ಬೊಮ್ಮಾಯಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ
* ಮಹದಾಯಿ ನದಿ ವಿಚಾರವನ್ನು ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಮಾರ್ಪಾಡು
* ಕೃಷಿ ಮಸೂದೆ ಕುರಿತು ಕೇಂದ್ರಕ್ಕೆ ತಿಳಿವಳಿಕೆ ಹೇಳಿದ ಸುಪ್ರೀಂ ಕೋರ್ಟ್
* ಕೃಷಿ ಮಸೂದೆ ಅಂಗೀಕಾರ ಮಾಡಿರುವುದು ದುರ್ದೈವದ ಸಂಗತಿ
ಬೆಳಗಾವಿ(ಆ.26): ಮೇಕೆದಾಟು, ಮಹದಾಯಿಯಲ್ಲಿ ರಾಜಕೀಯ ಡ್ರಾಮಾ ಆಗಬಾರದು. ಈ ಎರಡೂ ನದಿಯ ವಿಚಾರವಾಗಿ ಸರ್ಕಾರ ವಿಳಂಬ ನೀತಿ ಅನುಸರಿಸಿದರೆ ನಾವೇ ಅಡಿಗಲ್ಲು ಹಾಕಿ ಯೋಜನೆ ಪ್ರಾರಂಭಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾಗೆ ಸಂಬಂಧಿಸಿದಂತೆ ಸಕಾಲಕ್ಕೆ ಯೋಜನೆ ತೆಗೆದುಕೊಂಡು ಮಾಡಲಾಗುವುದು ಎಂದು ಈಗಾಗಲೇ ಸರ್ಕಾರ ತಿಳಿಸಿದೆ. ಕೃಷ್ಣಾದ ನ್ಯಾಯಾಧಿಕರಣದ ತೀರ್ಪು ಬಂದರೂ ದೊಡ್ಡ ಪ್ರಮಾಣದಲ್ಲಿ ಕೃಷ್ಣಾ ನೀರನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಯೋಜನೆಯನ್ನು ಅನುಷ್ಠಾನ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾವೇರಿ ನೀರನ್ನು ಬಳಕೆ ಮಾಡಲು ಮೇಕೆದಾಟು ಯೋಜನೆ ಅನುಷ್ಠಾನ ಮಾಡಿದರೆ ನಾವು ಆ ನೀರನ್ನು ಬಳಕೆ ಮಾಡಿಕೊಳ್ಳಲು ಅನಕೂಲವಾಗುತ್ತದೆ. ಮಹದಾಯಿ ನದಿ ವಿಚಾರವನ್ನು ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಮಾರ್ಪಾಡು ಮಾಡಿದ್ದಾರೆ. ಆದ್ದರಿಂದ ಗೋವಾದವರು ಈಗ ಪ್ರಶ್ನೆ ಮಾಡಲು ಪ್ರಾರಂಭ ಮಾಡಿದ್ದಾರೆ. ಮಹದಾಯಿ ಮತ್ತು ಕಾವೇರಿ ವಿಚಾರದಲ್ಲಿ ಸರ್ಕಾರದ ವಿಳಂಬ ನೀತಿ ಮುಂದುವರಿದರೆ ನಾವೇ ಅಡಿಗಲ್ಲು ಹಾಕಿ ನಾವೇ ಕಾಮಗಾರಿಯನ್ನು ಪ್ರಾರಂಭ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
'ರಾಜಕಾರಣಿಗಳ ನಿರ್ಲಕ್ಷ್ಯದಿಂದ ಮಹದಾಯಿ ಯೋಜನೆಗೆ ಹಿನ್ನಡೆ'
ನಾಳೆ ಸಾರಿಗೆ ನೌಕರರ ಸಭೆ:
ಇಡೀ ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಅದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಸಾರಿಗೆ ನೌಕರರಿಗೆ ಮಲತಾಯಿ ಧೋರಣೆ ಮುಂದುವರಿಯಬಾರದು. ಆ.27 ರಂದು ಸಾರಿಗೆ ನೌಕರರ ಸಭೆ ಕರೆಯಲಾಗಿದ್ದು, ಸೆ.6 ರಿಂದ ಯಾವ ರೀತಿ ಹೋರಾಟ ಮಾಡಬೇಕೆಂಬ ಚರ್ಚೆ ನಡೆಸಲಾಗುವುದು ಎಂದರು.
ಸಾರಿಗೆ ನೌಕರರ ಪ್ರಮುಖ ಬೇಡಿಕೆಯನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿಯೇ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಪ್ರತಿಭಟನೆಯಲ್ಲಿ ಗುರುತಿಸಿಕೊಂಡವರಿಗೆ ಸರ್ಕಾರ ಅವರನ್ನು ಕೆಲಸದಿಂದ ವಜಾ ಮಾಡಿದ್ದು ಖಂಡನೀಯ. ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿದೆ. ನ್ಯಾಯಯುತ ಜೀವನ ನಡೆಸಲು ಬಿಡುತ್ತಿಲ್ಲ ಎಂದು ಸಾರಿಗೆ ನೌಕರರು ಆರೋಪಿಸಿದ್ದು, ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಅದಕ್ಕೆ ಮನ್ನಣೆ ನೀಡಬೇಕು ಎಂದ ಅವರು, ಖಾಸಗಿ ಸಂಸ್ಥೆಯನ್ನು ಉದ್ದಾರ ಮಾಡುವಲ್ಲಿ ಸಂಘಟನಾ ಶಕ್ತಿಯನ್ನು ಹತ್ತಿಕ್ಕುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ. ಸಾರಿಗೆ ಸಂಸ್ಥೆ ದೊಡ್ಡದಾಗಿದ್ದು, ಸರ್ಕಾರದ ಧೋರಣೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಪ್ರವೇಶ ದ್ವಾರದಲ್ಲಿ ರೈತರು ಸತ್ಯಾಗ್ರಹ ಮಾಡುತ್ತಿದ್ದಾರೆ. ಇದನ್ನು ಕೈ ಬಿಡಬೇಕೆಂದು ಕೇಂದ್ರ ಸರ್ಕಾರ ಒತ್ತಾಯ ಮಾಡುತ್ತಿದೆ. ಕೃಷಿ ಮಸೂದೆ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತಿಳಿವಳಿಕೆ ಹೇಳಿದೆ. ಆದರೂ ಕೃಷಿ ಮಸೂದೆ ಅಂಗೀಕಾರ ಮಾಡಿರುವುದು ದುರ್ದೈವದ ಸಂಗತಿ. ದೇಶದಲ್ಲಿ ಸುಮಾರು 16 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಮಾಡುವ ರಾಜ್ಯವಿದೆ. ರಾಜ್ಯದಲ್ಲಿ ಮೂರು ಕೃಷಿ ಮಸೂದೆಯನ್ನು ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ತಿದ್ದುಪಡಿ ಮಾಡಲಾಯಿತು. ಇದನ್ನು ತಡೆ ಹಿಡಿಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.