Koppal News: ಗಂಗಾವತಿ ಸುತ್ತಮುತ್ತಲಿನ ಏಳು ಗುಡ್ಡಗಳ ಪ್ರದೇಶಗಳಲ್ಲಿ ಈ ಹಿಂದೆ ಚಿರತೆ, ಕರಡಿ ಸೇರಿದಂತೆ ಹಲವು ಕಾಡುಪ್ರಾಣಿಗಳು ಕಾಣಿಸಿಕೊಂಡಿದ್ದವು. ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ಆನೆಗಳು ಹಾಗೂ ಡ್ರೋನ್ ಕ್ಯಾಮೆರಾಗಳ ಸಹಾಯದಿಂದ ಕಾರ್ಯಾಚರಣೆಯನ್ನೂ ನಡೆಸಿತ್ತು.
ರಾಮಮೂರ್ತಿ ನವಲಿ
ಗಂಗಾವತಿ (ಆ.24): ದಟ್ಟ ಅರಣ್ಯ ಪ್ರದೇಶಕ್ಕೆ ಹೆಸರಾದ ಕಿಷ್ಕಿಂದೆ ನಾಡು ಗಂಗಾವತಿಯ ಸುತ್ತಮುತ್ತ ಇದೀಗ ಹುಲಿ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನ ಆನೆಗೊಂದಿ ವ್ಯಾಪ್ತಿಯ ಸರ್ವೆ ನಂ.1ರ ತೆಂಬ ಅರಣ್ಯ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಹುಲಿಯ ಚಲನವಲನ ಸೆರೆಯಾಗಿದೆ. ಇದಕ್ಕೂ ಮುನ್ನ ಇದೇ ಹುಲಿ ಸಮೀಪದ ರೆಸಾರ್ಟ್‌ನ ಸಿಸಿ ಕ್ಯಾಮೆರಾದಲ್ಲೂ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಬಯಲುಸೀಮೆಗೆ ಹುಲಿ ಬಂದಿದ್ದಾದರೂ ಎಲ್ಲಿಂದ?
ಗಂಗಾವತಿ ಸುತ್ತಮುತ್ತಲಿನ ಏಳು ಗುಡ್ಡಗಳ ಪ್ರದೇಶಗಳಲ್ಲಿ ಈ ಹಿಂದೆ ಚಿರತೆ, ಕರಡಿ ಸೇರಿದಂತೆ ಹಲವು ಕಾಡುಪ್ರಾಣಿಗಳು ಕಾಣಿಸಿಕೊಂಡಿದ್ದವು. ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ಆನೆಗಳು ಹಾಗೂ ಡ್ರೋನ್ ಕ್ಯಾಮೆರಾಗಳ ಸಹಾಯದಿಂದ ಕಾರ್ಯಾಚರಣೆಯನ್ನೂ ನಡೆಸಿತ್ತು.
ಆದರೆ ಇದೀಗ ದಟ್ಟ ಅರಣ್ಯ ಪ್ರದೇಶದಿಂದ ಬಯಲುಸೀಮೆಗೆ ಹುಲಿ ಹೇಗೆ ಬಂದಿದೆ ಎಂಬುದು ಅರಣ್ಯ ಇಲಾಖೆಗೆ ಸವಾಲಾಗಿದೆ. ದಾಂಡೇಲಿ, ಬಂಡೀಪುರ, ಚಿಕ್ಕಮಗಳೂರು ಅಥವಾ ನಾಗರಹೊಳೆ ಭಾಗದ ಅರಣ್ಯ ಪ್ರದೇಶಗಳಿಂದ ಹುಲಿ ಬಂದಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ. ಮತ್ತೊಂದೆಡೆ, ಕಮಲಾಪುರ ಬಳಿಯ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯದಿಂದ ಹುಲಿ ತಪ್ಪಿಸಿಕೊಂಡು ಬಂದಿರಬಹುದೇ ಎಂಬ ಅನುಮಾನವನ್ನೂ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಹುಲಿ ಕಾಣಿಸಿಕೊಂಡಿದ್ದರಿಂದ ಗ್ರಾಮಗಳಲ್ಲಿ ಆತಂಕ
ಹುಲಿಯ ಚಲನವಲನ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಹಲವು ಗ್ರಾಮಗಳ ಜನರು ಆತಂಕಗೊಂಡಿದ್ದಾರೆ. ಮಲ್ಲಾಪುರ, ಸಂಗಾಪುರ, ರಾಮಪುರ, ಕಡೆಬಾಗಿಲು, ತೆಂಬ ಅರಣ್ಯ ಪ್ರದೇಶ, ಹಳೇ ಕುಮಟಾ, ಹೇಮಗುಡ್ಡ ಹಾಗೂ ಹಿರೇಬೆಣಕಲ್ ಸೇರಿದಂತೆ ಗುಡ್ಡಗಾಡು ಪ್ರದೇಶಗಳ ನಿವಾಸಿಗಳು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಚಿರತೆಗಳ ಹಾವಳಿಯಿಂದ ಆತಂಕಕ್ಕೊಳಗಾಗಿದ್ದ ಜನರಿಗೆ ಇದೀಗ ಹುಲಿ ಪ್ರತ್ಯಕ್ಷವಾಗಿರುವುದು ಮತ್ತಷ್ಟು ಭಯ ಹುಟ್ಟಿಸಿದೆ.
