ನೈಋತ್ಯ ಮಾನ್ಸೂನ್ ನಿರ್ಗಮನದ ಹಂತದಲ್ಲಿ ಹವಾಮಾನದಲ್ಲಾದ ದಿಢೀರ್ ಬದಲಾವಣೆಯಿಂದ ಕರಾವಳಿ, ಮಲೆನಾಡು ಮತ್ತು ಒಳನಾಡು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿ ಸುಳಿಯೇ ಈ ಅಕಾಲಿಕ ಮಳೆಗೆ ಪ್ರಮುಖ ಕಾರಣವಾಗಿದೆ. ಅಕ್ಟೋಬರ್ 10ರವರೆಗೆ ರಾಜ್ಯದ ಹಲವೆಡೆ ಈ ಮಳೆಯ ವಾತಾವರಣ ಮುಂದುವರಿಯಲಿದೆ.

ಮಂಗಳೂರು : ರಾಜ್ಯದಲ್ಲಿ ನೈಋತ್ಯ ಮಾನ್ಸೂನ್ ನಿರ್ಗಮನದ ಹಂತ ತಲುಪುತ್ತಿರುವಂತೆಯೇ, ಹವಾಮಾನದಲ್ಲಾದ ದಿಢೀರ್ ಬದಲಾವಣೆಯಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ. ಸುಳ್ಯ ತಾಲೂಕನ್ನು ಹೊರತುಪಡಿಸಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಹಲವೆಡೆ ಸೋಮವಾರ ಮಧ್ಯರಾತ್ರಿಯಿಂದಲೇ ಬೆಳಗ್ಗಿನವರೆಗೆ ಸಿಡಿಲು-ಮಿಂಚು ಸಹಿತ ಭಾರೀ ಮಳೆಯಾಗಿದೆ. ಭಾನುವಾರ ಸಂಜೆಯಿಂದಲೇ ದಕ್ಷಿಣ ಕನ್ನಡದ ಪಶ್ಚಿಮ ಘಟ್ಟದ ಅಂಚಿನ ಪ್ರದೇಶಗಳು ಹಾಗೂ ನೆರೆಯ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.

ಕರಾವಳಿ ಜಿಲ್ಲೆಗಳ ಹವಾಮಾನ ವರದಿ

ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆಯಂತೆ, ವಾತಾವರಣದಲ್ಲಿ ಉಂಟಾಗಿರುವ ಮೇಲ್ಮೈ ಸುಳಿ ಸುಳಿಯ ಪರಿಣಾಮ ಕರಾವಳಿ ಕರ್ನಾಟಕದಾದ್ಯಂತ ಹಗಲಿನ ವೇಳೆ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ.

ಸೋಮವಾರ ಮಧ್ಯಾಹ್ನದ ನಂತರ ಕರಾವಳಿಯ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ತಗ್ಗಲಿದೆಯಾದರೂ, ದಕ್ಷಿಣ ಕನ್ನಡ ಮತ್ತು ಉಡುಪಿಯ ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಪಶ್ಚಿಮ ದಿಕ್ಕಿನಿಂದ ಗಾಳಿ ಬಲವಾಗಿ ಬೀಸಿದರೆ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಬಹುದು. ಆದಾಗ್ಯೂ, ಅಕ್ಟೋಬರ್ 10 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಸಂಜೆ ವೇಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಉತ್ತರ ಕನ್ನಡದ ಕರಾವಳಿ ತಾಲೂಕುಗಳಲ್ಲೂ ಹಗಲಿನಲ್ಲಿ ಸಾಧಾರಣ ಮಳೆಯಾಗಲಿದೆ.

ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಹೇಗಿರಲಿದೆ ವಾತಾವರಣ?

ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಮುಂದಿನ ಒಂದೆರಡು ದಿನ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಸಾಗರ, ಹೊಸನಗರ, ತೀರ್ಥಹಳ್ಳಿ, ಶೃಂಗೇರಿ, ಮೂಡಿಗೆರೆ, ಸಕಲೇಶಪುರ ಮತ್ತು ಮಡಿಕೇರಿ ತಾಲೂಕುಗಳಲ್ಲಿ ಪ್ರತ್ಯೇಕ ಕಡೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ಎರಡು ದಿನಗಳ ನಂತರ ಅಕ್ಟೋಬರ್ 10ರವರೆಗೆ ಮಳೆಯ ಅಭಾವ ಕಡಿಮೆಯಾಗಲಿದ್ದು, ಆ ನಂತರ ಮಳೆ ಸಂಪೂರ್ಣ ಶಮನಗೊಳ್ಳುವ ನಿರೀಕ್ಷೆಯಿದೆ.

ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸದಾ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ತುಂತುರು ಹಾಗೂ ಸಾಧಾರಣ ಮಳೆಯಾಗಲಿದೆ.

ಉತ್ತರ ಒಳನಾಡು ಹಾಗೂ ಚಂಡಮಾರುತದ ಪ್ರಭಾವ

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ಹಗುರ ಮಳೆಯಾಗಲಿದೆ. ಬೆಳಗಾವಿಯ ಸಮೀಪ ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಉಂಟಾಗಿರುವ ಸಣ್ಣ ಪ್ರಮಾಣದ ವಾಯುಭಾರ ಕುಸಿತದ ಪರಿಣಾಮ ಈ ಭಾಗದಲ್ಲಿ ಮಳೆಯಾಗುತ್ತಿದೆ.

ಮಳೆಗೆ ಪ್ರಮುಖ ಕಾರಣವೇನು?

ನೈಋತ್ಯ ಮಾನ್ಸೂನ್ ಸಂಪೂರ್ಣವಾಗಿ ಹಿಂದೆ ಸರಿದು, ಈಶಾನ್ಯ ಮಾನ್ಸೂನ್ ಆರಂಭವಾಗುವ ಮೊದಲು ಪ್ರತಿವರ್ಷ ಅಕ್ಟೋಬರ್ ತಿಂಗಳಿನಲ್ಲಿ ಹವಾಮಾನದಲ್ಲಿ ಇಂತಹ ವೈಪರೀತ್ಯಗಳು ಸಹಜ. ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗುವ ಮೇಲ್ಮೈ ಸುಳಿ ಸುಳಿಯು ತೇವಾಂಶ ಭರಿತ ಮೋಡಗಳನ್ನು ಕೇರಳ ಹಾಗೂ ತಮಿಳುನಾಡಿನ ಮೂಲಕ ದಕ್ಷಿಣ ಭಾರತದತ್ತ ಸೆಳೆಯುತ್ತದೆ. ಪರಿಣಾಮವಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತದೆ.

ಕರಾವಳಿ ಜಿಲ್ಲೆಗಳಲ್ಲಿ ಭಾನುವಾರದಿಂದ ಆರಂಭವಾಗಿರುವ ಈ ಮಳೆಯ ವಾತಾವರಣವು ಮಂಗಳವಾರದಿಂದ ಸ್ವಲ್ಪ ಕಡಿಮೆಯಾಗಬಹುದು. ಆದರೆ, ಸಂಜೆ ವೇಳೆ ಸುರಿಯುವ ಸಿಡಿಲು-ಗುಡುಗು ಸಹಿತ ಮಳೆಯು ಮುಂಬರುವ 3 ರಿಂದ 4 ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.