ಬೆಳಗಾವಿಯಲ್ಲಿ ನಾಪತ್ತೆಯಾಗಿದ್ದ ರಕ್ಷಿತಾ ಎಂಬ ಯುವತಿಯ ಪ್ರಕರಣವು ಆಘಾತಕಾರಿ ತಿರುವು ಪಡೆದುಕೊಂಡಿದೆ. ಆಕೆಯ ಪ್ರಿಯಕರ, ಸಶಸ್ತ್ರ ಸೀಮಾ ಬಲದ ಕಾನ್‌ಸ್ಟೇಬಲ್ ಬಸಪ್ಪನೇ ಗೋಕಾಕ್ ಫಾಲ್ಸ್ ಬಳಿ ಘೋರ ಕೃತ್ಯ ನಡೆಸಿರೋದು ಬೆಳಕಿಗೆ ಬಂದಿದೆ. ಆಗಿದ್ದೇನು?

ಬೆಳಗಾವಿ: ಕೇಂದ್ರ ಸಶಸ್ತ್ರ ಸೀಮಾ ಬಲದ ಕಾನ್‌ಸ್ಟೇಬಲ್ ಒಬ್ಬ ಮಾಡಬಾರದ ಕೆಲಸ ಮಾಡಿ ಪೊಲೀಸರ ಅತಿಥಿ ಆಗಿದ್ದಾನೆ. ಪ್ರಕರಣ ಒಂದನ್ನು ದಾಖಲಿಸಿಕೊಂಡು ವಿಚಾರಣೆಗೆ ಇಳಿದಿದ್ದ ಪೊಲೀಸರೇ ಶಾಕ್ ಆಗಿದ್ದಾರೆ. ಯಾಕೆಂದರೆ, ಇಲ್ಲಿ ಕಾನೂನು ರಕ್ಷಕನೇ ಪೈಶಾಚಿಕ ಕೃತ್ಯ ಮೆರೆದಿರುವ ಆರೋಪ ಕೇಳಿಬಂದಿದೆ.

ಏನಿದು ಪ್ರಕರಣ?

ಬಸಪ್ಪ ಸಾತನ್ನವಣ್ಣರ್, ಗಂಭೀರ ಆರೋಪ ಹೊತ್ತ ಕಾನ್‌ಸ್ಟೇಬಲ್. ಬಸಪ್ಪ ಸಶಸ್ತ್ರ ಸೀಮಾ ಬಲದ ಕಾನ್‌ಸ್ಟೇಬಲ್ ಆಗಿದ್ದಾನೆ. ಇನ್ನು, ಪ್ರಕರಣ ಏನು ಅಂತಾ ನೋಡೋದಾದರೆ.. ಹಾರೋಗೇರಿ ಗ್ರಾಮದ ರಕ್ಷಿತಾ ಎಂಬ ಯುವತಿ ಅಕ್ಟೋಬರ್ 28 ರಂದು ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದಳು. ರಕ್ಷಿತಾಗಾಗಿ ಅವರ ಕುಟುಂಬ ತೀವ್ರ ಹುಡುಕಾಟ ನಡೆಸಿತ್ತು. ಆದರೆ ಎಲ್ಲಿಯೂ ಪತ್ತೆ ಆಗಿರಲಿಲ್ಲ. ಇದರಿಂದ ಗಾಬರಿಯಾದ ಕುಟುಂಬ, ರಕ್ಷಿತಾ ಅಣ್ಣನಿಂದ ಪೊಲೀಸರಿಗೆ ದೂರು ಕೊಡಿಸಿದ್ದರು.

ಕುಟುಂಬಸ್ಥರ ಜೊತೆ ಪೊಲೀಸರು ರಕ್ಷಿತಾಳ ಹುಡುಕಾಟಕ್ಕೆ ಸಾಥ್ ನೀಡಿದರು. ರಕ್ಷಿತಾ ಎಲ್ಲಿಗೆ ಹೋದಳು ಎಂದು ತೀವ್ರ ತನಿಖೆ ಆರಂಭಿಸಿದರು. ಈ ವೇಳೆ ಸಿಕ್ಕ ಸಣ್ಣ ಸುಳಿವಿನ ಆಧಾರದ ಮೇಲೆ ಬಸಪ್ಪನ ವಿಚಾರಣೆಗೆ ಕರೆದಿದ್ದಾರೆ. ಆಗ ಬಸಪ್ಪನ ನಡವಳಿಕೆ ಮೇಲೆ ಪೊಲೀಸರಿಗೆ ಮತ್ತಷ್ಟು ಅನುಮಾನ ಬಂದಿದೆ. ನಂತರ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಆರಂಭಿಸಿದಾಗ ಸತ್ಯವನ್ನು ಕಕ್ಕಿದ್ದಾನೆ ಎಂದು ತಿಳಿದುಬಂದಿದೆ.

