ಪೂಜೆಯಿಂದ ಕೊರೋನಾ ಹೋಗೋದಾದ್ರೆ ವೈದ್ಯರು ಯಾಕೆ ಬೇಕು?: ಸತೀಶ್ ಜಾರಕಿಹೊಳಿ
* ಕೊರೋನಾ ಕಡಿಮೆಯಾದ್ರೆ ಕಾಂಗ್ರೆಸ್ ವತಿಯಿಂದ ಸನ್ಮಾನ
* ಕೋವಿಡ್ ಕಡಿಮೆ ಆದ್ರೆ ಹಂತ ಹಂತವಾಗಿ ಅನ್‌ಲಾಕ್ ಮಾಡಬೇಕು
* ಮೂರನೇ ಅಲೆ ಮುಂಜಾಗ್ರತಾ ಕ್ರಮ ಬಗ್ಗೆ ಡಿಸಿ ಜತೆ ಚರ್ಚೆ
ಬೆಳಗಾವಿ(ಮೇ.30): ಸಿಡಿ ಕೇಸ್‌ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕ್ಲೀನ್‌ಚಿಟ್ ಕೊಡುವುದರ ಬಗ್ಗೆ ಪೊಲೀಸರೇ ಅಂತಿಮವಾದ ನಿರ್ಧಾರ ಮಾಡಬೇಕು ಅಂತಾ ಮುಂಚೆಯೇ ಹೇಳಿದ್ದೇವೆ. ಈ ವಿಚಾರ ಬಗ್ಗೆಯೂ ನಮ್ಮ ಪಕ್ಷದ ವರಿಷ್ಠರು ಪತ್ರಿಕಾಗೋಷ್ಠಿ ಮಾಡಿದ್ದಾರೆ. ಸರ್ಕಾರಕ್ಕೆ ಏನು ಹೇಳಬೇಕೋ ಆ ಸಲಹೆಗಳನ್ನು ಕೊಟ್ಟಿದ್ದಾರೆ. ಆದರೆ ಅಂತಿಮವಾಗಿ ನ್ಯಾಯಾಲಯ, ತನಿಖಾ ತಂಡ ನಿರ್ಧಾರ ಮಾಡಬೇಕು. ಈಗಾಗಲೇ ನಮ್ಮ ಸಿಎಲ್‌ಪಿ ನಾಯಕರು, ಅಧ್ಯಕ್ಷರು ಮಾತನಾಡಿದ್ದಾರೆ. ಎಸ್‌ಐಟಿ ತಂಡಕ್ಕೆ, ಸರ್ಕಾರಕ್ಕೆ ಸಾಕಷ್ಟು ಸಲಹೆಗಳನ್ನ ಕೊಟ್ಟಿದ್ದಾರೆ. ಏನು ಆಗುತ್ತದೆ ಅಂತ ಕಾದು ನೋಡೋಣ, ಈಗ ಅಡ್ವಾನ್ಸ್ ಆಗಿ ಹೇಳಕ್ಕಾಗಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸಿಡಿ ಕೇಸ್‌ನಲ್ಲಿ ರಮೇಶ್ ಜಾರಕಿಹೊಳಿಗೆ ಕ್ಲೀನ್‌ಚಿಟ್ ಕೊಡ್ತಾರೆ ಎಂಬ ಚರ್ಚೆ ವಿಚಾರದ ಬಗ್ಗೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಪೊಲೀಸರೇ ಅಂತಿಮವಾಗಿ ನಿರ್ಧಾರ ಮಾಡಬೇಕು ಅಂತಾ ಮುಂಚೆಯೇ ಹೇಳಿದ್ದೇವೆ. ರಮೇಶ್‌ಗೆ ಕ್ಲೀನ್‌ಚಿಟ್ ನೀಡುತ್ತಾರೆ ಅಂತಾ ಯಾರು ಹೇಳಿದ್ದಾರೆ? ವರದಿ ಬಂದ ಬಳಿಕ ಪಕ್ಷದ ವತಿಯಿಂದ ಏನು ಹೇಳಬೇಕೋ ಅದನ್ನ ಹೇಳೇ ಹೇಳುತ್ತೇವೆ ಎಂದು ತಿಳಿಸಿದ್ದಾರೆ.
