ರೈತರು ಬದುಕೋದಕ್ಕೆ ನೀರು ಕೊಡಿ ಅಂದ್ರೆ, ಸತ್ತೋರ ಹೆಸರಲ್ಲಿ ಬೋರ್‌ವೆಲ್ ಕೊರೆಸ್ತಿದೆ ಸರ್ಕಾರ!
ಬಡವರ ಬೆಳೆಗಳನ್ನು ಉಳಿಸೋದಕ್ಕೆ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆಸಿ ನೀರು ಕೊಡಿ ಎಂದರೆ, ಸತ್ತೋರ ಹೆಸರಿಗೆ ಯೋಜನೆ ಮಂಜೂರು ಮಾಡಲಾಗುತ್ತಿದೆ.
ವರದಿ : ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.14): ಬಡ, ಸಣ್ಣ ರೈತರ ಅಭಿವೃದ್ಧಿಗಾಗಿ ಎಸ್ಸಿ, ಎಸ್ಟಿ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ ಜಾರಿ ಮಾಡಲಾಗುತ್ತಿದೆ. ಇಲ್ಲಿ ಮಾತ್ರ ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿ ದಾಖಲೆಗೆ ಮಾತ್ರವೇ ಸೀಮಿತವಾಗಿದೆ. ಅಷ್ಟೇ ಅಲ್ಲ ಸತ್ತವರ ಹೆಸರಿಗೂ ಇಲಾಖೆ ಯೋಜನೆಯ ಫಲಾನುವಿಯಾಗಿ ಆಯ್ಕೆ ಮಾಡಿದೆ.
ಹೌದು, ಇಂತಹ ಅಚ್ಚರಿಯ ಮತ್ತು ಅವ್ಯವಹಾರದ ಸಾಧ್ಯತೆ ಇರುವ ಘಟನೆ ನಡೆದಿರುವುದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಸೂಳೆಭಾವಿ ಹಾಡಿಯಲ್ಲಿ. ಹಾಡಿಯ ವಸಂತ, ರಾಜು, ಜೆ.ಕೆ. ತಮ್ಮ ಹಾಗೂ ರಾಜು ಕಲ್ಲಹಳ್ಳಿ ಎಂಬುವರು ಗಂಗಾ ಕಲ್ಯಾಣ ಯೋಜನೆಗೆ ಆಯ್ಕೆಯಾಗಿರುವುದಾಗಿ 2021 ಮತ್ತು 22 ನೇ ಸಾಲಿನಲ್ಲಿಯೇ ಇಲಾಖೆ ಅಧಿಕಾರಿಗಳು ಆದೇಶ ಪತ್ರ ನೀಡಿದ್ದಾರೆ. ಅಂದರೆ, ಆದೇಶ ಪತ್ರ ನೀಡಿ ಎರಡು ವರ್ಷ ಕಳೆದು ಮೂರನೆ ವರ್ಷ ನಡೆಯುತ್ತಿದೆ.
ವಿಪರ್ಯಾಸವೆಂದರೆ ಇದುವರೆಗೆ ಕೊಳವೆ ಬಾವಿ ಕೊರೆಸಿಕೊಟ್ಟಿಲ್ಲ. ಕೊಳವೆ ಬಾವಿ ಕೊರೆಸಿಕೊಟ್ಟರೆ ನಾವು ಎಲ್ಲರಂತೆ ವಿವಿಧ ಬೆಳೆಗಳನ್ನು ಬೆಳೆದು ನೆಮ್ಮದಿ ಬದುಕು ಕಟ್ಟಿಕೊಳ್ಳಬಹುದು ಎನ್ನುವ ಆಸೆಗಣ್ಣಿನಿಂದಲೇ ಕಾಲ ದೂಡುತ್ತಿದ್ದಾರೆ. ಒಂದೆರಡು ಎಕರೆ ಜಮೀನು ಮಾತ್ರವೇ ನಮಗೆ ಇದ್ದು, ಇಲ್ಲಿ ಬೀಳುವ ಮಳೆಯನ್ನು ನಂಬಿ ಭತ್ತ, ಸ್ವಲ್ವ ಕಾಫಿ ಬೆಳೆ ಬೆಳೆದಿದ್ದೇವೆ. ಇನ್ನೊಂದೆರಡು ತಿಂಗಳು ಕಳೆದರು ನಾವು ಕಷ್ಟಪಟ್ಟು ಬೆಳೆದ ಬೆಳೆ ಒಣಗಿ ಹೋಗುತ್ತವೆ. ಇದನ್ನು ನೋಡಿದರೆ ಕಣ್ಣಲ್ಲಿ ನೀರಲ್ಲ, ರಕ್ತ ಬರುತ್ತದೆ.
ಇನ್ಫೋಸಿಸ್ ನಾರಾಯಣಮೂರ್ತಿ ಗುಟ್ಟು ರಟ್ಟು; ಬೆಳಗ್ಗೆ 6ಕ್ಕೆ ಆಫೀಸು, ರಾತ್ರಿ 9ಕ್ಕೆ ಮನೆಗೆ ವಾಪಸು!
