ಚಿಕ್ಕಮಗಳೂರಿನಲ್ಲಿ ಬಡ ಕಾರ್ಮಿಕರು, ಗೃಹಿಣಿಯರಿಗೆ ಸಾಲದ ಆಮಿಷವೊಡ್ಡಿ ಅವರ ಬ್ಯಾಂಕ್ ಖಾತೆಗಳನ್ನು ತೆರೆದು ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಅಂತರರಾಷ್ಟ್ರೀಯ ಜಾಲವೊಂದು ಬಯಲಾಗಿದೆ. ದುಬೈ ನಂಟು ಹೊಂದಿರುವ ಈ ಹಗರಣದಲ್ಲಿ ಅಮಾಯಕರು ಸಂಕಷ್ಟಕ್ಕೆ ಸಿಲುಕಿದ್ದು, ಪೊಲೀಸರು ಹಲವರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ವರದಿ- ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜು.14): ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬಡವರ ಹೆಸರನ್ನೇ ಬಂಡವಾಳ ಮಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದ ಕೋಟ್ಯಂತರ ರೂಪಾಯಿ ಮಹಾ ಹಗರಣವೊಂದು ಬಯಲಿಗೆ ಬಂದಿದೆ. ದಿನಗೂಲಿ ಮಾಡುವ ಕಾರ್ಮಿಕರು, ಆಟೋ ಡ್ರೈವರ್ಗಳು ಹಾಗೂ ಗೃಹಿಣಿಯರ ಬ್ಯಾಂಕ್ ಖಾತೆಗಳನ್ನೇ ಟಾರ್ಗೆಟ್ ಮಾಡಿರುವ ಸೈಬರ್ ಕಿಡಿಗೇಡಿಗಳು, ಅವರಿಗೆ ಗೊತ್ತಿಲ್ಲದಂತೆ ಕೋಟಿ ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ. ಲೋನ್ ಕೊಡಿಸುವುದಾಗಿ ಮತ್ತು ಹಣದ ಆಸೆ ತೋರಿಸಿ ಆಧಾರ್ ಕಾರ್ಡ್ ಪಡೆದು ಅಧಿಕೃತವಾಗಿಯೇ ಬ್ಯಾಂಕ್ ಅಕೌಂಟ್ ಓಪನ್ ಮಾಡಿಸಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ದುಬೈ ಲಿಂಕ್ ಹೊಂದಿರುವ ಈ ಬೃಹತ್ ಜಾಲದ ಕರಾಳ ಮುಖದ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಪೌರ ಕಾರ್ಮಿಕನ ಖಾತೆಯಲ್ಲಿ 34 ಲಕ್ಷ ರೂ.
ಗೃಹಿಣಿ ಹೆಸರಲ್ಲಿ 29 ಲಕ್ಷ ರೂಪಾಯಿ, ಆಟೋ ಡ್ರೈವರ್ ಹೆಸರಲ್ಲಿ 26 ಲಕ್ಷ ರೂಪಾಯಿ, ಪೌರ ಕಾರ್ಮಿಕನ ಹೆಸರಲ್ಲಿ 34 ಲಕ್ಷ ರೂಪಾಯಿ. ಇದು ಚಿಕ್ಕಮಗಳೂರಿನಲ್ಲಿ ಬಡವರ ಬ್ಯಾಂಕ್ ಖಾತೆಗಳಲ್ಲಿ ಒಂದೇ ತಿಂಗಳಲ್ಲಿ ನಡೆದಿರುವ ಅಕ್ರಮ ಡಿಜಿಟಲ್ ಕರಾಮತ್ತು. ಏನೂ ಅರಿಯದ ನಿರಪರಾಧಿ ಬಡ ಯುವಕರು ಮತ್ತು ಕಾರ್ಮಿಕರಿಗೆ ಲೋನ್ ಕೊಡಿಸುವ ಆಮಿಷ ಒಡ್ಡಿ, ಕೆಲವೇ ಕೆಲವು ರೂಪಾಯಿಗಳ ಕಮಿಷನ್ ಆಸೆ ತೋರಿಸಿ ಆಧಾರ್ ಕಾರ್ಡ್ಗಳನ್ನು ಸಂಗ್ರಹಿಸಲಾಗಿದೆ. ಬಳಿಕ ಬ್ಯಾಂಕ್ ಸಿಬ್ಬಂದಿಗಳ ನೆರವಿನೊಂದಿಗೆ ಅಧಿಕೃತವಾಗಿಯೇ ಹತ್ತಾರು ಬ್ಯಾಂಕ್ ಖಾತೆಗಳನ್ನು ತೆರೆದು, ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್‌ಗಳಿಗಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹಣದ ಆಸೆಗೆ ಬಿದ್ದ ಕೆಲ ಯುವಕರು ಒಬ್ಬೊಬ್ಬರೇ 50ಕ್ಕೂ ಹೆಚ್ಚು ಖಾತೆಗಳನ್ನು ಮಾಡಿಸಿಕೊಟ್ಟಿದ್ದು, ಒಂದು ಖಾತೆಯಲ್ಲಿ ಬರೋಬ್ಬರಿ 20 ರಿಂದ 30 ಲಕ್ಷದವರೆಗೆ ವಹಿವಾಟು ನಡೆಸಲಾಗಿದೆ. ಹಗರಣದ ಅಸಲಿ ಕಥೆ ಗೊತ್ತಿಲ್ಲದ ರಾಜ್ಯದ ಸೈಬರ್ ಪೊಲೀಸರು ನೋಟೀಸ್ ಕೊಡುತ್ತಿದ್ದಂತೆ ಬಡ ಖಾತೆದಾರರು ಸದ್ಯ ಕಂಗಾಲಾಗಿದ್ದಾರೆ.
