ನೀಟ್‌ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಪ್ರತಿಪಕ್ಷಗಳು ಬಿಗಿಪಟ್ಟು ಹಿಡಿದಿವೆ. ಆದರೆ, ಜವಾಬ್ದಾರಿಯಿಂದ ಓಡಿಹೋಗುವುದಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರವು ರಾಜೀನಾಮೆ ಬೇಡಿಕೆಯನ್ನು ತಿರಸ್ಕರಿಸಿದ್ದು, ಈ ಜಟಾಪಟಿಯಿಂದ ಸಂಸತ್ ಕಲಾಪಗಳು ನಿರಂತರವಾಗಿ ಬಲಿಯಾಗುತ್ತಿವೆ.

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಜಿರಳೆ ಜನತಾ ಪಕ್ಷ (ಸಿಜೆಪಿ) ಬಿಗಿಪಟ್ಟು ಹಿಡಿದಿರುವ ಹೊರತಾಗಿಯೂ, ಅವರ ರಾಜೀನಾಮೆ ಪಡೆಯುವ ಪ್ರಶ್ನೆಯೇ ಸರ್ಕಾರದ ಮುಂದಿಲ್ಲ. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಬದಲು, ಜನಾದೇಶದಂತೆ ಕೆಲಸ ಮಾಡಲು ಸರ್ಕಾರ ನಿಶ್ಚಯಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನ್‌ ರಾಜೀನಾಮೆಗೆ ಸಿಜೆಪಿ ಹಾಗೂ ವಿಪಕ್ಷಗಳು ಪಟ್ಟು ಹಿಡಿದಿದ್ದು, ಈ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂದು ಸಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಆದರೆ ಇದಕ್ಕೆ ಕೇಂದ್ರ ಸರ್ಕಾರದ ಮೂಲಗಳು ಪ್ರತಿಕ್ರಿಯೆ ನೀಡಿ, ‘ಪ್ರಧಾನ್ ರಾಜೀನಾಮೆಯ ಪ್ರಶ್ನೆಯೇ ಇಲ್ಲ. ರಾಜೀನಾಮೆ ನೀಡಿ ಜವಾಬ್ದಾರಿಯಿಂದ ಓಡಿಹೋಗುವುದು ಅತ್ಯಂತ ಸುಲಭದ ಕೆಲಸವಾಗುತ್ತದೆ. ಜನರು ನಮಗೆ ಜನಾದೇಶ ನೀಡಿದ್ದಾರೆ ಮತ್ತು ನಾವು ಅದನ್ನು ಸಾಕಾರಗೊಳಿಸುತ್ತೇವೆ’ ಎಂದು ಸ್ಪಷ್ಟಪಡಿಸಿವೆ. ಹೀಗಾಗಿ ಸಿಜೆಪಿ ಮತ್ತು ಸರ್ಕಾರದ ನಡುವಿನ ಜಟಾಪಟಿ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.

ನೀಟ್‌ ಗದ್ದಲಕ್ಕೆ ಸತತ 5ನೇ ದಿನವೂ ಕಲಾಪಗಳು ಬಲಿ

ನವದೆಹಲಿ: ನೀಟ್‌ ಪ್ರಶ್ನೆಪತ್ರಿಕೆ ವಿವಾದ ಸತತ 5ನೇ ದಿನವೂ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳನ್ನು ಬಲಿ ಪಡೆದಿದೆ.

ನೀಟ್‌ ಸೋರಿಕೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ, ಸರ್ಕಾರ ಪರಿಚಯಿಸಲು ಮುಂದಾಗಿರುವ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ-2026 ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದವು. ಈ ಹಿನ್ನೆಲೆಯಲ್ಲಿ ಉಭಯ ಸದನಗಳ ಕಲಾಪವನ್ನು ಮುಂದೂಡಲಾಯಿತು. ಜು.20ರಿಂದ ಆರಂಭವಾಗಿರುವ ಅಧಿವೇಶನ ಇದೇ ಕಾರಣಕ್ಕೆ ಒಂದು ದಿನವೂ ಸುಗಮವಾಗಿ ನಡೆದಿಲ್ಲ.

ಪ್ರಧಾನ್‌ ರಾಜೀನಾಮೆ ಪಟ್ಟು ಸಡಿಲಿಸಲು ಸಿಜೆಪಿ ನಕಾರ

ಕೇಂದ್ರ ಶಿಕ್ಷಣ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸುತ್ತಿರುವ ಜಿರಳೆ ಪಕ್ಷ (ಸಿಜೆಪಿ) ಹಾಗೂ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಜಿತೇಂದ್ರ ಸಿಂಗ್‌ ನಡುವಿನ ಮಾತುಕತೆ ದೆಹಲಿಯ ವಿಠ್ಠಲ್‌ಭಾಯಿ ಪಟೇಲ್‌ ನಿವಾಸದಲ್ಲಿ ಶುಕ್ರವಾರ ನಡೆಯಿತು. ಆದರೆ ಸಿಜೆಪಿ ಪ್ರತಿನಿಧಿಗಳು ಪ್ರಧಾನ್ ರಾಜೀನಾಮೆ ಪಟ್ಟು ಸಡಿಲಿಸದಿದ್ದುದರಿಂದ ಯಾವುದೇ ತಾರ್ಕಿಕ ನಿರ್ಣಯಕ್ಕೆ ಬಾರದೆ ಸಭೆ ಅಂತ್ಯವಾಯಿತು. ಈ ಹಿನ್ನೆಲೆಯಲ್ಲಿ ಪುನಃ ಶನಿವಾರ ಸಭೆ ನಿಗದಿಪಡಿಸಲಾಗಿದೆ.

ಸಿಜೆಪಿ ನಾಯಕರೊಬ್ಬರ ಪ್ರಕಾರ, ಪ್ರಧಾನ್‌ ರಾಜೀನಾಮೆ ಬಗ್ಗೆ ನಿರ್ಧರಿಸಲು ಸರ್ಕಾರ ಶನಿವಾರದವರೆಗೆ ಸಮಯ ಕೇಳಿದೆ. ಆದರೆ ಮಾತುಕತೆಯಲ್ಲಿದ್ದ ನಡ್ಡಾ, ರಾಜೀನಾಮೆ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಸಭೆ ಶನಿವಾರ ಮುಂದುವರಿಯಲಿದೆ ಎಂದಷ್ಟೇ ಹೇಳಿದ್ದಾರೆ.

ಸರ್ಕಾರ ತಮ್ಮೊಡನೆ ಮಾತುಕತೆ ನಡೆಸಬೇಕು ಎಂದು ಸಿಜೆಪಿ ಕಳೆದೊಂದು ತಿಂಗಳಿನಿಂದ ಒತ್ತಾಯಿಸುತ್ತ ಬಂದಿತ್ತು. ಆದರೆ ನಡ್ಡಾ ನಿವಾಸದಲ್ಲಿ ಸಭೆ ನಡೆಸುವಂತಿಲ್ಲ, ಯಾವುದಾದರೂ ತಟಸ್ಥ ಸ್ಥಳದಲ್ಲಿ ನಡೆಸಬೇಕು ಎಂದು ನಂತರ ಪಟ್ಟು ಹಿಡಿಯಿತು. ಈ ಎಲ್ಲ ಜಟಾಪಟಿಗಳ ಬಳಿಕ ಶುಕ್ರವಾರ ವಿಠ್ಠಲ್‌ಭಾಯಿ ಪಟೇಲ್‌ ನಿವಾಸದಲ್ಲಿ ಸಭೆ ನಡೆಯಿತು. ಈ ಸಭೆಗೆ ಸಿಜೆಪಿ ಪ್ರತಿನಿಧಿಗಳಾಗಿ ಇಬ್ಬರು ಆಗಮಿಸಿದರೆ, ಸರ್ಕಾರದ ವತಿಯಿಂದ ನಡ್ಡಾ ಹಾಗೂ ಜಿತೇಂದ್ರ ಸಿಂಗ್‌ ಭಾಗವಹಿಸಿದ್ದರು. ಸುಮಾರು 2 ಗಂಟೆಗಳ ಕಾಲ ಮಾತುಕತೆ ನಡೆಯಿತು.

ಬೇಡಿಕೆ ಈಡೇರಿಕೆಗೆ ಪಟ್ಟು

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಜೆಪಿ ವಕ್ತಾರ ಸೌರವ್‌ ದಾಸ್‌, ‘ಪ್ರಧಾನ್ ರಾಜೀನಾಮೆ ಬೇಡಿಕೆಯಲ್ಲಿ ಯಾವುದೇ ರಾಜಿಯಿಲ್ಲ ಎಂದು ಕೇಂದ್ರ ಸಚಿವರಿಗೆ ತಿಳಿಸಿದ್ದೇವೆ. ನೀಟ್‌ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳಿಗೆ 1 ಕೋಟಿ ರು. ಪರಿಹಾರ ನೀಡಬೇಕು ಹಾಗೂ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದೇವೆ’ ಎಂದಿದ್ದಾರೆ. ‘ಸಿಜೆಪಿ ಬೇಡಿಕೆಗಳನ್ನು ಆಲಿಸಿದ್ದೇವೆ. ಶನಿವಾರ ಮತ್ತೆ ಭೇಟಿಯಾಗುತ್ತೇವೆ’ ಎಂದು ನಡ್ಡಾ ಮಾಹಿತಿ ನೀಡಿದ್ದಾರೆ.