ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಎತ್ತೇಚ್ಚ ಮಳೆ ಸುರಿಯುವುದು ಗೊತ್ತೇ ಇದೆ. ವಾರ್ಷಿಕ 2700 ಮಿಲಿ ಮೀಟರ್ ಮಳೆಯಾಗುವ ಕೊಡಗಿನಲ್ಲಿ ಈ ಬಾರಿ ಇದುವರೆಗೆ ಕೇವಲ 700 ಮಿಲಿ ಮೀಟರ್ ಮಾತ್ರವೇ ಮಳೆಯಾಗಿದೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಡಗು (ಜು.14): ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಎತ್ತೇಚ್ಚ ಮಳೆ ಸುರಿಯುವುದು ಗೊತ್ತೇ ಇದೆ. ವಾರ್ಷಿಕ 2700 ಮಿಲಿ ಮೀಟರ್ ಮಳೆಯಾಗುವ ಕೊಡಗಿನಲ್ಲಿ ಈ ಬಾರಿ ಇದುವರೆಗೆ ಕೇವಲ 700 ಮಿಲಿ ಮೀಟರ್ ಮಾತ್ರವೇ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1678.99 ಮಿಲಿ ಮೀಟರ್ ಮಳೆಯಾಗಿತ್ತು. ಈಗ ಕೊರತೆ ಆಗಿರುವ ಮಳೆ ಅಷ್ಟೇ ಅಲ್ಲ ಮುಂದಿನ ಇಪ್ಪತ್ತು ದಿನಗಳ ಕಾಲ ಮಳೆಯ ತೀವ್ರ ಕೊರತೆ ಎದುರಾಗಲಿದೆ ಎಂದು ಕೆಎಸ್ಎಂಡಿಸಿ ಇಲಾಖೆ ಮಾಹಿತಿ ನೀಡಿರುವುದಾಗಿ ಕೊಡಗು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.

ಇದು ಕೊಡಗಿನ ಬೆಳೆಗಾರರು, ರೈತರು ಕಂಗಾಲಾಗುವಂತೆ ಮಾಡಿದೆ. ಸಾಮಾನ್ಯವಾಗಿ ಕೊಡಗು ಜಿಲ್ಲೆಯಲ್ಲಿ ಜೂನ್ ತಿಂಗಳ ಆರಂಭದಿಂದಲೇ ಮಳೆ ಶುರುವಾಗುತಿತ್ತು. ಆದರೆ ಈ ಬಾರಿ ಎಲ್ ನಿನೋ ಪರಿಣಾಮದಿಂದಾಗಿ ಜುಲೈ ತಿಂಗಳಲ್ಲಿ ಮಳೆ ಶುರುವಾಗಿತ್ತು. ತಡವಾಗಿಯಾದರೂ ಹೇಗೋ ಮಳೆ ಶುರುವಾಯಿತಲ್ಲ ಎಂದು ಕೊಡಗಿನ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೀಗ ಜುಲೈ ತಿಂಗಳ ಆರಂಭದ ಒಂದು ವಾರವಷ್ಟೇ ಸುರಿದ ಮಳೆ ಎರಡನೇ ವಾರ ಎನ್ನುವಷ್ಟರಲ್ಲಿ ಸಂಪೂರ್ಣ ಕೈಕೊಟ್ಟಿದೆ.

ಇದರಿಂದ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಸಂಪೂರ್ಣ ಹಿಂದೆ ಉಳಿದಿದೆ. ಜುಲೈ ತಿಂಗಳಲ್ಲಿ ಸಾಮಾನ್ಯವಾಗಿ 860 ಮಿಲಿ ಮೀಟರ್ ವರೆಗೆ ಮಳೆ ಸುರಿಯುತ್ತದೆ. ಆದರೆ ಈ ಬಾರಿ ಕೇವಲ 379 ಮಿಲಿ ಮೀಟರ್ ಮಳೆ ಸುರಿದಿದೆ. ಹೀಗಾಗಿ ಬಿತ್ತನೆ ಕಾರ್ಯವೂ ಬಹುತೇಕ ಆಗಿಲ್ಲ. ಕೊಡಗು ಜಿಲ್ಲೆಯಲ್ಲಿ ಮಳೆಯಾಶ್ರಯಿಸಿ 19 ಸಾವಿರದ 375 ಹೆಕ್ಟೇರ್ ನಷ್ಟು ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ ಈ ಬಾರಿ ಕೇವಲ 1475 ಹೆಕ್ಟೇರ್ ಪ್ರದೇಶದಲ್ಲಿ ಅಷ್ಟೇ ಬಿತ್ತನೆ ಮಾಡಲಾಗಿದೆ.

ಮಳೆ ಆಗುವ ಸಾಧ್ಯತೆ ತೀರಾ ಕಡಿಮೆ

ಜುಲೈ ತಿಂಗಳ ಮೊದಲ ವಾರದಲ್ಲಿ ಸುರಿದ ಮಳೆಯನ್ನು ನಂಬಿ 103 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ. ವಿಪರ್ಯಾಸವೆಂದರೆ ಮುಂದಿನ 20 ರಿಂದ 25 ದಿನಗಳ ಅವಧಿಯಲ್ಲಿ ಮಳೆ ಆಗುವ ಸಾಧ್ಯತೆ ತೀರಾ ಕಡಿಮೆ ಇದೆ. ಇದು ಈಗಾಗಲೇ ಬಿತ್ತನೆ ಆಗಿರುವ ಬೆಳೆಗಳೂ ಕೂಡ ಹಾಳಾಗುವ ಸಾಧ್ಯತೆಗಳಿವೆ. ಇದರಿಂದ ಜನರು ಆತಂಕಗೊಳ್ಳುವಂತೆ ಆಗಿದೆ. ಒಟ್ಟಿನಲ್ಲಿ ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲೂ ಇಷ್ಟೊಂದು ಮಳೆಯ ಕೊರತೆ ಎದುರಾಗಿವುದುದು ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಇನ್ನು ಜುಲೈ ತಿಂಗಳ ಮಧ್ಯ ಸಮಯವಾದರೂ ಇನ್ನೂ ಬಿತ್ತನೆ ಮಾಡುವುದಕ್ಕೆ ಆಗಿಲ್ಲ. ಇನ್ನು ಕೆಲವೇ ದಿನಗಳು ಮಳೆ ಬಾರದಿದ್ದರೆ ಕೊಡಗಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜುಲೈ ತಿಂಗಳಾದರೂ ಬಿತ್ತನೆ ಮಾಡದೇ ಇರುವ ವರ್ಷ ಇದಾಗಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಜುಲೈ ತಿಂಗಳಲ್ಲಿ ಮಳೆ ಚಳಿ ತಡೆಯಲಾರದೆ ಸ್ವೆಟರ್ ಮತ್ತಿತರೆ ವಸ್ತುಗಳ ಮೊರೆ ಹೋಗುತ್ತಿದ್ದ ಕೊಡಗಿನಲ್ಲಿ ಬಿಸಿಲ ಬೇಗೆಯಿಂದ ಬೆವರಿ ಬಸವಳಿಯುವಂತೆ ಆಗಿದೆ. ಈಗಲೇ ಪರಿಸ್ಥಿತಿ ಈ ರೀತಿ ಆದೆ ಮುಂದಿನ ದಿನಗಳನ್ನು ನೆನಪಿಸಿಕೊಂಡರೆ ಭಯವಾಗುತ್ತದೆ ಎನ್ನುತ್ತಿದ್ದಾರೆ ಕೊಡಗಿನ ಜನರು.