'ರಾಜಕಾರಣಿಗಳ ನಿರ್ಲಕ್ಷ್ಯದಿಂದ ಮಹದಾಯಿ ಯೋಜನೆಗೆ ಹಿನ್ನಡೆ'

*   2225ನೇ ದಿನದ ಮಹದಾಯಿ ಹೋರಾಟ ವೇದಿಕೆಯಲ್ಲಿ ಜೋಗಣ್ಣವರ
*  13.40 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ ನ್ಯಾಯಾಧಿಕರಣ
*  ಯೋಜನೆ ಜಾರಿಗೆ ರಾಜ್ಯ ಸರ್ಕಾರ ವಿಫಲ 

SB Jogannavar Talks over Mahadayi Project grg

ನರಗುಂದ(ಆ.21):  ಈ ಭಾಗದ ರಾಜಕಾರಣಿಗಳ ನಿರ್ಲಕ್ಷ್ಯದಿಂದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಯಾಗಿಲ್ಲ ಎಂದು ರೈತ ಸೇನಾ ಸಂಘಟನೆ ಮುಖಂಡ ಎಸ್‌.ಬಿ. ಜೋಗಣ್ಣವರ ಆರೋಪಿಸಿದ್ದಾರೆ.

2225ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿದ ಅವರು, ಯೋಜನೆ ಜಾರಿಗೆ ಹಲವು ರೀತಿಯ ಹೋರಾಟಗಳು ನಡೆದಿವೆ. 13.40 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ನ್ಯಾಯಾಧಿಕರಣ ಅನುಮತಿ ನೀಡಿದೆ. ಕೇಂದ್ರ ಸರ್ಕಾರ ಕೂಡ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ. ಆದರೆ ಯೋಜನೆ ಜಾರಿಗೆ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.

ರಾಜ್ಯ ಸರ್ಕಾರ ಕೇವಲ ಬಜೆಟ್‌ನಲ್ಲಿ ಈ ಯೋಜನಗೆ ಹಣ ಮೀಸಲಾತಿ ಇಟ್ಟರೆ ಸಾಲದು. ಅದನ್ನು ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಬೇಕು. ಮಲಪ್ರಭಾ ಜಲಾಶಯಕ್ಕೆ ನೀರು ತರುವ ಕೆಲಸ ಮಾಡಬೇಕು. ಆದರೆ ತಮ್ಮ ರಾಜಕೀಯಕ್ಕೆ ಧಕ್ಕೆಯಾಗುತ್ತದೆ ಎನ್ನುವ ಕಾರಣಕ್ಕೆ ಈ ಭಾಗದ ರಾಜಕಾರಣಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲ ಎಂದರು.

ಹೊಸ ಸಚಿವರಿಗೆ ಹಳೆ ಸಮಸ್ಯೆಗಳೇ ಸವಾಲು: ಮುನೇನಕೊಪ್ಪ ಮೇಲೆ ಅಪಾರ ನಿರೀಕ್ಷೆ

ರೈತ ಸೇನಾ ಸದಸ್ಯ ಅರ್ಜುನ ಮಾನೆ ಮಾತನಾಡಿ, ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ರೈತರು ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನ ಜೋಳ, ಬಿ.ಟಿ. ಹತ್ತಿ, ಈರುಳ್ಳಿ, ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಎಲ್ಲರೂ ಬೆಳೆ ವಿಮೆ ತುಂಬಿದ್ದಾರೆ. ಜುಲೈ ತಿಂಗಳಲ್ಲಿ ಸುರಿದ ಮಹಾಮಳೆಯಿಂದ ಬೆಳೆಗಳು ಹಾಳಾಗಿವೆ. ರೈತರು ಹೊಲ ಸ್ವಚ್ಛ ಮಾಡಿ ಮರು ಬಿತ್ತನೆ ಮಾಡುವ ಸಮಯದಲ್ಲಿ ವಿಮೆ ಕಂಪನಿಯ ಪ್ರತಿನಿಧಿಗಳು ಬೆಳೆಹಾನಿ ಸಮೀಕ್ಷೆ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ಪರಶುರಾಮ ಜಂಬಗಿ, ವೀರಬಸಪ್ಪ ಹೂಗಾರ, ಸುಭಾಸ ಗಿರಿಯಣ್ಣವರ, ವಿಜಯಕುಮಾರ ಹೂಗಾರ, ಯಲ್ಲಪ್ಪ ಚಲವಣ್ಣವರ, ಶಿವಪ್ಪ ಸಾತಣ್ಣವರ, ಶ್ರೀಶೈಲ ಮೇಟಿ, ಹನುಮಂತ ಸರನಾಯ್ಕರ, ವಾಸು ಚವ್ಹಾಣ, ರಾಮಚಂದ್ರ ಸಾಬಳೆ, ಮಲ್ಲೇಶಪ್ಪ ಅಣ್ಣಿಗೇರಿ, ಅನಸವ್ವ ಶಿಂದೆ, ಬಸವ್ವ ಪೂಜಾರಿ, ಮಲ್ಲವ್ವ ಭೋವಿ, ನಾಗರತ್ನಾ ಸವಳಭಾವಿ ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios