ಬಿಜೆಪಿಯ ಯಾವುದೇ ಶಾಸಕ ಕಾಂಗ್ರೆಸ್ ಕದ ತಟ್ಟುತ್ತಿಲ್ಲ: ಕೋಟ ಶ್ರೀನಿವಾಸ ಪೂಜಾರಿ
ಬಿಜೆಪಿಯ ಯಾವುದೇ ಶಾಸಕ ಕಾಂಗ್ರೆಸ್ ಕದ ತಟ್ಟುತ್ತಿಲ್ಲ, ಅವರು ಪಕ್ಷ ಬಿಟ್ಟು ಹೋಗುವಂತಹ ಯಾವುದೇ ಸಮಸ್ಯೆಗಳಿಲ್ಲ. ಆದರೆ ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವ ಮಾಹಿತಿಯ ಆಧಾರದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ, ತಮಗೇನೂ ಮಾಹಿತಿ ಇಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿ (ಆ.17): ಕಾಂಗ್ರೆಸ್ ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ್ದ ಗುತ್ತಿಗೆದಾರರ ಜೊತೆ ಸರ್ಕಾರ ಸಂಧಾನ ಮಾಡಿಕೊಂಡು, ಈಗ ಭ್ರಷ್ಟಾಚಾರ ನಡೆದೇ ಇಲ್ಲ ಎನ್ನುತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ನೂರಕ್ಕೆ ನೂರು ಸತ್ಯ. ಮಂತ್ರಿಗಳು ತಮ್ಮಲ್ಲಿ ಕಮಿಷನ್ ಕೇಳುತ್ತಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರರೇ ಬಹಿರಂಗವಾಗಿಯೇ ಹೇಳಿದ್ದಾರೆ. ಈಗ ಅದೇ ಗುತ್ತಿಗೆದಾರರು ಉದ್ವೇಗದಲ್ಲಿ ಹಾಗೆ ಹೇಳಿದ್ದು ಎಂದು ಹೇಳುತ್ತಿದ್ದಾರೆ.
ಇದರರ್ಥ ಗುತ್ತಿಗೆದಾರರು ಮತ್ತು ಮಂತ್ರಿಗಳ ನಡುವೆ ಸಂಧಾನ ಆಗಿದೆ. ಗುತ್ತಿಗೆದಾರರು ಹಾಗೆ ಹೇಳಿದಾಕ್ಷಣ ಸತ್ಯ ಸುಳ್ಳಾಗುವುದಿಲ್ಲ ಎಂದರು. ಕಾಂಗ್ರೆಸ್ ಸರ್ಕಾರ ಯಾವುದೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿಲ್ಲ, ಆದ್ದರಿಂದ ಕಮಿಷನ್‌ನ ಪ್ರಶ್ನೆಯೇ ಬರುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತಿಗೆ ಪ್ರತಿಕ್ರಿಯಿಸಿದ ಕೋಟ, ಹೊಸ ಯೋಜನೆಗಳು ಇಲ್ಲದಿದ್ದರೂ, ಹಿಂದಿನ ಸರ್ಕಾರದ ಮುಂದುವರಿದ ಯೋಜನೆಗಳಿವೆ. ಬಿಲ್ ಪಾವತಿ ಇದೆ. ಅದರಲ್ಲಿ ಖಂಡಿತಾ ಭ್ರಷ್ಟಾಚಾರ ನಡೆದಿದೆ, ಅದಕ್ಕೆ ಸರ್ಕಾರ ಉತ್ತರಿಸಲಿಕ್ಕೆ ತಡವರಿಸುತ್ತಿದೆ ಎಂದರು.
ಮಾಟ ಮಂತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಸೋಲಾಗಿದೆ: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ
ಕಾಂಗ್ರೆಸ್ ಕದ ತಟ್ಟುತ್ತಿಲ್ಲ: ಬಿಜೆಪಿಯ ಯಾವುದೇ ಶಾಸಕ ಕಾಂಗ್ರೆಸ್ ಕದ ತಟ್ಟುತ್ತಿಲ್ಲ, ಅವರು ಪಕ್ಷ ಬಿಟ್ಟು ಹೋಗುವಂತಹ ಯಾವುದೇ ಸಮಸ್ಯೆಗಳಿಲ್ಲ. ಆದರೆ ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವ ಮಾಹಿತಿಯ ಆಧಾರದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ, ತಮಗೇನೂ ಮಾಹಿತಿ ಇಲ್ಲ ಎಂದರು. ವಿಪಕ್ಷವಾಗಿ ಬಿಜೆಪಿ ದುರ್ಬಲವಾಗಿಲ್ಲ, ವಿಪಕ್ಷ ನಾಯಕರ ಆಯ್ಕೆ ಹೈಕಮಾಂಡ್‌ಗೆ ಬಿಟ್ಟವಿಷಯ, ಒಂದೆರಡು ದಿನಗಳಲ್ಲಿ ಆಯ್ಕೆ ಆಗಬಹುದು, ಆದರೂ ರಾಜಕೀಯ ಪಕ್ಷವಾಗಿ ಬಿಜೆಪಿ ಸರ್ಕಾರವನ್ನು ತುದಿಗಾಲಿನಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದೆ, ಮುಖ್ಯವಾಗಿ ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ ಎಂದು ಕೋಟ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತುಂಗಭದ್ರಾ ಕಾಲುವೆಗೆ ನ.30ರವರೆಗೆ ನೀರು: ಸಚಿವ ಶಿವರಾಜ ತಂಗಡಗಿ
3 ದಿನಗಳ ಅರಸು ಉತ್ಸವ ಮುಂದುವರಿಸಲು ಆಗ್ರಹ: ಬಿಜೆಪಿ ಸರ್ಕಾರ ದೇವರಾಜ ಅರಸು ಜಯಂತಿಯನ್ನು 3 ದಿನಗಳ ಕಾಲ ಅರಸು ಉತ್ಸವ ಎಂದು ಆಚರಿಸಿತ್ತು, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿಚಾರಸಂಕಿರಣಗಳನ್ನು ಏರ್ಪಡಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಾಮಾಜಿಕ ನ್ಯಾಯ ಒದಗಿಸಿದ ಅರಸು ಅವರ ಆದರ್ಶದಂತೆ ನಡೆದವರಿಗೆ ಪ್ರಶಸ್ತಿಗಳನ್ನೂ ನೀಡಿತ್ತು. ಇದನ್ನು ಮುಂದುವರಿಸುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಆದರೆ ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಮೌನ ವಹಿಸಿದೆ, ಯಾವುದೇ ಸ್ಪಂದನೆ ನೀಡಿಲ್ಲ ಎಂದರು. ಆ.20ರಂದು ಅರಸು ಜಯಂತಿಇದೆ. ಹಿಂ.ವ.ಗಳ ಬಗ್ಗೆ ಕಾಳಜಿ ಮಾತನಾಡುವ ಸಿದ್ದರಾಮಯ್ಯ ಅವರು ಅರಸು ಉತ್ಸವವನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮುಂದವರಿಸಬೇಕು. ಇದಕ್ಕೆ ಅನುದಾನದ ಕೊರತೆಯಾಗುವುದಿಲ್ಲ, ಇಚ್ಛಾಶಕ್ತಿಯ ಕೊರತೆಯಾಗಬಾರದಷ್ಟೇ ಎಂದು ಕೋಟ ಹೇಳಿದರು.