ಜಮೀನಿನಲ್ಲಿ ಹೈಟೆನ್ಶನ್ ವಿದ್ಯುತ್ ಟವರ್ ನಿರ್ಮಾಣಕ್ಕೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ರೈತ ಹನುಮಂತಪ್ಪ ಟವರ್ ಏರಿ ಪ್ರತಿಭಟಿಸಿದರು. ಆರು ತಿಂಗಳಿಂದ ಅಧಿಕಾರಿಗಳು ಸ್ಪಂದಿಸದ ಕಾರಣ ಈ ನಿರ್ಧಾರ ಕೈಗೊಂಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಕಂಪನಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
ಕೊಪ್ಪಳ (ಅ.07): ಜಮೀನಿನಲ್ಲಿ ನಿರ್ಮಿಸುತ್ತಿರುವ ಹೈಟೆನ್ಶನ್ ವಿದ್ಯುತ್ ಟವರ್‌ಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತನೊಬ್ಬ ನಿರ್ಮಾಣ ಹಂತದ ಟವರ್ ಏರಿ ಕುಳಿತ ಘಟನೆ ತಾಲೂಕಿನ ಹಿರೇನಂದಿಹಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ರೈತ ಹನುಮಂತಪ್ಪ ಬಾರಿಗಿಡ ಅವರಿಗೆ ಸೇರಿದ ಜಮೀನಿನಲ್ಲಿ ಖಾಸಗಿ ಕಂಪನಿಯ, ರಾಯಚೂರು–ಗದಗ ಸಂಪರ್ಕ ಮಾರ್ಗದ ಬೃಹತ್ ವಿದ್ಯುತ್ ಟವರ್ (ಪವರ್‌ಗ್ರಿಡ್) ನಿರ್ಮಿಸಲಾಗುತ್ತಿದೆ. ಜಮೀನಿಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿರುವ ಅವರು, ಕಳೆದ ಆರು ತಿಂಗಳಿಂದ ಕಂಪನಿ ಎಂಜಿನಿಯರ್‌ಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆತಿಲ್ಲ ಎಂದು ತಿಳಿಸಿದ್ದಾರೆ.
ಕಾಮಗಾರಿಯ ಕೆಲಸ ತಡೆದು ಆಕ್ಷೇಪ
ಸೋಮವಾರ ಕಾಮಗಾರಿ ಕೈಗೊಳ್ಳಲು ಎಂಜಿನಿಯರ್‌ಗಳು ಸ್ಥಳಕ್ಕೆ ಆಗಮಿಸಿದಾಗ ಹನುಮಂತಪ್ಪ ಕೆಲಸ ತಡೆದು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಬೇಡಿಕೆಗೆ ಸ್ಪಂದಿಸುವಂತೆ ಒತ್ತಾಯಿಸಿ ನಿರ್ಮಾಣ ಹಂತದ ಟವರ್ ಏರಿ ಕುಳಿತರು.
ಮಾಹಿತಿ ತಿಳಿದು ಕುಷ್ಟಗಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಮಾಳಿಂಗರಾಯ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಕೆಲಕಾಲ ಮನವೊಲಿಸಿದರು. ಕಂಪನಿ ಸಿಬ್ಬಂದಿ ಹಾಗೂ ರೈತ ಕುಟುಂಬದವರೊಂದಿಗೆ ಚರ್ಚಿಸಿ ಭರವಸೆ ನೀಡಿದ ಬಳಿಕ ಹನುಮಂತಪ್ಪ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
ಜಮೀನಿನಲ್ಲಿ ವಿದ್ಯುತ್ ಟವರ್ ಅಳವಡಿಕೆಯಿಂದ ಉಂಟಾಗುವ ಪರಿಣಾಮಕ್ಕೆ ನಿಯಮಾನುಸಾರ ಪರಿಹಾರ ನೀಡಬೇಕು. ಹಲವು ತಿಂಗಳಿಂದ ಮನವಿ ಮಾಡಿದರೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಈ ಹಾದಿ ಹಿಡಿಯಬೇಕಾಯಿತು ಎಂದು ಹನುಮಂತಪ್ಪ ತಿಳಿಸಿದ್ದಾರೆ.
ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಗ್ರಾಮದ ಹನುಮಂತಪ್ಪ ಪರಿಹಾರ ವಿಚಾರವಾಗಿ ಟವರ್ ಏರಿ ಕುಳಿತಿರುವ ಮಾಹಿತಿ ಬಂದ ತಕ್ಷಣ ತಂಡದೊಂದಿಗೆ ಸ್ಥಳಕ್ಕೆ ತೆರಳಲಾಯಿತು. ಕಂಪನಿ ಸಿಬ್ಬಂದಿಯೊಂದಿಗೆ ಚರ್ಚಿಸಿ ಭರವಸೆ ಪಡೆದು ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು ಎಂದು ಕುಷ್ಟಗಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಮಾಳಿಂಗರಾಯ ಹೇಳಿದರು.