ಬೆಳಗಾವಿ: ಕೋವಿಡ್ ನಿಯಮ ಉಲ್ಲಂಘಿಸಿ ಹೋಮ-ಹವನ, ಶಾಸಕ ಬಿಟ್ಟು ನಾಲ್ವರ ವಿರುದ್ಧ FIR
ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಇದಕ್ಕೆ 2023ರ ಮೇನಲ್ಲಿ ಉತ್ತರ ಸಿಗುತ್ತೆ, ಅಲ್ಲಿಯವರೆಗೆ ವೇಟ್ ಮಾಡಿ ಎಂದಷ್ಟೇ ಹೇಳಿದ್ದಾರೆ. ಜೂನ್ 7 ರ ಬಳಿಕ ಮತ್ತೊಮ್ಮೆ ಬೆಳಗಾವಿ ಜಿಲ್ಲಾಧಿಕಾರಿಯನ್ನ ಭೇಟಿಯಾಗುತ್ತೇವೆ. ಮೂರನೇ ಅಲೆ ಮುಂಜಾಗ್ರತಾ ಕ್ರಮ ಬಗ್ಗೆ ಚರ್ಚೆ ಮಾಡುತ್ತೇವೆ. ಜೂನ್ 7ರ ಬಳಿಕ ಲಾಕ್‌ಡೌನ್ ವಿಸ್ತರಣೆ ಬಗ್ಗೆ ನಮ್ಮ ಸಲಹೆ ಏನೂ ಹೇಳಿಲ್ಲ. ಜೂ.7ರ ಬಳಿಕ ಕೋವಿಡ್ ಕಡಿಮೆ ಆದ್ರೆ ಹಂತ ಹಂತವಾಗಿ ಅನ್‌ಲಾಕ್ ಮಾಡಬೇಕು. ಎಲ್ಲವೂ ಒಮ್ಮೆಯೂ ಓಪನ್ ಮಾಡಿದ್ರೆ ಸಮಸ್ಯೆ ಆಗಲಿದೆ. ಸ್ಟೆಪ್ ವೈಸ್ ಮಾಡಿ ಜೂ. 30ರೊಳಗೆ ಎಲ್ಲಾ ನಾರ್ಮಲ್ ಆಗುವಂತೆ ಮಾಡಿ ಎಂಬುದು ನಮ್ಮ ಸಲಹೆಯಾಗಿದೆ. ಈಗಲೂ ಸಹ ಮರಣ ಪ್ರಮಾಣ ಜಾಸ್ತಿ ಇದೆ ಎಂದು ಹೇಳಿದ್ದಾರೆ.
ಪೂಜೆಯಿಂದ ಕೊರೋನಾ ಹೋದ್ರೆ ನಾವು ಸ್ವಾಗತ
ಕೋವಿಡ್ ನಿಯಮ ಉಲ್ಲಂಘಿಸಿದ ಹೋಮ ಹವನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಭಯ್ ಪಾಟೀಲ್ ಬಿಟ್ಟು ನಾಲ್ವರ ವಿರುದ್ಧ ಕೇಸ್ ದಾಖಲಾದ ವಿಚಾರ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಬಿಜೆಪಿಯಲ್ಲಿ ಇದೇನು ಹೊಸದೇನಲ್ಲ. ಹೋಮ ಹವನದಿಂದ ಕೋವಿಡ್ ಕಡಿಮೆ ಆಗುತ್ತದೆ ಅಂತಾ ವೈಜ್ಞಾನಿಕವಾಗಿ ಸಾಬೀತು ಪಡಿಸಲಿ. ಹೋಮ ಹವನ ಪೂಜೆಯಿಂದ ಕೊರೋನಾ ಹೋದ್ರೆ ನಾವು ಸ್ವಾಗತ ಮಾಡ್ತೇವೆ. ಹಾಗೇನಾದರೂ ಕೊರೋನಾ ಕಡಿಮೆಯಾದ್ರೆ ಕಾಂಗ್ರೆಸ್ ವತಿಯಿಂದ ಸನ್ಮಾನ ಮಾಡುತ್ತೇವೆ. ಪೂಜೆಯಿಂದ ಕೊರೋನಾ ಹೋಗೋದಾದ್ರೆ ಎಂಬಿಬಿಎಸ್ ವೈದ್ಯರು ಯಾಕೆ ಬೇಕು? ಎಂದು ಸತೀಶ್ ಜಾರಕಿಹೊಳಿ ಪ್ರಶ್ನೆ ಮಾಡಿದ್ದಾರೆ.