ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಕಾಂಗ್ರೆಸ್ ಪಕ್ಷ ಬಿಡುವ ಬಗ್ಗೆ ಅಚ್ಚರಿಯ ಮುನ್ಸೂಚನೆ ನೀಡಿದ್ದಾರೆ. ಕ್ಷೇತ್ರ ಮರುವಿಂಗಡಣೆ ಬಳಿಕ ತಮ್ಮ ರಾಜಕೀಯ ನಿಲುವು ಬದಲಾಗಬಹುದು ಎಂದು ಅವರು ತಿಳಿಸಿದ್ದಾರೆ. ಇತ್ತ, ಪಕ್ಷ ವಿರೋಧಿ ಚಟುವಟಿಕೆಗಾಗಿ ರಾಜಣ್ಣ ಅವರನ್ನು ಉಚ್ಚಾಟಿಸುವಂತೆ ಸಚಿವ ಎಚ್.ಸಿ. ಬಾಲಕೃಷ್ಣ ಆಗ್ರಹಿಸಿದ್ದಾರೆ.

ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೂ ಆಗಿರುವ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಕಾಂಗ್ರೆಸ್ ಪಕ್ಷ ಬಿಡುವ ಮುನ್ಸೂಚನೆಯನ್ನು ನೀಡಿದ್ದಾರೆ. ಈಗ ಸದ್ಯಕ್ಕೆ ಕಾಂಗ್ರೆಸ್ಸಲ್ಲೇ ಇರುತ್ತೇನೆ. ಮುಂದಿನ ದಿನಗಳನ್ನು ನೋಡೋಣ ಎನ್ನುವ ಮೂಲಕ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ತುರುವೇಕೆರೆಯಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ್ದ ಅವರು, ಮುಂದೆ ಕ್ಷೇತ್ರ ಮರುವಿಂಗಡಣೆ ಆಗುವ ಸಂಭವವಿದೆ. ಅಲ್ಲಿವರೆಗೂ ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ. ಆಮೇಲೆ ರಾಜಕೀಯದಲ್ಲಿ ಏನೇನಾಗುತ್ತೋ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿದ್ದವರು, ಬಿಜೆಪಿ, ಜೆಡಿಎಸ್‌ಗೆ ಹೋಗ್ತಾರೆ. ಬಿಜೆಪಿ, ಜೆಡಿಎಸ್‌ನಲ್ಲಿದ್ದವರು ಕಾಂಗ್ರೆಸ್‌ಗೆ ಹೋಗ್ತಾರೆ, ಆಗ ಏನಾಗುತ್ತೋ ನೋಡೋಣ ಎಂದು ಮಾಜಿ ಸಚಿವ, ಶಾಸಕ ಕೆ.ಎನ್. ರಾಜಣ್ಣ ಹೇಳಿದರು.

ಮುಂದೆ ಮಧುಗಿರಿ ಜಿಲ್ಲೆ ಆಗಲಿದೆ. ಆಗ ನಾನು ಲೋಕಸಭೆಗೆ ಸ್ಪರ್ಧಿಸುವೆ, ಮಗ ರಾಜೇಂದ್ರ ಎಂಎಲ್‌ಎಗೆ ಸ್ಪರ್ಧಿಸುತ್ತಾನೆ ಎಂದರು. ಯಾವ ಪಕ್ಷದಿಂದ ಎಂಬ ಪ್ರಶ್ನೆಗೆ ಉತ್ತರಿಸಿ ಮುಂದೆ ನೋಡೋಣ ಎಂದರು. ರಾಜಕೀಯ ನಿಂತ ನೀರಲ್ಲ. ಏನು ಬೇಕಾದರೂ ಆಗಬಹುದು. ಸದ್ಯಕ್ಕಂತೂ ನಾನು ಕಾಂಗ್ರೆಸ್‌ನಲ್ಲೇ ಇದ್ದೇನೆ. ಚುನಾವಣೆ ತನಕ ಇಲ್ಲೇ ಇರುತ್ತೇನೆ. ಮುಂದೆ ನೋಡೋಣ ಎಂದರು.

ಪಕ್ಷ ವಿರೋಧಿಗಳನ್ನು ಮೊದಲು ಹೊರಹಾಕಬೇಕು-ಬಾಲಕೃಷ್ಣ

ಚಿತ್ರದುರ್ಗದ ಹಿರಿಯೂರು ತಾಲೂಕಿನ ಧರ್ಮಪುರದಲ್ಲಿ ಮಂಗಳವಾರ ಕೆ.ಎನ್.ರಾಜಣ್ಣರವರ ವಿರುದ್ಧ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದ್ದರು. ಎಂಎಲ್‌ಸಿ ಚುನಾವಣೆ ಮೇಲೆ ಸ್ಟಿಂಗ್ ಇಂಪ್ಯಾಕ್ಟ್ ಎಂದು ಕೆ.ಎನ್.ರಾಜಣ್ಣ ರವರ ಹೇಳಿಕೆ ಬಗ್ಗೆ ಸುದ್ದಿಗಾರರು ಪ್ರಶ್ನಿಗೆ ಪ್ರತಿಕ್ರಿಯಿಸಿದ ಅವರು ಕೆ.ಎನ್.ರಾಜಣ್ಣ ಮತ್ತು ಅವರ ಮಗ ರಾಜೇಂದ್ರ ರಾಜಣ್ಣ ಎಂಎಲ್‌ಸಿ ಚುನಾವಣೆ ಮಾಡಿಲ್ಲ. ಕಾಂಗ್ರೆಸ್‌ಗೆ ಮತ ಹಾಕಿಸಿಲ್ಲ. ಮತ ಹಾಕಿಸಿದ್ದಾಗಿ ರಾಜಣ್ಣ ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ. ಅವರು ಯಾವ ದೇಗುಲಕ್ಕೆ ಬರ್ತಾರೆ ಬರಲಿ ನಾನು ಬರುತ್ತೇನೆ. ಇಂತಹ ಪಕ್ಷ ವಿರೋಧಿಗಳನ್ನು ಮೊದಲು ಪಕ್ಷದಿಂದ ಹೊರ ಹಾಕಬೇಕು. ರಾಜಣ್ಣ ಪಕ್ಷದಲ್ಲಿದ್ದುಕೊಂಡು ಹೀಗೆ ಮಾಡಬಾರದು. ಪಕ್ಷದ್ರೋಹ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದರು.