ಕಾಂಗ್ರೆಸ್ ಸಮಾವೇಶದಿಂದ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ವಿದ್ಯಾರ್ಥಿಯೇ ಮನೆಯಿಂದ ತಡವಾಗಿ ಬದರೆ ಇದರಲ್ಲಿ ಸರ್ಕಾರದ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು (ಜೂ.24): ‘ಕಾಂಗ್ರೆಸ್ ಸಮಾವೇಶದಿಂದ ನೀಟ್ ಪರೀಕ್ಷೆ ತಪ್ಪಿಸಿಕೊಂಡಿರುವ ಬಗ್ಗೆ ತನಿಖೆ ನಡೆಸಿದ್ದೇವೆ. ಮೂರನೇ ವಿದ್ಯಾರ್ಥಿಯು 1.30 ಗಂಟೆಗೆ ಡೆಡ್‌ಲೈನ್ ಇರುವ ಪರೀಕ್ಷೆಗೆ 12.57ಕ್ಕೆ ಮನೆ ಬಿಟ್ಟಿದ್ದಾರೆ. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಸಹಿತ ಎಲ್ಲಾ ದಾಖಲೆಗಳಿವೆ’ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಸಂಸದರ ಹೊಲಸು ರಾಜಕೀಯದಲ್ಲಿ ಆ ಮಕ್ಕಳನ್ನು ತರಬಾರದು ಎಂದು ದಾಖಲೆ ಹಾಗೂ ಸಿಸಿಟಿವಿ ದೃಶ್ಯಾವಳಿ ಬಿಡುಗಡೆ ಮಾಡದೆ ಸುಮ್ಮನಿದ್ದೇವೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನಾಚಿಕೆ ಇಲ್ಲದಂತಹ ತೇಜಸ್ವಿ ಸೂರ್ಯ ಅವರಿಗೆ ಏನೂ ಹೇಳಲಾಗುವುದಿಲ್ಲ. ಕಾಂಗ್ರೆಸ್ ಸಮಾವೇಶದಿಂದ ಮೂರು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ಮೂವರು ವಿದ್ಯಾರ್ಥಿಗಳಲ್ಲಿ ಒಬ್ಬರು ಹಿಂದಿನ ಪರೀಕ್ಷೆಯ ಪ್ರವೇಶ ಪತ್ರ ತಂದಿದ್ದರಿಂದ ಪರೀಕ್ಷಾ ಕೇಂದ್ರದವರು ಪ್ರವೇಶ ನಿರಾಕರಿಸಿದರು. ಇನ್ನು ಮತ್ತೊಬ್ಬರು ಮಾಗಡಿಯಿಂದ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ಹೀಗಾಗಿ ಈ ಇಬ್ಬರಿಗೂ ಕಾಂಗ್ರೆಸ್ ಸಮಾವೇಶಕ್ಕೂ ಸಂಬಂಧವಿಲ್ಲ ಎಂದು ಸೋಮವಾರವೇ ಸ್ಪಷ್ಟಪಡಿಸಿದ್ದೆ ಎಂದು ಹೇಳಿದರು.
ವಿದ್ಯಾರ್ಥಿಯೇ ಲೇಟಾಗಿ ಬಂದರೆ ಸರ್ಕಾರದ ತಪ್ಪೇನು?
ಇನ್ನು ಮತ್ತೊಬ್ಬರು ಆರ್.ಟಿ.ನಗರ ಕಡೆಯಿಂದ ಬಂದಿದ್ದು ಅವರಿಗೆ ಕಾಂಗ್ರೆಸ್ ಸಮಾವೇಶದ ಸಂಚಾರದಟ್ಟಣೆಯಿಂದ ಸಮಸ್ಯೆಯಾಗಿರಬಹುದು ಎಂಬ ಕಾರಣಕ್ಕೆ ತನಿಖೆಗೆ ಸೂಚಿಸಲಾಗಿತ್ತು. ಪರೀಕ್ಷೆಗೆ ಡೆಡ್‌ಲೈನ್ ಇರುವುದು 1.30 ಗಂಟೆಗೆ ಆದರೆ ಅವರು ಮನೆ ಬಿಟ್ಟಿರುವುದೇ 12.57 ಗಂಟೆಗೆ. ಇಂತಹ ಮಹತ್ವದ ಪರೀಕ್ಷೆಗೆ ಅಷ್ಟು ವಿಳಂಬವಾಗಿ ಮನೆ ಬಿಟ್ಟರೆ ಇದರಲ್ಲಿ ಸರ್ಕಾರದ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿ ಮತ್ತು ಪೋಷಕರದ್ದೇ ತಪ್ಪಿದೆ
ಈ ಬಗ್ಗೆ ಎಲ್ಲಾ ದಾಖಲೆಗಳನ್ನೂ ಸಂಗ್ರಹಿಸಿದ್ದೇವೆ. ಅವರ ಮನೆಗೆ ಹೋಗಿ ಅವರ ಪೋಷಕರ ಹೇಳಿಕೆಯನ್ನೂ ತೆಗೆದುಕೊಂಡಿದ್ದೇವೆ. 11 ಗಂಟೆಗೆ ಪರೀಕ್ಷಾ ಕೇಂದ್ರ ತೆರೆಯುತ್ತದೆ. ಹೀಗಿದ್ದರೂ ವಿದ್ಯಾರ್ಥಿ 12.57ರವರೆಗೆ ಮನೆಯಲ್ಲೇ ಇದ್ದರು. ಅವರು ಜವಾಬ್ದಾರಿಯಿಂದ ಬೇಗ ಮನೆ ಬಿಡಬಹುದಿತ್ತು. ಅವರು ಯಾವಾಗ ರೈಡ್ ಬುಕ್ ಮಾಡಿದರು? ಯಾವಾಗ ಮನೆ ಬಿಟ್ಟರು ಎಂಬುದೆಲ್ಲದರ ಬಗ್ಗೆಯೂ ಸಿಸಿಟಿವಿ ದೃಶ್ಯಾವಳಿ ಇದೆ. ಸಂಸದರ ಹೊಲಸು ರಾಜಕೀಯದಲ್ಲಿ ಆ ಮಕ್ಕಳನ್ನು ತರಬಾರದು ಎಂದು ಹೊರಗೆ ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಹಾರದಲ್ಲಿ 30 ಮಂದಿ ಅಭ್ಯರ್ಥಿಗಳು ಬಂಧನಕ್ಕೆ ಒಳಗಾಗಿದ್ದಾರೆ. ಮಹಾರಾಷ್ಟ್ರ, ಮಧ್ಯಪ್ರವೇಶದಲ್ಲೂ ವಿದ್ಯಾರ್ಥಿಗಳು ತಡವಾಗಿ ಬಂದಿದ್ದರಿಂದ ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ. ಅದಕ್ಕೆಲ್ಲ ಆ ಸರ್ಕಾರಗಳು ಹೊಣೆಯೇ ಎಂದು ಪ್ರಶ್ನಿಸಿದರು.


