ನೀಟ್ ಪರೀಕ್ಷೆಯ ಅಕ್ರಮದಿಂದಾಗಿ ಜೂನ್‌ನಲ್ಲಿ ಸಾವು ಕಂಡ ಕೇರಳದ ಯುವತಿಯ ಅಣ್ಣ, ತಂಗಿಯ ಅಗಲಿಕೆಯ ನೋವಿನಿಂದ ಮಂಗಳೂರಿನ ಹೋಟೆಲ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ. 24 ವರ್ಷದ ಅರ್ಜುನ್, ತೀವ್ರ ಖಿನ್ನತೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ.

ಮಂಗಳೂರು (ಆ.11): ನೀಟ್ (NEET) ಪರೀಕ್ಷೆಯ ಅಕ್ರಮದಿಂದ ಕಂಗೆಟ್ಟು ಕಳೆದ ಜೂನ್‌ನಲ್ಲಿ ಕೇರಳದ ಯುವತಿಯೊಬ್ಬಳು ಸಾವಿಗೆ ಶರಣಾಗಿದ್ದಳು. ಈಗ ಆಕೆಯ ಅಣ್ಣ, ತಂಗಿ ಇಲ್ಲದ ನೋವನ್ನು ತಾಳಲಾರದೆ, ಮಂಗಳೂರಿನ ಹೋಟೆಲ್ ಒಂದರಲ್ಲಿ ಸಾವಿಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ಕೇರಳದ ಕಾಸರಗೋಡು ಜಿಲ್ಲೆಯ ಮುಕ್ಕೊಡು ಮೂಲದ ಅರ್ಜುನ್ ಆರ್. ಮಹೇಶ್ (24) ಮೃತ ದುರ್ದೈವಿ. ಸುಮಾರು ಎರಡು ತಿಂಗಳ ಹಿಂದೆಯಷ್ಟೇ ಈತನ ತಂಗಿ ಸಾವಿಗೆ ಶರಣಾಗಿದ್ದಳು.ಈ ಆಘಾತದಿಂದ ಖಿನ್ನತೆಗೊಳಗಾಗಿದ್ದ ಅರ್ಜುನ್ ಸೋಮವಾರ ಮಂಗಳೂರಿನ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ದುಬೈನಲ್ಲಿ ನಿಸ್ಸಾನ್‌ ಆಟೋಮೊಬೈಲ್ ಎಂಜಿನಿಯರ್ ಆಗಿ ಉದ್ಯೋಗದಲ್ಲಿದ್ದ ಅರ್ಜುನ್, ಭಾನುವಾರ ಶಾರ್ಜಾದಿಂದ ವಿಮಾನವೇರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಬಳಿಕ ನಗರದ 'ಟ್ರಿಬೋ ಸ್ಕೈ ಸಿಟಿ ಗ್ರಾಂಡ್' ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದರು. ಆದರೆ, ತಾನು ಭಾರತಕ್ಕೆ ಬಂದಿರುವ ವಿಚಾರವನ್ನು ಕಾಸರಗೋಡಿನಲ್ಲಿರುವ ತಮ್ಮ ಕುಟುಂಬಸ್ಥರಿಗೆ ಅವರು ತಿಳಿಸಿರಲಿಲ್ಲ. ಸೋಮವಾರ ಅರ್ಜುನ್ ಇದ್ದ ಹೋಟೆಲ್ ಕೊಠಡಿಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ಅನುಮಾನಗೊಂಡ ಸಿಬ್ಬಂದಿ ಕೂಡಲೇ ಬಜಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಅರ್ಜುನ್ ಶವವಾಗಿ ಪತ್ತೆಯಾಗಿದ್ದಾರೆ.

ಸ್ಥಳದಲ್ಲಿ ಡೆತ್‌ನೋಟ್ ದೊರೆತಿದ್ದು, ಅದರಲ್ಲಿ ಅರ್ಜುನ್ ತಮ್ಮ ತಾಯಿಯಲ್ಲಿ ಕ್ಷಮೆ ಕೋರಿದ್ದಾರೆ. ಅಲ್ಲದೆ ತಮ್ಮ ಸಾವಿನ ಸುದ್ದಿಯನ್ನು ತಿಳಿಸಬೇಕಾದ ಪ್ರಮುಖ ಸ್ನೇಹಿತರ ಹೆಸರುಗಳನ್ನು ಆ ಪತ್ರದಲ್ಲಿ ನಮೂದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಂಗಿಯ ಸಾವಿನಿಂದ ತೀವ್ರ ಖಿನ್ನತೆ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನಂತರ ಮರು-ಪರೀಕ್ಷೆಗೆ (Re-test) ಸಿದ್ಧತೆ ನಡೆಸುತ್ತಿದ್ದ ಅರ್ಜುನ್ ಅವರ ತಂಗಿ ಐಜಾ (19), ಕಳೆದ ಜೂನ್ 2 ರಂದು ಕೊಟ್ಟಾಯಂ ಜಿಲ್ಲೆಯ ತಮ್ಮ ಹಾಸ್ಟೆಲ್‌ನಲ್ಲಿ ಸಾವಿಗೆ ಶರಣಾಗಿದ್ದರು. ತಂಗಿಯ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲು ಭಾರತಕ್ಕೆ ಬಂದಿದ್ದ ಅರ್ಜುನ್, ಬಳಿಕ ದುಬೈಗೆ ಮರಳಿದ್ದರು.

ಆದರೆ ತಂಗಿಯನ್ನು ಕಳೆದುಕೊಂಡ ದುಃಖದಿಂದ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಭಾರತಕ್ಕೆ ಬರುವ ಮುನ್ನ ಕೆಲ ಸ್ನೇಹಿತರಿಗೆ ಮಾಹಿತಿ ನೀಡಿದ್ದ ಅರ್ಜುನ್, ಈ ವಿಷಯವನ್ನು ತಾಯಿ ರಾಧಿಕಾಗೆ ತಿಳಿಸದಂತೆ ಮನವಿ ಮಾಡಿದ್ದರು. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ತಾಯಿಗೆ ವಾಟ್ಸಾಪ್ ಕರೆ ಮಾಡಿದ್ದರೂ, ತಾನು ಭಾರತದಲ್ಲಿರುವುದನ್ನು ತಿಳಿಸಿರಲಿಲ್ಲ. ಭಾನುವಾರ ಸಂಜೆಯಿಂದ ಅರ್ಜುನ್ ಅವರ ಫೋನ್ ಸ್ವಿಚ್ ಆಫ್ ಆದಾಗ ಕುಟುಂಬಸ್ಥರು ಆತಂಕಗೊಂಡಿದ್ದರು.

ಬಜಪೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (Unnatural Death) ಪ್ರಕರಣ ದಾಖಲಾಗಿದೆ. ಶವಪರೀಕ್ಷೆಯ (Post-mortem) ನಂತರ ಅರ್ಜುನ್ ಅವರ ಮೃತದೇಹವನ್ನು ಕಾಸರಗೋಡಿನಲ್ಲಿರುವ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಕೇವಲ ಎರಡು ತಿಂಗಳ ಅಂತರದಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.