ರಾಷ್ಟ್ರ ಮಟ್ಟದ ಹಗರಣ
ಈ ಹಗರಣ ಕೇವಲ ಚಿಕ್ಕಮಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಪ್ರಕರಣ ಇಂಟರ್ ಸ್ಟೇಟ್ ಹಾಗೂ ಇಂಟರ್ ನ್ಯಾಷನಲ್ ಲೆವೆಲ್ ತಲುಪಿದೆ. ವಿವಿಧ ರಾಜ್ಯಗಳಲ್ಲಿ ಈ ಖಾತೆಗಳ ಮೂಲಕ ಸೈಬರ್ ವಂಚನೆ ನಡೆದಿದೆ. ಈಗಾಗಲೇ ಬಡವರ ಖಾತೆಗಳ ಲಿಂಕ್ ಹಿಡಿದು ಬರೋಬ್ಬರಿ 6 ರಾಜ್ಯಗಳ ಸೆನ್ ಪೊಲೀಸರು ಚಿಕ್ಕಮಗಳೂರಿನ ಬಡವರ ಮನೆ ಬಾಗಿಲಿಗೆ ಬಂದು ನಿಂತಿದ್ದಾರೆ. ತನಿಖೆ ತೀವ್ರಗೊಳ್ಳುತ್ತಿದ್ದಂತೆ ಬಡವರ ಎದೆ ಒಡೆದು ಹೋಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಸಿಬ್ಬಂದಿ ಒಳಗೊಂಡಂತೆ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಕೀಯ ಮುಖಂಡರ ನಂಟು
ಇನ್ನು ಬಂಧಿತರು ವಿಚಾರಣೆ ವೇಳೆ ನಗರಸಭೆಯ ಜೆಡಿಎಸ್ ಸದಸ್ಯ ಗೋಪಿ ಹೆಸರನ್ನು ಬಾಯಿಬಿಟ್ಟಿರುವುದು ಪ್ರಕರಣಕ್ಕೆ ರಾಜಕೀಯ ಟ್ವಿಸ್ಟ್ ನೀಡಿದೆ. ಈ ಮಹಾ ಹಗರಣದ ಸೂತ್ರಧಾರಿಗಳು ದುಬೈನಲ್ಲಿ ಕುಳಿತು ಇಡೀ ಜಾಲವನ್ನು ಆಪರೇಟ್ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದಾರೆ. ಕೆಲವರ ದಿಢೀರ್ ಆದಾಯದ ಮೂಲ ಹಾಗೂ ಬ್ಯಾಂಕ್ ಸಿಬ್ಬಂದಿಗಳ ಪಾತ್ರದ ಬಗ್ಗೆ ಸಮಗ್ರ ತನಿಖೆಯಾಗಬೇಕು. ವಿಧಾನಸೌಧದಲ್ಲಿ ಕೂತವರ ಕೈವಾಡದ ಬಗ್ಗೆಯೂ ಅನುಮಾನವಿದ್ದು, ಯಾವುದೇ ಪಕ್ಷದವರಾಗಿದ್ದರೂ ತಪ್ಪಿತಸ್ಥರನ್ನು ಬಿಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಸಿಬಿಐ ಹಾಗೂ ಇಡಿ ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು ನೀಡಲು ಸಿ.ಟಿ. ರವಿ ಮುಂದಾಗಿದ್ದಾರೆ.
ಒಟ್ಟಿನಲ್ಲಿ ಆಮಿಷಕ್ಕೆ ಬಲಿಯಾಗಿ ಬ್ಯಾಂಕ್ ಖಾತೆ, ಆಧಾರ್ ಕೊಟ್ಟ ಅಮಾಯಕರು ಈಗ ಜೈಲು ಪಾಲಾಗುವ ಭೀತಿಯಲ್ಲಿದ್ದಾರೆ. ದಿಢೀರ್ ಶ್ರೀಮಂತರಾಗಲು ಹೊರಟ ಸೂತ್ರಧಾರಿಗಳ ಅಂತರರಾಷ್ಟ್ರೀಯ ಜಾಲ ಈಗ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದ್ದು, ಮುಂದಿನ ತನಿಖೆಯಿಂದಷ್ಟೇ ದುಬೈ ಲಿಂಕ್‌ನ ಅಸಲಿ ಸತ್ಯ ಹೊರಬರಬೇಕಿದೆ.


