*  ನನಗೆ ಭಾರತದ ಬಗ್ಗೆ ಹೆಮ್ಮೆ ಇದೆ: ಸಂಗಮೇಶ ಸೊಪ್ಪಿಮಠ*  ಭಾರತ, ಕರ್ನಾಟಕ ಸರ್ಕಾರಕ್ಕೆ ಹಾಗೂ ಕೊಪ್ಪಳ ಜಿಲ್ಲಾಡಳಿತಕ್ಕೆ ಧನ್ಯವಾದ *  ನಮ್ಮ ಬಸ್ಸಿಗೆ ಭಾರತದ ಫ್ಲ್ಯಾಗ್‌ ಕಟ್ಟಿಕೊಂಡು ಬಂದಿದ್ದೇವೆ

ಸೋಮರಡ್ಡಿ ಅಳವಂಡಿ

ಕೊಪ್ಪಳ(ಮಾ.05): ‘ನಾವಿರುವಲ್ಲಿ ಕನ್ನಡಿಗರು(Kannadigas) ಸೇರಿದಂತೆ ಭಾರತದವರೆ(India) 500ಕ್ಕೂ ಹೆಚ್ಚು ಜನರಿದ್ದೇವೆ. ಇರುವುದಕ್ಕೆ ಸಮಸ್ಯೆ ಇಲ್ಲ. ಆದರೆ, ಊಟ ಮಾತ್ರ ಒಂದೇ ಹೊತ್ತು. ರಾತ್ರಿ ಕೊಟ್ಟರೆ ಬೆಳಗ್ಗೆ ಕೊಡಲ್ಲ, ಬೆಳಗ್ಗೆ ಕೊಟ್ಟರೆ ರಾತ್ರಿ ಕೊಡಲ್ಲ’... ಯುದ್ಧದ(War) ದಾಳಿಯಿಂದ ತತ್ತರಿಸುತ್ತಿರುವ ಉಕ್ರೇನ್‌ನ(Ukraine) ಖಾರ್ಕೀವ್‌ ಸಮೀಪದ ಪಿಶೋಚಿನ್‌ ಗ್ರಾಮದ ಮಿಲ್ಟ್ರಿ ಶಾಲೆಯಲ್ಲಿ ತಂಗಿರುವ ಕುಕನೂರು ತಾಲೂಕಿನ ಯರೇಹಂಚಿನಾಳದ ಎಂಬಿಬಿಎಸ್‌ ವಿದ್ಯಾರ್ಥಿ ಚಂದನ್‌ ಸಾದರನ ಮಾತುಗಳು.

ಸದ್ಯಕ್ಕೆ ಇಲ್ಲಿ ಯಾವುದೇ ತೊಂದರೆ ಇಲ್ಲ. ಭಾರತ ಸರ್ಕಾರದ(Government of India) ಸೂಚನೆಯ ಮೇರೆಗೆ ಈ ಗ್ರಾಮಕ್ಕೆ ಸ್ಥಳಾಂತರವಾಗಿದ್ದು, 48 ಗಂಟೆಗಳ ಕಾಲ ಕಾಯುವಂತೆ ಸೂಚಿಸಿದ್ದಾರೆ. ಬಸ್‌ ವ್ಯವಸ್ಥೆಗೊಳಿಸಿ ಹಂಗೇರಿ ಅಥವಾ ಪೋಲೆಂಡ್‌ ದೇಶದ ಗಡಿಗೆ ಸ್ಥಳಾಂತರ ಮಾಡಲಾಗುವುದು ಎಂದು ಸೂಚಿಸಿದ ಹಿನ್ನೆಲೆ ಪುಟ್ಟಹಳ್ಳಿಯಲ್ಲಿ ಆಶ್ರಯ ಪಡೆದಿದ್ದೇವೆ ಎಂದು ವೀಡಿಯೋ ಕಾಲ್‌ನಲ್ಲಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

Russia-Ukraine War: 'ಭಾರತ ಉಕ್ರೇನ್‌ ಪರ ನಿಲ್ಲದ್ದಕ್ಕೆ ಸಿಟ್ಟಿಗೆದ್ದು ಕಿರುಕುಳ ಕೊಟ್ಟರು'

7 ದಿನ ಬಂಕರ್‌ನಲ್ಲಿ:

