ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಶರಣ್ಯ ಎಂಬ ಮಹಿಳೆ ನಾಪತ್ತೆಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರೂ, ಅವರ ಯಾವುದೇ ಸುಳಿವು ಲಭ್ಯವಾಗಿಲ್ಲ.
ಮಡಿಕೇರಿ: ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಮಹಿಳೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾದವರನ್ನು ಶರಣ್ಯ (36) ಎಂದು ಗುರುತಿಸಲಾಗಿದ್ದು, ಕಳೆದ ಎರಡು ದಿನಗಳಿಂದ ಅವರ ಸುಳಿವು ಸಿಕ್ಕಿಲ್ಲ. ಶರಣ್ಯ ಅವರು ವಿರಾಜಪೇಟೆ ತಾಲ್ಲೂಕಿನ ಯವಕಪಾಡಿ ಪ್ರದೇಶದಲ್ಲಿರುವ ಹೋಂಸ್ಟೇಯಲ್ಲಿ ತಂಗಿದ್ದು, ಪ್ರವಾಸದ ಭಾಗವಾಗಿ ಗುರುವಾರ (ಏಪ್ರಿಲ್ 2) ಚಾರಣಕ್ಕೆ ತೆರಳಿದ್ದರು. ಆರಂಭದಲ್ಲಿ ಇತರರೊಂದಿಗೆ ಚಾರಣಕ್ಕೆ ಹೊರಟಿದ್ದರೂ, ನಂತರ ಯಾವ ಹಂತದಲ್ಲಿ ಅವರು ತಂಡದಿಂದ ಬೇರ್ಪಟ್ಟರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಎರಡು ದಿನಗಳಿಂದ ಸುಳಿವು ಇಲ್ಲ
ಚಾರಣಕ್ಕೆ ತೆರಳಿದ ಬಳಿಕ ಶರಣ್ಯ ಅವರ ಸಂಪರ್ಕ ಕಡಿತಗೊಂಡಿದ್ದು, ಎರಡು ದಿನಗಳಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದರಿಂದ ಕುಟುಂಬದವರು ಹಾಗೂ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ತಡಿಯಂಡಮೋಳ್ ಬೆಟ್ಟದ ಅರಣ್ಯ ಪ್ರದೇಶಗಳಲ್ಲಿ ತಂಡಗಳು ವ್ಯಾಪಕವಾಗಿ ಹುಡುಕಾಟ ನಡೆಸುತ್ತಿವೆ.
ನಿನ್ನೆ ತಡರಾತ್ರಿವರೆಗೂ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಶರಣ್ಯ ಅವರಿಗಾಗಿ ಹುಡುಕಾಟ ಮುಂದುವರಿಸಿದ್ದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇಂದೂ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಆತಂಕದಲ್ಲಿರುವ ಕುಟುಂಬಸ್ಥರು
ಪ್ರವಾಸಕ್ಕಾಗಿ ಕೊಡಗಿಗೆ ಬಂದಿದ್ದ ಶರಣ್ಯ ಅವರ ನಾಪತ್ತೆ ಪ್ರಕರಣ ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ. ಶೀಘ್ರದಲ್ಲೇ ಮಹಿಳೆಯನ್ನು ಪತ್ತೆಹಚ್ಚಲು ಅಧಿಕಾರಿಗಳು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರಸ್ತುತ ಪೊಲೀಸರು ಮತ್ತು ಅರಣ್ಯ ಇಲಾಖೆ ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಮುಂದಿನ ಪ್ರತೀ ಕ್ಷಣವೂ ಅತ್ಯಂತ ಮಹತ್ವದ್ದಾಗಿವೆ.
ಬೆಟ್ಟದ ಬಗ್ಗೆ ಎಷ್ಟು ಗೊತ್ತು?
ತಡಿಯಂಡಮೋಳ್ ಬೆಟ್ಟವು ಕೊಡಗು ಜಿಲ್ಲೆಯಲ್ಲಿರುವ ಅತ್ಯಂತ ಎತ್ತರವಾದ ಬೆಟ್ಟ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತದೆ. ಇದು ಸಮುದ್ರ ಮಟ್ಟದಿಂದ 1,748 ಮೀಟರ್ ಎತ್ತರದಲ್ಲಿದೆ. ತಡಿಯಂಡಮೋಳ್ ಬೆಟ್ಟವನ್ನು1994ರಿಂದಲೂ ಏರುತ್ತಿದ್ದಾರೆ. ಇದು ವಿರಾಜಪೇಟೆಯಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಬೆಟ್ಟದ ಮೇಲೆ ಹುಲ್ಲುಗಾವಲು ಇದ್ದು, ಬೆಟ್ಟದ ಸುತ್ತ ಶೋಲ ಅರಣ್ಯವಿದೆ. ಬೆಟ್ಟದ ಕೆಳಭಾಗದಲ್ಲಿ ನಾಲ್ಕು ನಾಡು ಅರಮನೆ ಇದೆ. ಈ ಅರಮನೆಗೆ ಕೆಲವು ಶತಮಾನಗಳ ಇತಿಹಾಸವಿದೆ. ಸ್ಥಳೀಯ ಭಾಷೆಯಲ್ಲಿ ತಡಿಯಂಡಮೋಳ್ ಎಂದರೆ ಎತ್ತರವಾದ ಬೆಟ್ಟ ಎಂದು ಅರ್ಥ.


