ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ ವೇಳೆ ಗದ್ದಲ ಉಂಟಾಗಿ ರೋಗಿಗಳಿಗೆ ತೊಂದರೆಯಾಗಿದೆ. ಅಭಿಮಾನಿಗಳ ಒಳನುಗ್ಗುವಿಕೆಯಿಂದ ಆಸ್ಪತ್ರೆಯ ವಾತಾವರಣ ಗದ್ದಲಮಯವಾಗಿತ್ತು.
ಚಾಮರಾಜನಗರ (ಜು.24): ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಭೇಟಿಯ ಸಂದರ್ಭದಲ್ಲಿ ಗೌಜು-ಗದ್ದಲ ವಾತಾವರಣ ಸೃಷ್ಟಿಯಾಗಿ ರೋಗಿಗಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಪರದಾಡಿದ ಆರೋಪ ಕೇಳಿಬಂದಿದೆ.
ನಾಗಲಕ್ಷ್ಮೀ ಚೌಧರಿ ಆಗಮನದ ವೇಳೆ ನೂರಾರು ಅಭಿಮಾನಿಗಳು ಮತ್ತು ಕಾರ್ಯಕರ್ತರು ಆಸ್ಪತ್ರೆಯ ಒಳಗೆ ನುಗ್ಗಿದ್ದು, ವೈದ್ಯ, ಸಿಬ್ಬಂದಿಯೆಲ್ಲ ಸ್ವಾಗತಿಸಲು ಮುಂದಾಗಿದ್ದು ಅಭಿಮಾನಿಗಳು, ಕಾರ್ಯಕರ್ತರ ಒಳನುಗ್ಗಿದ್ದರಿಂದ ಈ ಗದ್ದಲದಿಂದಾಗಿ ಆಸ್ಪತ್ರೆಯ ವಾತಾವರಣ ಮೀನು ಮಾರುಕಟ್ಟೆಯಂತಾಗಿದೆ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಗಿಗಳ ಕಷ್ಟ ಕೇಳಲು ಬಂದಿದ್ದಾರೋ, ಪ್ರಚಾರಕ್ಕೆ ಬಂದಿದ್ದರೋ?
ಒಂದು ಗಂಟೆಯಿಂದ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡದೆ, ಆಯೋಗದ ಅಧ್ಯಕ್ಷೆಯನ್ನು ಸ್ವಾಗತಿಸಲು ನಿರತರಾಗಿದ್ದಾರೆ. ಇದರಿಂದ ಚಿಕಿತ್ಸೆಗಾಗಿ ಕಾಯುತ್ತಿರುವ ರೋಗಿಗಳು ಪರಿತಪಿಸುವಂತಾಗಿದೆ. ವಿಶೇಷವಾಗಿ, ಹೆರಿಗೆ ವಾರ್ಡ್‌ಗೆ ಅನಧಿಕೃತವಾಗಿ ಕಾರ್ಯಕರ್ತರು ನುಗ್ಗಿದ್ದು, ಒಳರೋಗಿಗಳಿಗೆ ಕಿರಿಕಿರಿಯನ್ನುಂಟುಮಾಡಿದೆ. ಇವರು ರೋಗಿಗಳ ಕಷ್ಟ ಕೇಳಲು ಬಂದಿದ್ದಾರೋ ಇಲ್ಲ ಬರೀ ಪ್ರಚಾರಕ್ಕೆ ಬಂದಿದ್ದಾರೋ?' ಎಂದು ರೋಗಿಗಳು ಮತ್ತು ಅವರ ಕುಟುಂಬಸ್ಥರು ಅಸಮಾಧಾನಗೊಂಡರು.

ಈ ಘಟನೆಯಿಂದ ಆಸ್ಪತ್ರೆಯ ಆಡಳಿತದ ಮೇಲೆಯೂ ಟೀಕೆ ವ್ಯಕ್ತವಾಗಿದೆ. ಸರಿಯಾದ ಭದ್ರತಾ ವ್ಯವಸ್ಥೆ ಇಲ್ಲದಿರುವುದು ಮತ್ತು ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ರೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ನಾಗಲಕ್ಷ್ಮೀ ಚೌಧರಿಯವರ ಈ ಭೇಟಿಯು ರೋಗಿಗಳ ದೂರುಗಳನ್ನು ಆಲಿಸಲು ಉದ್ದೇಶಿಸಿದ್ದರೂ, ಗೌಜು-ಗದ್ದಲದಿಂದ ಆಗಮಿಸಿದ ಉದ್ದೇಶ ಈಡೇರಿತಾ ಎಂದು ರೋಗಿಗಳು ಪ್ರಶ್ನಿಸಿದರು.