ಖಾರ್ಕೀವ್‌ನ ಮೇಲೆ ದಾಳಿಯಾಗುತ್ತಿರುವ ವೇಳೆ ಏಳು ದಿನಗಳ ಕಾಲ ಬಂಕರ್‌ನಲ್ಲಿಯೇ ಕಾಲ ಕಳೆದಿದ್ದೇವೆ. ಸಂಗ್ರಹಿಸಿಟ್ಟುಕೊಂಡಿದ್ದ ಬಿಸ್ಕಿತ್‌, ಬ್ರೇಡ್‌ ಮತ್ತು ನೀರೇ ಗತಿಯಾಗಿತ್ತು. ಅದನ್ನೇ ತಿಂದುಕೊಂಡು ಬಂಕರ್‌ನಿಂದ ಆಚೆ ಬರದೆ ಇದ್ದಿದ್ದರಿಂದ ಬದುಕಿದೆವು. ಆ ಏಳು ದಿನಗಳ ಕಳೆದಿದ್ದನ್ನು ನೆನಪಿಸಿಕೊಳ್ಳಲು ಭಯವಾಗುತ್ತದೆ. ಈಗ ಖಾರ್ಕೀವ್‌ ನಗರದಿಂದ 12 ಕಿಮೀ ದೂರದಲ್ಲಿ ಇರುವ ಪಿಶೋಚಿನ್‌ ಗ್ರಾಮದ ಮಿಲ್ಟ್ರಿ ಶಾಲೆಯಲ್ಲಿ ತಂಗಿದ್ದೇವೆ. ಈ ಹಳ್ಳಿಗೆ ಅಂಗೈಯಲ್ಲಿ ಜೀವ ಹಿಡಿದುಕೊಂಡು ಬಂದಿದ್ದೇವೆ.

ಆದರೆ, ಊಟ ಮಾತ್ರ ಒಂದೇ ಹೊತ್ತು. ರಾತ್ರಿ ಕೊಟ್ಟರೇ ಬೆಳಗ್ಗೆ ಕೊಡಲ್ಲ, ಬೆಳಗ್ಗೆ ಕೊಟ್ಟರೇ ರಾತ್ರಿ ಕೊಡಲ್ಲ. ಇಲ್ಲಿ ದಿನಕ್ಕೆ ಒಂದೇ ಹೊತ್ತು ಊಟ ನೀಡುತ್ತಾರೆ. ನಾವು ಮೊದಲೇ ಸಂಗ್ರಹಿಸಿ ಇಟ್ಟುಕೊಂಡಿರುವ ಬಿಸ್ಕಿತ್‌, ಬ್ರೇಡ್‌ ಇರುವುದಿರಂದ ಹೇಗೋ ದಿನ ದೂಡುತ್ತಿದ್ದೇವೆ ಎನ್ನುತ್ತಾನೆ ಚಂದನ್‌.

ಈಗಂತೂ ಸಮಸ್ಯೆ ಇಲ್ಲದಂತೆ ಇದ್ದೇವೆ. ಯಾವಾಗ ಊರಿಗೆ ಬರುತ್ತೇವೆ ಎನ್ನುವಂತಾಗಿದೆ. ಖಾರ್ಕೀವ್‌ ಬಿಟ್ಟು ಬಂದಿದ್ದರಿಂದ ಒಂಚೂರು ಭಯ ನಿವಾರಣೆಯಾಗಿದೆ ಅಂತ ಚಂದನ ಸಾದರ ತಿಳಿಸಿದ್ದಾರೆ. 
ಈಗಷ್ಟೇ ಮಗನೊಂದಿಗೆ ಮಾತನಾಡಿದ್ದೇನೆ. ಆರಾಮ ಇದ್ದಾನೆ. ಆದರೆ, ಇನ್ನು 48 ಗಂಟೆ ಕಾಯುವಂತೆ ಹೇಳಿದ್ದಾರೆ. ಹೀಗಾಗಿ ಆತಂಕವಾಗುತ್ತದೆ. ಒಟ್ಟಿನಲ್ಲಿ ಬೇಗನೆ ವಾಪಸ್‌ ಬಂದರೆ ಅಷ್ಟೇ ಸಾಕು ಅಂತ ವಿದ್ಯಾರ್ಥಿಯ ತಂದೆ ಶರಣಪ್ಪ ಸಾದರ ಹೇಳಿದ್ದಾರೆ.

ತ್ರಿವರ್ಣ ಧ್ವಜದಿಂದಾಗಿ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದೆ...

