ಸರ್ಕಾರದಿಂದ 10 ಕೋಟಿ ಬಂದಿದ್ದು ಮಠದ ಅಭಿವೃದ್ಧಿಗೆ: ವಚನಾನಂದ ಶ್ರೀ
ಬಿಜೆಪಿ ಸರ್ಕಾರದಿಂದ ಮಠದ ಅಭಿವೃದ್ಧಿಗೆ 10 ಕೋಟಿ ಬಂದಿದೆ. ಅದು ಮೀಸಲಾತಿ ಹೋರಾಟಕ್ಕೆ ನೀಡಿದ್ದಲ್ಲ. ಆದ್ದರಿಂದ ಮಠದ ದಾಖಲೆ ಬಿಡುಗಡೆಗೊಳಿಸುವವರು ಬಿಡುಗಡೆಗೊಳಿಸಲಿ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನೇರ ಸವಾಲು ಹಾಕಿದರು.
ವಿಜಯಪುರ (ಡಿ.12): ಬಿಜೆಪಿ ಸರ್ಕಾರದಿಂದ ಮಠದ ಅಭಿವೃದ್ಧಿಗೆ 10 ಕೋಟಿ ಬಂದಿದೆ. ಅದು ಮೀಸಲಾತಿ ಹೋರಾಟಕ್ಕೆ ನೀಡಿದ್ದಲ್ಲ. ಆದ್ದರಿಂದ ಮಠದ ದಾಖಲೆ ಬಿಡುಗಡೆಗೊಳಿಸುವವರು ಬಿಡುಗಡೆಗೊಳಿಸಲಿ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನೇರ ಸವಾಲು ಹಾಕಿದರು. ತಮ್ಮ ವಿರುದ್ಧ ಸರ್ಕಾರದಿಂದ ಹಣ ಪಡೆದ ಆರೋಪಕ್ಕೆ ಸಂಬಂಧಿಸಿ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2020ರಲ್ಲಿ ಸರ್ಕಾರ ಅನುದಾನ ನೀಡಿದೆ. ಆಗ ಈ ಮೀಸಲಾತಿ, ಪಾದಯಾತ್ರೆ ಇರಲಿಲ್ಲ. ನಾವು ಪೀಠಕ್ಕೆ ಬಂದಮೇಲೆ ಯಾವುದೇ ಹಣಕಾಸು ವ್ಯವಹಾರ ನಡೆಸಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದರು.
ಸ್ವಾಮೀಜಿಗಳು ಸಹ ಪ್ರಶ್ನೆಗೆ ಒಳಪಡಬೇಕು. ಚರ್ಚೆಗಳು ಆಗಬೇಕು. ನಾವು ಹೆದರುವ ಅವಶ್ಯಕತೆ ಇಲ್ಲ. ಮಠದ ಅಭಿವೃದ್ಧಿಗೆ, ವಿದ್ಯಾರ್ಥಿನಿಲಯಕ್ಕೆ ಅನುದಾನ ನೀಡಿದ್ದಾರೆ. ಅಲ್ಲದೇ, ಇದೆಲ್ಲ ಪಾರದರ್ಶಕವಾಗಿದೆ. ಬೇಕಾದರೆ ಆರ್‌ಟಿಐ ಅಡಿ ಮಾಹಿತಿ ಪಡೆಯಬಹುದು. ಬೇಕಾದರೆ ಅವರು ದಾಖಲೆ ಬಿಡುಗಡೆಗೊಳಿಸಲಿ ಎಂದ ಶ್ರೀಗಳು, ವಸಂತಋತು ಬಂದಾಗ ಕಾಗೆ ಯಾವುದು ಕೋಗಿಲೆ ಯಾವುದು ಎಂದು ಗೊತ್ತಾಗುತ್ತದೆ. ಶೀಘ್ರದಲ್ಲಿ ವಸಂತಋುತು ಬರಲಿದೆ. ಆಗ ವಾಸ್ತವ ಗೊತ್ತಾಗಲಿದೆ ಎಂದರು.
