Kollegal wedding dowry fight ಕೊಳ್ಳೇಗಾಲದಲ್ಲಿ ನಡೆಯಬೇಕಿದ್ದ ಪ್ರೇಮ ವಿವಾಹ, ವರದಕ್ಷಿಣೆ ವಿಚಾರವಾಗಿ ನಡೆದ ಗಲಾಟೆಯಿಂದಾಗಿ ನಿಂತುಹೋಗಿದೆ. ಚಿನ್ನಾಭರಣ ಮತ್ತು ಕಾರಿನ ಬೇಡಿಕೆಯಿಂದಾಗಿ ಎರಡೂ ಕುಟುಂಬಗಳ ನಡುವೆ ಮಾರಾಮಾರಿ ನಡೆದು, ಆರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಕೊಳ್ಳೇಗಾಲ (ಏ.30): ಕೊಳ್ಳೇಗಾಲದ ಆ ಕಲ್ಯಾಣ ಮಂಟಪ ಸಂಭ್ರಮದ ಅಲೆಯಲ್ಲೇ ತೇಲುತ್ತಿತ್ತು. ಮೂರು ವರ್ಷಗಳ ಕಾಲ ಒಬ್ಬರನ್ನೊಬ್ಬರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಮುದಾಸಿರ್‌ ಮತ್ತು ಗುಲ್ನಾಜ್‌ ಬಾನು ಇಂದು ನವಜೀವನಕ್ಕೆ ಕಾಲಿಡಬೇಕಿತ್ತು. ಮನೆಯವರ ಒಪ್ಪಿಗೆಯೂ ಸಿಕ್ಕಿತ್ತು, ಬುಧವಾರದ ಶುಭ ಮುಹೂರ್ತಕ್ಕೆ ಎಲ್ಲಾ ಸಿದ್ಧತೆಗಳೂ ಪೂರ್ಣಗೊಂಡಿದ್ದವು.

Add Asianetnews Kannada as a Preferred SourcegooglePreferred

ವರದಕ್ಷಿಣೆ ಸಂಬಂಧಗಳಿಗೆ ಕೊಳ್ಳಿ ಹಚ್ಚಿತು!

ಆದರೆ, ಮದುವೆಯ ಮಧುರ ಕ್ಷಣಗಳ ನಡುವೆಯೇ 'ವರದಕ್ಷಿಣೆ' ಎಂಬ ಭೂತ ಪ್ರವೇಶ ಮಾಡಿತ್ತು. ಮಾತಿನಂತೆ ವಧುವಿಗೆ ನೀಡಬೇಕಿದ್ದ ಚಿನ್ನಾಭರಣಗಳ ವಿಚಾರ ಮಂಟಪದಲ್ಲಿ ಎರಡೂ ಕಡೆಯ ಸಂಬಂಧಗಳಿಗೆ ಕೊಳ್ಳಿ ಹಚ್ಚಿತು. ಒಡವೆ ಕೊಡದ ಕಾರಣಕ್ಕೆ ಕೋಪಗೊಂಡ ಹುಡುಗಿ ಮನೆಯವರು, ಮಂಗಳವಾರ ರಾತ್ರಿಯೇ ಮದುವೆಯ ಶಾಸ್ತ್ರಗಳಿಗೆ ಬ್ರೇಕ್ ಹಾಕಿಬಿಟ್ಟರು.

ಹಾರೈಸಬೇಕಾದ ಕೈಗಳು ದೊಣ್ಣೆ ಚಾಕು ಹಿಡಿದವು!

ನೂರು ಕಾಲ ಸುಖವಾಗಿರಬೇಕೆಂದು ಹಾರೈಸಬೇಕಾದ ಕೈಗಳಲ್ಲಿ ದಿಢೀರನೆ ಚಾಕು, ದೊಣ್ಣೆಗಳು ಬಂದವು. ಶಾಂತವಾಗಿದ್ದ ವಾತಾವರಣ ಕ್ಷಣಾರ್ಧದಲ್ಲಿ ರಣರಂಗವಾಗಿ ಮಾರ್ಪಟ್ಟಿತು. ಎರಡೂ ಕಡೆಯ ಸಂಬಂಧಿಕರು ಪರಸ್ಪರ ಅಟ್ಟಾಡಿಸಿ ಹಲ್ಲೆ ನಡೆಸಿದರು. ಈ ಭೀಕರ ಮಾರಾಮಾರಿಯಲ್ಲಿ ಆರು ಮಂದಿ ರಕ್ತಸಿಕ್ತರಾಗಿ ಆಸ್ಪತ್ರೆ ಸೇರಿದ್ದಾರೆ.

'ವರನಿಗೆ 15 ಲಕ್ಷ ರೂಪಾಯಿಯ ಐಷಾರಾಮಿ ಕಾರು ಬೇಕೆಂಬ ದುರಾಸೆಯೇ ಈ ಎಲ್ಲಾ ಅವಾಂತರಕ್ಕೆ ಕಾರಣ' ಎಂದು ವಧುವಿನ ಕಡೆಯವರು ಗಂಭೀರ ಆರೋಪ ಮಾಡಿದ್ದಾರೆ. ಇತ್ತ ವರನ ಸಂಬಂಧಿಕರು ಮಾತ್ರ, 'ನಾವು ಬಡವರು ಎಂಬ ಒಂದೇ ಕಾರಣಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿ ಮದುವೆ ನಿಲ್ಲಿಸಿದ್ದಾರೆ' ಎಂದು ನೋವು ತೋಡಿಕೊಂಡಿದ್ದಾರೆ.

ಮೂರು ವರ್ಷಗಳ ಪ್ರೀತಿ, ಸಾವಿರಾರು ಕನಸುಗಳು ಕೇವಲ ಒಂದು ರಾತ್ರಿಯ ಗಲಾಟೆಯಲ್ಲಿ ಮುರಿದುಬಿದ್ದಿದೆ. ಮದುವೆ ಮಂಟಪ ಸೇರಬೇಕಿದ್ದ ಜೋಡಿ ಈಗ ಪೊಲೀಸ್ ಠಾಣೆ ಮತ್ತು ಆಸ್ಪತ್ರೆಯ ಮೆಟ್ಟಿಲೇರುವಂತಾಗಿದೆ.