ಕೊಪ್ಪಳ:ನ ‘ನಾನು ಸೇರಿದಂತೆ ನಾವೆಲ್ಲರೂ ಸುರಕ್ಷಿತವಾಗಿ ತಾಯ್ನಾಡಿಗೆ ಬರಲು ಸಾಧ್ಯವಾಗಿದ್ದೇ ಭಾರತದ ತ್ರಿವರ್ಣ ಧ್ವಜ. ನಮ್ಮ ಬಸ್ಸಿಗೆ ಭಾರತದ ಫ್ಲ್ಯಾಗ್‌ ಕಟ್ಟಿಕೊಂಡು ಬಂದಿದ್ದೇವೆ..’ ಇದು ಉಕ್ರೇನ್‌ನಿಂದ ಆಗಮಿಸಿರುವ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಸಂಗಮೇಶ ಸೊಪ್ಪಿಮಠ ಅವರ ಮಾತು. ನಾನೂ ಭಾರತದವನೆ, ಭಾರತದ ಬಗ್ಗೆ ಹೆಮ್ಮೆ ಇದೆ. ಅದೇಗೆ ನಾನು ಭಾರತ ಸರ್ಕಾರವನ್ನು ಬೈಯಲು ಸಾಧ್ಯ? ಎಂದು ಪ್ರಶ್ನಿಸಿದ್ದಾನೆ ಸಮಗಮೇಶ್‌.

Russia Ukraine Crisis ರಷ್ಯಾ ಯುದ್ಧದ ಬಗ್ಗೆ ಸುಳ್ಳು ಸುದ್ದಿ ಹರಡಿದರೆ 15 ವರ್ಷ ಜೈಲು

ಉಕ್ರೇನ್‌ನಲ್ಲಿ ಏನಾಯಿತು ಸಮಸ್ಯೆ ಎಂದು ಸತ್ಯ ಹೇಳಿದ್ದೇನೆ. ಅದನ್ನೇ ತಪ್ಪಾಗಿ ಅರ್ಥೈಸಿ, ತೋರಿಸಿದರೆ ಏನು ಮಾಡಲು ಸಾಧ್ಯ? ಉಕ್ರೇನ್‌ನಲ್ಲಿದ್ದಾಗ ಸಮಸ್ಯೆಯಂತೂ ಆಗಿದೆ. ಟ್ರೇನ್‌ನಲ್ಲಿ ಬರುವಾಗ ಬೇರೆ ದೇಶದವರಿಂದ ಹಿಂಸೆ ಅನುಭವಿಸಿದ್ದೇವೆ. ಆದರೆ, ನಾನು ಹೇಳಿದ್ದು, ಇಂಡಿಯನ್‌ ಅಂಬ್ಯಾಸಿಯವರು ಇನ್ನೂ ಮುತುವರ್ಜಿ ವಹಿಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. 19 ಸಾವಿರ ಜನರು ಕಾಲ್‌ ಮಾಡಿದಾಗ ಸ್ಪಂದಿಸಲು ಆಗುತ್ತಿರಲಿಲ್ಲ. ಹೀಗಾಗಿ ಕ್ಯೂಕಾಲ್‌ ಪ್ರಾರಂಭಿಸಬೇಕಿತ್ತು ಎಂದಿದ್ದೇನೆ. ಇನ್ನು ಭಾರತೀಯರನ್ನು ಪ್ರತ್ಯೇಕವಾಗಿ ಕರೆದುಕೊಂಡು ಬಂದಿದ್ದರೂ ಸಮಸ್ಯೆಯಾಗುತ್ತಿರಲಿಲ್ಲ ಎಂದು ಹೇಳಿದ್ದೇನೆ.

ಈಗ ಭಾರತ ಸರ್ಕಾರ ಮುತುವರ್ಜಿ ವಹಿಸಿದೆ. ಎಕ್ಸಪರ್ಟ್‌ ಕಳುಹಿಸಿದ್ದರಿಂದ ಹೆಚ್ಚು ಹೆಚ್ಚು ಜನರನ್ನು ವಾಪಸ್‌ ಕರೆಸಲು ಆಗುತ್ತಿದೆ. ಭಾರತ, ಕರ್ನಾಟಕ ಸರ್ಕಾರಕ್ಕೆ ಹಾಗೂ ಕೊಪ್ಪಳ ಜಿಲ್ಲಾಡಳಿತಕ್ಕೆ ಧನ್ಯವಾದ ಹೇಳಿದ್ದೇನೆ. ಜಿಲ್ಲೆಯ ಸಚಿವರು, ಸಂಸದರು ಸ್ಪಂದಿಸಿದ ಬಗ್ಗೆ ಹೇಳಿದ್ದೇನೆ, ಅದ್ಯಾವುದು ಬಂದಿಲ್ಲ. ಆದರೆ, ಅವರ ಕೇಳಿದ್ದಕ್ಕೆ ಉತ್ತರಿಸಿದ್ದನ್ನು ಎಡಿಟ್‌ ಮಾಡಿ ಹಾಕಿದ್ದಾರೆ ಎಂದು ಹೇಳಿದ್ದಾರೆ.