂ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಇಟ್ಟುಕೊಳ್ಳಲಿ. ಈಗ ಸಚಿವರಾಗಿ ಏನು ಅಭಿವೃದ್ಧಿ ಮಾಡುತ್ತಾರೆ. ಈಗ ಮಂತ್ರಿಯಾಗಲು ಯಾರಿಗೂ ಆಸಕ್ತಿ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗ ಸಚಿವ ಸಂಪುಟ ವಿಸ್ತರಣೆ ಮಾಡಿ ಪ್ರಯೋಜನವೇನು? ಈಗ ಸಂಪುಟ ವಿಸ್ತರಣೆ ಯಾರಿಗೂ ಬೇಕಾಗಿಲ್ಲ. ಎಲ್ಲರೂ ಹೊಸ ಸರ್ಕಾರದಲ್ಲಿ ಮಂತ್ರಿಯಾಗಬೇಕು ಎಂದು ಸುಮ್ಮನಿದ್ದಾರೆ. ಚುನಾವಣೆಗೆ ಮೂರ್ನಾಲ್ಕು ತಿಂಗಳಿರುವಾಗ ಸಂಪುಟ ವಿಸ್ತರಣೆ ಮಾಡಿ ಪ್ರಯೋಜನವಿಲ್ಲ ಎಂದರು.
ಬೆಳಗಾವಿ: ಬಿಜೆಪಿ ಬ್ಲಾಕ್ ಅಧ್ಯಕ್ಷ ಗಾದಿಗೆ ಗುದ್ದಾಟ..!
ಇದೇ ವೇಳೆ ಈ ಬಾರಿ ರಾಜ್ಯ ಬಿಜೆಪಿಯಲ್ಲಿ ಹಲವು ಬದಲಾವಣೆಗಳು ಆಗಲಿವೆ. ಕುಟುಂಬ ರಾಜಕಾರಣಕ್ಕೆ ಬಿಜೆಪಿಯಲ್ಲಿ ಬ್ರೇಕ್ ಬೀಳಲಿದೆ. ಗುಜರಾತ್ ರೀತಿ ಇಲ್ಲಿಯೂ ಹೊಸಬರಿಗೆ ಟಿಕೆಟ್ ನೀಡಬೇಕು. ರಾಜ್ಯದಲ್ಲಿಯೂ ಕೆಲ ಬದಲಾವಣೆಯಾಗಲಿದೆ. ಯಾರ ವಿರುದ್ಧ ಆರೋಪವಿದೆಯೋ ಅಂತವರಿಗೆ ಚುನಾವಣೆ ಟಿಕೆಟ್ ಕೊಡಬಾರದು. ಒಂದೇ ಕುಟುಂಬದ ಎರಡು ಮೂರು ಜನರಿಗೆ ಟಿಕೆಟ್ ಸಿಗುವಂತಿಲ್ಲ. ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನೀಡುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಬೇಕಿದೆ. ಈ ನಿಟ್ಟಿನ ಚರ್ಚೆಯೂ ನಡೆದಿದೆ ಎಂದರು. ಇದೇ ವೇಳೆ ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಡಿ. 22ರಂದು ನಮ್ಮ ಸಮುದಾಯದ ಅಂತಿಮ ಹೋರಾಟ ಅಥವಾ ವಿಜಯೋತ್ಸವ ನಡೆಯಲಿದೆ. ಡಿ.19ರ ಗಡುವು ನಾವು ಕೊಟ್ಟಿದ್ದಲ್ಲ. ಸಿಎಂ ಬೊಮ್ಮಾಯಿ ಅವರು ಕೊಟ್ಟಿದ್ದು. ವಿಧಾನಸಭಾ ಚುನಾವಣೆ ಫೆಬ್ರವರಿಯಲ್ಲಿ ಆಗಲಿ, ಮೇ ನಲ್ಲಾಗಲಿ ನೀತಿ ಸಂಹಿತೆ ಜಾರಿಗೂ ಮುನ್ನವೆ ಮೀಸಲಾತಿ ಘೋಷಣೆಯಾಗಲಿ ಎಂದು ಹೇಳಿದರು.