ಪಂಚಮಸಾಲಿ 2ಎ ಮೀಸಲಾತಿ: ಡಿಕೆಶಿ, ಸಿದ್ದು ಭೇಟಿಯಾದ ವಚನಾನಂದ ಶ್ರೀ
ಪಂಚಮಸಾಲಿ 2ಎ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ನಾವು ಗಡುವು ನೀಡಿಲ್ಲ. ನಮ್ಮದು ನಿರಂತರ ಹೋರಾಟವಾಗಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಬಹಿರಂಗ ಚರ್ಚೆ ನಡೆಸಲಾಗಿದೆ. ಬೊಮ್ಮಾಯಿ ಅವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ 2ಎ ಪಂಚಮಸಾಲಿ ಸಮುದಾಯದ ಮೀಸಲಾತಿ ಘೋಷಣೆ ಆಗಲಿದೆ. ಈಗಾಗಲೇ ವರದಿ ಸಿದ್ಧಗೊಂಡಿದ್ದು, ಸದನದಲ್ಲಿ ಮಂಡನೆಯಾಗಿ ಮೀಸಲಾತಿ ಘೋಷಣೆಯಾಗುವ ಭರವಸೆ ಇದೆ ಎಂದು ಹೇಳಿದರು.
ಪಂಚಮಸಾಲಿ ಪೀಠದ ಎರಡು ಬಣಗಳು ಪ್ರತ್ಯೇಕವಾಗಿ ಮೀಸಲಾತಿ ಘೋಷಣೆ ತಮ್ಮ ಪ್ರಯತ್ನದ ಫಲವೆಂದು ಬಿಂಬಿಸಿಕೊಳ್ಳಲು ಹೋರಾಡುತ್ತಿವೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2018ರಿಂದ ಇದು ಆರಂಭವಾಗಿದೆ. ಅದಕ್ಕೂ ಮೊದಲು ಯಾಕೆ ಆಗಿರಲಿಲ್ಲ ಎಂದು ಪ್ರಶ್ನಿಸಿ ನಾವು ಹೋರಾಟ ಆರಂಭಿಸಿದ್ದೇವೆ. ನಾವು ರಾಷ್ಟ್ರಮಟ್ಟದಲ್ಲಿ ಮೊದಲಿನಿಂದಲೂ ಯೋಗ, ಅಧ್ಯಾತ್ಮದಲ್ಲಿ ಇದ್ದೇವೆ. ಯಾರು ನಿಜವಾಗಿ ಹೋರಾಟ ಆರಂಭ ಮಾಡಿದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮ ಹೋರಾಟ ನಿರಂತರವಾಗಿ ಇದೆ. ವೀರಶೈವ ಮಹಾಸಭಾ ದಾವಣಗೆರೆಯಲ್ಲಿ ಮೂರು ದಿನಗಳ ಕಾಲ ಸಭೆ ಮಾಡಲಿದೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಪ್ರಾಣ ಬಿಟ್ಟೇವು, ಮೀಸಲಾತಿ ಬಿಡೆವು: ವಚನಾನಂದ ಶ್ರೀ
ಮೂರನೇ ಪೀಠ ಮೂರಾಬಟ್ಟೆಎಂಬುದು ಯತ್ನಾಳ ಮಾತಿಗೆ ಪ್ರತಿಕ್ರಿಯಿಸಿದ ಅವರು, ಬಾಯಿಗೆ ಬಂದಂತೆ ಮಾತನಾಡುವವರ ಬಗ್ಗೆ ಏನೂ ಮಾಡೋಕಾಗಲ್ಲ. ಅವರು ಮಾತಾಡುತ್ತಾ ಇರುತ್ತಾರೆ. ನಾವು ಬೈದವರೆನ್ನ ಬಂಧುಗಳೆಂಬೆ ಎಂಬ ಬಸವ ತತ್ವವನ್ನು ಪಾಲಿಸುತ್ತೇವೆ. ಯಾರೇನೇ ಅನ್ನಲಿ ನಾವು ನಮ್ಮ ಕೆಲಸ ಮಾಡುತ್ತಿರಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಲೂರ ಪೀಠದ ಮಹಾದೇವ ಶಿವಾಚಾರ್ಯರು, ಡಾ.ಸುರೇಶ ಬಿರಾದಾರ, ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಗುರುಶಾಂತ ನಿಡೋಣಿ, ರವಿ ಖಾನಾಪುರ ಮುಂತಾದವರು ಇದ್ದರು.