ಹೀಗಾಗಿ ಆದಷ್ಟು ಬೇಗ ಕೊಳವೆ ಬಾವಿ ಕೊರಿಸಿ ಕೊಡಲಿ ಎಂದು ಹಲವು ಬಾರಿ ಅಧಿಕಾರಿಗಳನ್ನು ಕೇಳಿದ್ದೇವೆ. ಹೋಗಿ ಅಧಿಕಾರಿಗಳನ್ನು ಕೇಳಿದಾಗಲೆಲ್ಲಾ ಅಧಿಕಾರಿಗಳದ್ದು ಒಂದೇ ಉತ್ತರ, ನೀವು ಜಾತಿ, ಆದಾಯ ದೃಢೀಕರಣ ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ನೀಡಿ ಎನ್ನುತ್ತಾರೆ. ಅಧಿಕಾರಿಗಳು ಹೀಗೆ ಕೇಳಿದಾಗಲೆಲ್ಲಾ ಎಲ್ಲಾ ದಾಖಲೆಗಳನ್ನು ಕೊಟ್ಟು ಸಾಕಾಗಿ ಹೋಗಿದೆ. ಆದರೆ ಕೊಳವೆ ಬಾವಿಯನ್ನು ಕೊರೆದು ಕೊಡುತ್ತಿಲ್ಲ ಎಂದು ಆದಿವಾಸಿ ಬುಡಕಟ್ಟು ಸಮುದಾಯದ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿ ವಸಂತ ಬೇಸರ ವ್ಯಕ್ತಪಡಿಸುತ್ತಾರೆ.
ಎಸ್ಸಿ, ಎಸ್ಟಿ ಅಭಿವೃದ್ಧಿ ನಿಗಮ ಆದಿವಾಸಿ ಬುಡಕಟ್ಟು ಸಮುದಾಯದ ನಾಲ್ಕು ಕುಟುಂಬಗಳಿಗೆ ಕೊಳವೆ ಬಾವಿ ಕೊರೆಯಿಸಿ ಕೊಡಲು ಆಯ್ಕೆ ಮಾಡಿದೆ. ಅವರಿಗೆ ಆದೇಶ ಪತ್ರವನ್ನು ನೀಡಿದೆ. ಅಚ್ಚರಿಯೆಂದರೆ ಯೋಜನೆಗೆ ಎರಡು ವರ್ಷಗಳ ಹಿಂದೆ ಆಯ್ಕೆಯಾಗಿರುವ ಫಲಾನುಭವಿಯೊಬ್ಬರು ಮೃತಪಟ್ಟು ಹಲವು ವರ್ಷಗಳೇ ಕಳೆದಿವೆ. ರಾಜುಪುಟ್ಟ ಎನ್ನುವವರು ಮೃತಪಟ್ಟು ಹಲವು ವರ್ಷಗಳೇ ಕಳೆದಿವೆ. ಆದರೂ ಅವರ ಹೆಸರಿಗೆ ಕೊಳವೆ ಬಾವಿ ಕೊರೆಸಿಕೊಡಲು ಆಯ್ಕೆ ಮಾಡಿರುವುದು ಅಚ್ಚರಿ ಎನ್ನುತ್ತಾರೆ ವಸಂತ. ಅವರ ಮೊಮ್ಮಮ್ಮಕ್ಕಳು ಬೇರೆ ಊರಿನಲ್ಲಿ ಅವರ ತಾತನ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಹಾವೇರಿ ಗ್ಯಾಂಗ್‌ರೇಪ್ ಸಂತ್ರಸ್ತೆಗೆ ಜೀವ ಭಯವಿದ್ದರೂ, ಒಂಟಿಯಾಗಿ ಮನೆಗೆ ಬಿಟ್ಟು ಹೋದ ಪೊಲೀಸರು
ಇದೆಲ್ಲವನ್ನು ನೋಡಿದರೆ ಏನೋ ಅವ್ಯವಹಾರ ಆಗಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಏನೇ ಆಗಲಿ ಬಡ ಸಣ್ಣ ರೈತರ ಬದುಕನ್ನು ಹಸನು ಮಾಡುವುದಕ್ಕಾಗಿ ಗಂಗಾ ಕಲ್ಯಾಣ ಯೋಜನೆ ಮೂಲಕ ಕೊಳವೆ ಬಾವಿ ಕೊರೆಸಿ ಕೊಡುವುದಾಗಿ ಎರಡು ವರ್ಷಗಳಿಂದ ಹೇಳುತ್ತಲೇ ಬರುತ್ತಿರುವ ಅಧಿಕಾರಿಗಳು, ಈಗಲಾದರೂ ಕೊಳವೆ ಬಾವಿ ಕೊರೆಸಿಕೊಡಲಿ ಎನ್ನುವುದು ನಮ್ಮ ಆಗ್ರಹ.