ವಿಚಾರಣೆ ವೇಳೆ ಗೊತ್ತಾಗಿದ್ದೇನು?

ರಕ್ಷಿತಾ ಮತ್ತು ಬಸಪ್ಪ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೀತಿಯಲ್ಲಿ ಬಿದ್ದಿದ್ದ ರಕ್ಷಿತಾ, ಕಾನ್‌ಸ್ಟೇಬಲ್ ಬಸಪ್ಪನನ್ನು ಸಂಪೂರ್ಣ ನಂಬಿದ್ದಳು. ಅದರಂತೆ ಬಸಪ್ಪ ಕರೆದ ಕಡೆಗಳೆಲ್ಲ ಹೋಗುತ್ತಿದ್ದಳು. ಅಕ್ಟೋಬರ್ 28 ರಂದು ಪ್ರಿಯಕರ ಕರೆದ ಅಂತಾ ಸುತ್ತಾಡೋಕೆ ಹೋಗಿದ್ದಾಳೆ. ಸುತ್ತಾಡೋಕೆ ಹೋಗೋಣ ಬಾ ಎಂದ ಕರೆದ ಬಸಪ್ಪ, ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್‌ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಜೋಡಿ ನಿರ್ಜನ ಪ್ರದೇಶಕ್ಕೆ ತೆರಳಿದೆ. ಅಲ್ಲಿ ಇಬ್ಬರ ಮಧ್ಯೆ ಕೆಲವು ವಾಗ್ವಾದಗಳು ನಡೆದಿವೆ ಎನ್ನಲಾಗಿದೆ. ನಂತರ ಬಸಪ್ಪ, ರಕ್ಷಿತಾ ಮೇಲೆ ದಾಳಿ ಮಾಡಿದ್ದಾನೆ. ಮನಸೋ ಇಚ್ಛೆ ಹಲ್ಲೆ ನಡೆಸಿ, ಕೊನೆಗೆ ಆಕೆಯನ್ನ ಉಸಿರುಗಟ್ಟಿಸಿ ಜೀವ ತೆಗೆದಿದ್ದಾನೆ ಅನ್ನೋದು ಸದ್ಯದ ಮಾಹಿತಿ.

ರಕ್ಷಿತಾ ಪ್ರಾಣಬಿಡುತ್ತಿದ್ದಂತೆಯೇ ಆ ನಿರ್ಜನ ಪ್ರದೇಶದಿಂದ ಬಸಪ್ಪ ಜಾಗ ಖಾಲಿ ಮಾಡಿದ್ದಾನೆ. ನೇರವಾಗಿ ಮನೆಗೆ ಬಂದ ಬಸಪ್ಪ ಏನೂ ಆಗಿಲ್ಲ ಎನ್ನುವಂತೆ ಇದ್ದ. ಇಡೀ ಊರಿನಲ್ಲಿ ಓಡಾಡಿಕೊಂಡು ಅಡ್ಡಾಡುತ್ತಿದ್ದ. ಇದರ ಮಧ್ಯೆ ರಕ್ಷಿತಾ ಮನೆಯವರು ಹುಡುಕಾಟ ತೀವ್ರಗೊಳಿಸಿದ್ದರು. ನಂತರ ಪೊಲೀಸ್ ವಿಚಾರಣೆ ವೇಳೆ ಆರೋಪಿಯ ಅಸಲಿ ಮುಖ ಗೊತ್ತಾಗಿದೆ.

ಯಾಕೆ ಅಂತ ಕೃತ್ಯ?

ಪೊಲೀಸ್ ವಿಚಾರಣೆ ವೇಳೆ ತಪ್ಪನ್ನು ಬಸಪ್ಪ ಒಪ್ಪಿಕೊಂಡಿದ್ದಾನೆ. ನಾವಿಬ್ಬರು ಪ್ರೀತಿಸುತ್ತಿದ್ದೇವು. ಆದರೆ ರಕ್ಷಿತಾ ಮದುವೆ ವಿಚಾರ ಬಂದಾಗ ಏನೂ ಹೇಳುತ್ತಿರಲಿಲ್ಲ. ಪದೇ ಪದೇ ವಿಳಂಬ ಮಾಡುತ್ತಿದ್ದಳು, ಅದಕ್ಕೆ ಕೋಪಿಸಿಕೊಂಡು ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ. ಸದ್ಯ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.