- Home
- Karnataka Districts
- ಕಾಫಿನಾಡಲ್ಲಿ ಬೆಳ್ಳಂಬೆಳಗ್ಗೆ ಭರ್ಜರಿ ಮಳೆ: ಎರಡು ತಿಂಗಳ ಬಳಿಕ ಮಲೆನಾಡಿಗೆ ವರುಣನ ಎಂಟ್ರಿ, ರೈತರ ಮೊಗದಲ್ಲಿ ಸಂತಸ
ಕಾಫಿನಾಡಲ್ಲಿ ಬೆಳ್ಳಂಬೆಳಗ್ಗೆ ಭರ್ಜರಿ ಮಳೆ: ಎರಡು ತಿಂಗಳ ಬಳಿಕ ಮಲೆನಾಡಿಗೆ ವರುಣನ ಎಂಟ್ರಿ, ರೈತರ ಮೊಗದಲ್ಲಿ ಸಂತಸ
ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕಂಗಾಲಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ವರುಣದೇವ ಸಿಹಿಸುದ್ದಿ ನೀಡಿದ್ದಾನೆ. ಎರಡು ತಿಂಗಳ ಬಳಿಕ ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗಿದ್ದು, ಕಾಫಿ, ಮೆಣಸು ಮತ್ತು ಅಡಿಕೆ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ರಸ್ತೆಗಳು ಜಲಾವೃತ, ಕಾಲುವೆಗಳಲ್ಲಿ ನೀರು ಹರಿಯುತ್ತಿದೆ.

ಚಿಕ್ಕಮಗಳೂರು (ಅ.05): ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕಂಗಾಲಾಗಿದ್ದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಜನರಿಗೆ ವರುಣದೇವ ಭರ್ಜರಿ ಸಿಹಿಸುದ್ದಿ ನೀಡಿದ್ದಾನೆ. ಸುಮಾರು ಎರಡು ತಿಂಗಳ ಸುದೀರ್ಘ ವಿರಾಮದ ಬಳಿಕ ಜಿಲ್ಲೆಯಾದ್ಯಂತ ಬೆಳ್ಳಂಬೆಳಗ್ಗೆಯೇ ಭರ್ಜರಿ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಮಲೆನಾಡು ಭಾಗದ ಪ್ರಮುಖ ತಾಲೂಕುಗಳಾದ ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ, ಕಳಸ ಹಾಗೂ ಕೊಪ್ಪದಲ್ಲಿ ಮುಂಜಾನೆಯಿಂದಲೇ ಉತ್ತಮ ಮಳೆಯಾಗುತ್ತಿದೆ. ಚಿಕ್ಕಮಗಳೂರು ನಗರದಲ್ಲಿಯೂ ಬೆಳಗ್ಗೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ತಂಪಾದ ವಾತಾವರಣ ನಿರ್ಮಾಣವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಬತ್ತಿ ಹೋಗಿದ್ದ ಕಾಲುವೆಗಳಲ್ಲಿ ನೀರು ಹರಿಯಲಾರಂಭಿಸಿದೆ.
ಆಕಾಶ ನೋಡುತ್ತಿದ್ದ ಬೆಳೆಗಾರರು ಫುಲ್ ಖುಷ್:
ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಮಲೆನಾಡಿಗೆ ಮಳೆರಾಯ ಸಂಪೂರ್ಣವಾಗಿ ಕೈಕೊಟ್ಟಿದ್ದ. ಮಳೆಗಾಲದಲ್ಲೇ ಮಳೆ ಇಲ್ಲದೆ ಕಾಫಿ, ಮೆಣಸು, ಅಡಿಕೆ ಬೆಳೆಗಾರರು ಹಾಗೂ ರೈತರು ಆಕಾಶ ನೋಡುವಂತಾಗಿತ್ತು. ಬೆಳೆಗಳು ಒಣಗುವ ಭೀತಿಯಲ್ಲಿದ್ದ ಕೃಷಿಕರಿಗೆ ಇಂದಿನ ಮುಂಜಾನೆಯ ಮಳೆ ಸಂಜೀವಿನಿಯಂತೆ ಪರಿಣಮಿಸಿದೆ. ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಯನ್ನು ಕಂಡು ಮಲೆನಾಡಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದರೆ, ಇನ್ನೊಂದೆಡೆ ಬಯಲುಸೀಮೆ ಭಾಗಗಳಾದ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ಭಾಗದಲ್ಲಿ ಮಳೆಯ ಮುನ್ಸೂಚನೆಯಾಗಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಒಟ್ಟಾರೆಯಾಗಿ ಬಹಳ ದಿನಗಳ ನಂತರ ಬಂದ ಮಳೆ ಮಲೆನಾಡಿಗೆ ಮರುಜೀವ ನೀಡಿದೆ.

