ಗುಂಡ್ಲುಪೇಟೆಯಲ್ಲಿ ಹುಲಿ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಅರಣ್ಯ ಸಿಬ್ಬಂದಿಯನ್ನು ರೈತರು ಬೋನಿನಲ್ಲಿ ಬಂಧಿಸಿ, ಜೀವಂತ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಐವರು ರೈತರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಗುಂಡ್ಲುಪೇಟೆ (ಸೆ.11): ಹುಲಿ ಪತ್ತೆಗೆ ಬಂದ ಅರಣ್ಯ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅಕ್ರಮವಾಗಿ ಬೋನಿನಲ್ಲಿ ಬಂಧನ ಮಾಡಿದ್ದಾರೆ. ಅಲ್ಲದೆ ಜೀವಂತ ಸುಟ್ಟು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಐದು ಮಂದಿ ರೈತರ ಮೇಲೆ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ವಿಶೇಷ ಹುಲಿ ಸಂರಕ್ಷಣಾ ದಳದ ಉಪ ವಲಯ ಅರಣ್ಯಾಧಿಕಾರಿಗಳಾದ ಜ್ಞಾನಶೇಖರ, ಕಾರ್ತಿಕ್‌ ಯಾದವ್‌, ವಿನಯ್‌ ಕುಮಾರ್‌ ಸೇರಿದಂತೆ ಎಡಿಎಸ್‌ ವಾಚರ್‌, ಬೀಟ್‌ ಫಾರೆಸ್ಟ್‌ ಗಾರ್ಡ್‌, ಪಿಸಿಪಿ ವಾಚರ್‌, ಕುಂದಕೆರೆ ವಲಯದ ಜೀಪು ಚಾಲಕ, ಎಸ್‌ಟಿಪಿಎಫ್‌ ಜೀಪು ಚಾಲಕ 13 ಮಂದಿ ಪೊಲೀಸರಿಗೆ ಬೊಮ್ಮಲಾಪುರ ಗ್ರಾಮದ ರಘು (ಎ-1),ಪ್ರಸಾದ್‌ (ಎ-2), ದೀಪು (ಎ.3), ಗಂಗಾಧರಸ್ವಾಮಿ (ಎ-4), ರೇವಣ್ಣ (ಎ-5)ರ ಮೇಲೆ ದೂರು ಸಲ್ಲಿಸಿದ್ದಾರೆ.

ಅವಾಚ್ಯವಾಗಿ ಬೈದು, ಜೀಪಿನ ಚಕ್ರದ ಗಾಳಿ ಬಿಟ್ಟಿದ್ದ ರೈತರು:

ಸೆ. 9ರ ಬೆಳಗ್ಗೆ 11.30 ಗಂಟೆಗೆ ಗಂಗಾಧರಸ್ವಾಮಿ ಜಮೀನಿನಲ್ಲಿ 13 ಮಂದಿ ದೂರುದಾರರು ಬಂದಾಗ ಮೇಲ್ಕಂಡ ಐವರು ನಮ್ಮ ಮೇಲೆ ಜೀಪು ತಡೆದರೂ ನಿಲ್ಲಿಸಲಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದರು. ಬಳಿಕ ಎರಡು ಜೀಪಿನ ಚಕ್ರದ ಗಾಳಿ ಬಿಟ್ಟರು. ನಂತರ ಹುಲಿ ಸೆರೆಗೆ ಇಡಲಾಗಿದ್ದ ಬೋನಿಗೆ ಬಳಿಗೆ ನಡೆಯಿರಿ ಎಂದು ತಳ್ಳಿಕೊಂಡು ಹೋದರು.

ಹುಲಿ ಹಿಡಿಯುವ ಬದಲು ನೀವೇ ಬೋನಿನಲ್ಲಿರಿ:

ಐದು ಜನರು ಸೇರಿಕೊಂಡು ನೀವು ಹುಲಿ ಹಿಡಿಯುವ ಬದಲು ನೀವೇ ಬೋನಿನಲ್ಲಿರಿ ಎಂದು ನಮ್ಮನ್ನೆಲ್ಲ ಬೋನಿಗೆ ತಳ್ಳಿ ಅರಣ್ಯ ಇಲಾಖೆ ಮೇಲಾಧಿಕಾರಿಗಳು ಬರುವವರೆಗೆ ಇರಿ ಎಂದು ಹೊರಗಿನಿಂದ ಲಾಕ್‌ ಮಾಡಿಕೊಂಡರು. ನಾನು ಬೋನಿನೊಳಗೆ ಇದ್ದಾಗ ಬೋನಿನ ಸುತ್ತಲೂ ಸೌದೆಗಳನ್ನು ತಂದು ಹಾಕಿ ನಿಮ್ಮನ್ನು ಜೀವಂತ ಸುಟ್ಟು ಹಾಕುತ್ತೇನೆ ಎಂದು ಕೂಗಾಡಿದರು. ಎಸಿಎಫ್‌ ಬರುವಷ್ಟರಲ್ಲಿ ಕೆಲವರು ಸ್ಥಳಕ್ಕೆ ಬಂದು ಬೋನಿನಿಂದ ಹೊರಗೆ ಬಿಟ್ಟರು. ಕರ್ತವ್ಯಕ್ಕೆ ಅಡ್ಡಿಪಡಿಸಿ, ಸರ್ಕಾರಿ ಜೀಪಿನ ಚಕ್ರದ ಗಾಳಿ ತೆಗೆದು,ಚಾಲಕರ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬಲವಂತವಾಗಿ ಬೋನಿಗೆ ಒಳಗೆ ಅಕ್ರಮ ಬಂಧನದಲ್ಲಿರಿಸಿ, ನಿಮ್ಮನ್ನು ಜೀವಂತವಾಗಿ ಸುಟ್ಟ ಹಾಕುವುದಾಗಿ ಸಾರ್ವಜನಿಕವಾಗಿ ಪ್ರಚೋದನೆ ಮಾಡಿದ್ದಾರೆ.

ಯಾವ್ಯಾವ ಸೆಕ್ಷನ್ ಅಡಿ ಕೇಸ್?

ದೂರಿನ ಆಧಾರದ ಮೇರೆಗೆ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್)ರ ಕಾಯ್ದೆ ಮತ್ತು ಕಲಂ ಅನ್ವಯ(ಯು/ಎಸ್-‌ 126 (2), 127(2), 189(2), 190, 191(2), 132, 351(3), 351(2), 352, (79) ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಗುಂಡ್ಲುಪೇಟೆ ಪೊಲೀಸರು ಐವರ ಬಂಧನಕ್ಕೆ ಬಲೆ ಬೀಸಿದ್ದಾರೆ.