ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ 3 ತಿಂಗಳ ಕೂಸನ್ನು ದಾವಣಗೆರೆಯಿಂದ ಮಣಿಪಾಲಕ್ಕೆ ಝೀರೋ ಟ್ರಾಫಿಕ್‌ನಲ್ಲಿ ಸಾಗಿಸುವಾಗ ಆ್ಯಂಬುಲೆನ್ಸ್ ಟೈರ್ ಪಂಕ್ಚರ್ ಆಗಿದೆ. ತಕ್ಷಣ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ದಾವಣಗೆರೆ (ಜು.31): ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ 3 ತಿಂಗಳ ಕೂಸನ್ನು ತುರ್ತು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ನಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಸಾಗಿಸುವ ಪ್ರಯತ್ನ ಅರ್ಧದಲ್ಲಿಯೇ ವ್ಯರ್ಥವಾಗಿದೆ. ದಾವಣಗೆರೆ ಬಾಪೂಜಿ ಮಕ್ಕಳ ಆಸ್ಪತ್ರೆಯಿಂದ ಉಡುಪಿಯ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಗೆ ಗುರುವಾರ ರಾತ್ರಿ ಕಳುಹಿಸಿ ಕೊಡಲಾಯಿತಾದರೂ ಮಗು ಬದುಕುಳಿಯಲಿಲ್ಲ.
ಆ್ಯಂಬುಲೆನ್ಸ್ ಟೈರ್ ಪಂಕ್ಚರ್
ದಾವಣಗೆರೆ ಜಿಲ್ಲೆ ಹರಿಹರದ ಮೂಲದ ಪಲ್ಲವಿ ಅವರನ್ನು ಕೊಪ್ಪಳದ ಹನುಮೇಶ್ವರ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಯ 3 ತಿಂಗಳು 26 ದಿನದ ಅನ್ವಿಕಾಳಿಗೆ ವಿಪರೀತ ಜ್ವರ ಬಂದ ಹಿನ್ನೆಲೆಯಲ್ಲಿ ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶದ ಸೋಂಕು ಪತ್ತೆ ಆಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸಲಹೆ ನೀಡಿದ್ದರು. ಅದಕ್ಕಾಗಿ ಮಗುವನ್ನು ಆ್ಯಂಬುಲೆನ್ಸ್‌ನಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಕಳುಹಿಸಲು ನಿರ್ಧರಿಸಿ ದಾವಣಗೆರೆ, ಶಿವಮೊಗ್ಗ, ಉಡುಪಿ ಪೊಲೀಸರು ಟೊಂಕ ಕಟ್ಟಿ ವ್ಯವಸ್ಥೆ ಕೈಗೊಂಡಿದ್ದರು. ಅದರಂತೆ ವೈದ್ಯರ ತಂಡದೊಂದಿಗೆ ಹೋಗುವಾಗ ದಾವಣಗೆರೆಯ ಹೊನ್ನಾಳಿ ತಾಲೂಕಿನ ಚಿ.ಕಡದಕಟ್ಟೆ ಬಳಿ ಆ್ಯಂಬುಲೆನ್ಸ್ ಟೈರ್ ಪಂಕ್ಚರ್ ಆಯಿತು. ತಕ್ಷಣವೇ ಜೊತೆಯಲ್ಲಿದ್ದ ಪೊಲೀಸರು ಟಯರ್ ಬದಲಿಸಿದರು. ಈ ವೇಳೆ ಮಗುವಿನ ಪಲ್ಸ್ ರೇಟ್ ಕಡಿಮೆ ಆಗುತ್ತಿತ್ತು. ಇದನ್ನು ಗಮನಿಸಿದ ವೈದ್ಯರ ತಂಡ ಅತಿ ತುರ್ತು ಚಿಕ್ಸಿತ್ಸೆಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಯಿತು.
ವಿಶೇಷ ಆ್ಯಂಬುಲೆನ್ಸ್‌ನಲ್ಲೇ ಪುನಃ ಮಗುವಿನ ಶವ ಹರಿಹರಕ್ಕೆ
ಆದರೆ ಸರ್ಜಿ ಆಸ್ಪತ್ರೆಯಲ್ಲಿ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿತ್ತಾದರೂ ಮಗು ಬದುಕಲೇ ಇಲ್ಲ. ಮಗು ಕಳೆದುಕೊಂಡ ಹೆತ್ತೊಡಲು ಆಕ್ರಂದನ ಮುಗಿಲು ಮುಟ್ಟಿತ್ತು. ಮಗುವ ಪ್ರಾಣ ರಕ್ಷಣೆ ಮಾಡಲು ಹೊರಟಿದ್ದ ವಿಶೇಷ ಆ್ಯಂಬುಲೆನ್ಸ್‌ನಲ್ಲೇ ಪುನಃ ಮಗುವಿನ ಶವವನ್ನು ಹರಿಹರಕ್ಕೆ ಸಾಗಿಸಲಾಯಿತು.


