ಕೆ.ಆರ್.ಪೇಟೆ ತಾಲೂಕು ಕಚೇರಿಯಲ್ಲಿ ಪೌತಿ ಖಾತೆ ಬಗ್ಗೆ ವಿಚಾರಿಸಲು ಹೋದ ರೈತನನ್ನು ತಹಸೀಲ್ದಾರ್ ಮತ್ತು ಸಿಬ್ಬಂದಿ ಕೊಠಡಿಯಲ್ಲಿ ಕೂಡಿಹಾಕಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಧಿಕಾರಿಯ ನಡೆಗೆ ತೀವ್ರ ಟೀಕೆ ವ್ಯಕ್ತವಾಗಿದೆ.

ಕೆ.ಆರ್.ಪೇಟೆ(ಮಂಡ್ಯ) (ಜು.31): ಪೌತಿ ಖಾತೆ ಕುರಿತು ವಿಚಾರಿಸಲು ಕಂದಾಯ ಇಲಾಖೆ ಕಚೇರಿಗೆ ಹೋದ ರೈತನನ್ನು ತಹಸೀಲ್ದಾರ್ ಅವರು ಕಚೇರಿ ಕಾರಿಡಾರ್‌ನಿಂದ ಎಳೆದೊಯ್ದು ಕೊಠಡಿಯಲ್ಲಿ ಕೂಡಿಹಾಕಿ ಸುಮಾರು 1 ಗಂಟೆ ಬಂಧಿಸಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನಲ್ಲಿ ನಡೆದಿದೆ.

ಕಾರಿಡಾರ್‌ನಿಂದ ಎಳೆದೊಯ್ದು 1 ಗಂಟೆ ವೃದ್ಧನ ಸೆರೆ

ತಹಸೀಲ್ದಾರ್ ಮತ್ತು ಕಚೇರಿ ಸಿಬ್ಬಂದಿ ರೈತನನ್ನು ಕಾರಿಡಾರ್‌ನಿಂದ ನೂಕಿಕೊಂಡು ಕೊಠಡಿಗೆ ತಳ್ಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಹಸೀಲ್ದಾರ್ ಶ್ರೇಯಸ್ ಮತ್ತು ಕಚೇರಿ ಸಿಬ್ಬಂದಿ ನಡೆಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ತಾಲೂಕಿನ ಮಲ್ಕೋನಹಳ್ಳಿಯ ಅಣ್ಣಯ್ಯ ಬಿನ್ ಸಿದ್ದೇಗೌಡ ತಮ್ಮ ಗ್ರಾಮದ ರೈತ ಮಹಿಳೆಯ ಪೌತಿ ಖಾತೆ ಸಂಬಂಧ ಆಗಿರುವ ಬೆಳವಣಿಗೆಗಳ ಬಗ್ಗೆ ವಿಚಾರಿಸಲು ತಾಲೂಕು ಕಚೇರಿಗೆ ಹೋಗಿದ್ದಾಗ ತಹಸೀಲ್ದಾರ್ ಶ್ರೇಯಸ್, ಪೌತಿ ಖಾತೆ ಸಂಬಂಧ ಕೈಗೊಂಡಿರುವ ಕ್ರಮದ ಬಗ್ಗೆ ತಿಳಿಸುವ ಬದಲು ರೈತನನ್ನೇ ತರಾಟೆ ತೆಗೆದುಕೊಂಡಿದ್ದಾರೆ.

‘ನೀನು ಯಾರಿಗಾದರೂ ದೂರು ಕೊಡು ನನಗೆ ಉತ್ತರಿಸುವುದು ಗೊತ್ತಿಗೆ’ ಎಂದು ಹೇಳಿ ಸ್ಥಳದಲ್ಲಿದ್ದ ತಮ್ಮ ಅಧೀನ ಸಿಬ್ಬಂದಿ ಆರ್‌ಆರ್‌ಟಿಇ ಶಿರಸ್ತೇದಾರ್ ಅಸ್ಲಂ ಭಾಷ ಮತ್ತು ವಿಶ್ವನಾಥ್ ಎನ್ನುವವರ ಜೊತೆಗೂಡಿ ರೈತನನ್ನು ಕಚೇರಿ ಕಾರಿಡಾರ್‌ನಿಂದ ತಳ್ಳಿಕೊಂಡು ಶಿರಸ್ತೇದಾರ್ ಕೊಠಡಿಯಲ್ಲಿ ಕೂಡಿ ಹಾಕಿದ್ದಲ್ಲದೆ ಪೊಲೀಸರನ್ನು ಕರೆಸುವ ಬೆದರಿಕೆ ಹಾಕಿರುವ ವೀಡಿಯೋ ವೈರಲ್ ಆಗಿದೆ.