ಹುಲಿ ಸೆರೆಗೆ ಅರಣ್ಯ, ಪೊಲೀಸ್ ಇಲಾಖೆ ಸಜ್ಜು
ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆಗೆ ಸಿದ್ಧತೆ ನಡೆಸಿವೆ. ಸೋಮವಾರ ವಿರುಪಾಪುರಗಡ್ಡೆಯ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಹಿರಿಯ ಅರಣ್ಯ ಅಧಿಕಾರಿಗಳು ಸಭೆ ನಡೆಸಿ ಮುಂದಿನ ಕಾರ್ಯಾಚರಣೆಯ ಕುರಿತು ಚರ್ಚಿಸಿದರು.
ಬಳ್ಳಾರಿ ಐಜಿಪಿ ಡಾ. ಹರ್ಷ ಗುಪ್ತಾ ಅವರು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ, ಹುಲಿಯ ಚಲನವಲನದ ಮೇಲೆ ನಿಗಾ ಇಟ್ಟು ಶೀಘ್ರವೇ ಅದನ್ನು ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಹುಲಿ ಯಾವ ಅರಣ್ಯ ಪ್ರದೇಶದಿಂದ ಬಂದಿರಬಹುದು ಎಂಬುದನ್ನು ಪತ್ತೆಹಚ್ಚುವುದು ಹಾಗೂ ಅದನ್ನು ಸೆರೆ ಹಿಡಿಯಲು ಕೈಗೊಳ್ಳಬೇಕಾದ ಕಾರ್ಯಾಚರಣೆ ಕುರಿತು ಚರ್ಚೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಬಂಡೀಪುರ ಅರಣ್ಯ ಪ್ರದೇಶದ ಹುಲಿ ಚಲನವಲನ ತಜ್ಞರ ನೆರವು ಪಡೆಯುವ ಬಗ್ಗೆಯೂ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
15 ಪೊಲೀಸ್ ಸಿಬ್ಬಂದಿ, 25ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ನಿಯೋಜನೆ
ಹುಲಿ ಸೆರೆ ಕಾರ್ಯಾಚರಣೆಗೆ ಈಗಾಗಲೇ 15 ಪೊಲೀಸ್ ಸಿಬ್ಬಂದಿ ಹಾಗೂ 25ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿದೆ. ಹುಲಿಯನ್ನು ಸೆರೆ ಹಿಡಿಯಲು ಅಗತ್ಯವಿರುವ ಬೋನ್ ಸೇರಿದಂತೆ ವಿವಿಧ ಉಪಕರಣಗಳನ್ನು ಕೂಡ ಸಿದ್ಧಪಡಿಸಲಾಗಿದೆ.
ಸದ್ಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಹುಲಿಯ ಚಲನವಲನದ ಆಧಾರದ ಮೇಲೆ ಅರಣ್ಯ ಇಲಾಖೆ ನಿಗಾ ವಹಿಸಿದ್ದು, ಹುಲಿ ಯಾವ ದಿಕ್ಕಿನಲ್ಲಿ ಸಂಚರಿಸುತ್ತಿದೆ ಮತ್ತು ಅದರ ಮುಂದಿನ ಚಲನವಲನ ಏನು ಎಂಬುದರ ಮೇಲೆ ಅಧಿಕಾರಿಗಳ ತಂಡ ಕಣ್ಣಿಟ್ಟಿದೆ. ಹುಲಿ ಸೆರೆ ಸಿಕ್ಕ ಬಳಿಕವೇ ಅದು ಎಲ್ಲಿಂದ ಬಂದಿದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ದೊರೆಯುವ ಸಾಧ್ಯತೆಯಿದೆ.
ಹುಲಿಯ ಚಲನ ವಲನ ಬಗ್ಗೆ ನಿಗಾವಹಿಸಲಾಗಿದೆ. ಈಗಾಗಲೇ ಸಿಸಿ ಕ್ಯಾಮರಗಳ ಮೂಲಕ ಕೆಲವೊಂದು ಅರಣ್ಯ ಪ್ರದೇಶಗಳನ್ನು ಗುರುತಿಸಲಾಗಿದ್ದು, ಯಾವ ರೀತಿಯಾಗಿ ಸೆರೆ ಹಿಡಿಯಬೇಕೆನ್ನುವದರ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆಯಲಾಗಿದೆ. ಶೀಘ್ರದಲ್ಲಿ ಹುಲಿಯನ್ನು ಸೆರೆ ಹಿಡಿದು ಬೇರೆ ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತದೆ.
-ಬಸವರಾಜ್ ವಲಯ ಅರಣ್ಯಾಧಿಕಾರಿಗಳು, ಗಂಗಾವತಿ
ಗಂಗಾವತಿ ತಾಲೂಕಿನ 7 ಗುಡ್ಡಗಳ ಪ್ರದೇಶದಲ್ಲಿ ಹುಲಿಯು ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಮೊದಲನೇ ಬಾರಿಗೆ ಚಿರತೆ ಕಾಣಿಸಿಕೊಂಡಿದ್ದರಿಂದ ಬೇರೆ ಪ್ರದೇಶದಿಂದ ಬಂದಿರಬಹುದೆಂದು ಉಹಿಸಲಾಗುತ್ತದೆ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಂಡು ಹುಲಿಯನ್ನು ರಕ್ಷಿಸುವುದರ ಜೊತೆಗೆ ಜನರ ಆತಂಕ ತಪ್ಪಿಸಬೇಕು.
-ಎಚ್.ಆರ್.ಶ್ರೀನಾಥ, ಮಾಜಿ ಎಂಎಲ್ಸಿ ಗಂಗಾವತಿ


