ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಅವರು ಶೀಘ್ರದಲ್ಲೇ ನ್ಯೂಜಿಲೆಂಡ್‌ಗೆ ತೆರಳಿ ಭಾರತ 'ಎ' ತಂಡದ ಪರ ಆಡಲಿದ್ದಾರೆ. ಏಕದಿನ ಸರಣಿಗೆ ಲಭ್ಯವಾಗದಿದ್ದರೂ, ಮುಂಬರುವ ಟೆಸ್ಟ್ ಸರಣಿಯಲ್ಲಿ ಆಡುವ ನಿರೀಕ್ಷೆಯಿದೆ.

ಮುಂಬೈ: ಬಿಸಿಸಿಐನಿಂದ ಟೀಂ ಇಂಡಿಯಾಗೆ ಬರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಸದ್ಯ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಈಗಾಲೇ ಟಿ-20 ಸರಣಿಯನ್ನು ಗೆದ್ದುಕೊಂಡು ಏಕದಿನ ಪಂದ್ಯಗಳಿಗಾಗಿ ಎದುರು ನೋಡುತ್ತಿರುವ ಭಾರತ ತಂಡಕ್ಕೆ ಬಿಸಿಸಿಐ ಸಿಹಿ ಸುದ್ದಿ ನೀಡಿದೆ.

ಗಾಯದ ಸಮಸ್ಯೆಯಿಂದ ನ್ಯೂಜಿಲೆಂಡ್ ಪ್ರವಾಸದಿಂದ ಹೊರಬಿದ್ದಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಸಂಪೂರ್ಣ ಫಿಟ್ ಆಗಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ನ್ಯೂಜಿಲೆಂಡ್‌ಗೆ ಹಾರಲಿದ್ದಾರೆ. ಪ್ರಸಿದ್ಧ್ ಕೃಷ್ಣ ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಅವರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಅಂದ್ಹಾಗೆ ನಾಳೆಯಿಂದ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡವು ಏಕದಿನ ಸರಣಿಯನ್ನ ಆರಂಭಿಸಲಿದೆ. ಈ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳು ನಡೆಯಲಿವೆ. ಬಿಸಿಸಿಐ ಮೂಲಗಳ ಪ್ರಕಾರ ಪ್ರಸಿದ್ಧ್ ಕೃಷ್ಣ ಅವರು ಏಕದಿನ ಪಂದ್ಯಗಳಿಗೆ ಕಂಬ್ಯಾಕ್ ಮಾಡುವುದಿಲ್ಲ. ಅವರು ಏಕದಿನ ಪಂದ್ಯಗಳನ್ನ ಆಡುವುದು ಅನುಮಾನ. ಆದರೆ ಟೆಸ್ಟ್ ಸಿರೀಸ್‌ನಲ್ಲಿ ಕೃಷ್ಣ ಅವರು ಆಡಿಯೇ ಆಡುತ್ತಾರೆ ಎಂದು ಹೇಳಲಾಗಿದೆ.

ಕ್ರಿಕ್ ಬಜ್ ವರದಿ ಪ್ರಕಾರ.. ಪ್ರಸಿದ್ಧ್ ಕೃಷ್ಣ ಅವರು ಶೀಘ್ರದಲ್ಲೇ ನ್ಯೂಜಿಲೆಂಡ್‌ಗೆ ತೆರಳಲಿದ್ದಾರೆ. ಅಲ್ಲಿ ಅವರು ಭಾರತ ಎ ಪರ ಮೂರನೇ ಮತ್ತು ಅಂತಿಮ ಅನಧಿಕೃತ ಪಂದ್ಯವನ್ನು ಆಡಲಿದ್ದಾರೆ. ಈ ಪಂದ್ಯವು ನವೆಂಬರ್ 7 ರಂದು ಆರಂಭವಾಗಲಿದೆ. ಕೆಲವು ಮಾಹಿತಿಗಳ ಪ್ರಕಾರ ಪ್ರಸಿದ್ಧ್ ಅವರು ನವೆಂಬರ್ 1 ಮತ್ತು 2 ರಂದು ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಿತ್ತು. ಅಂತೆಯೇ ಫಿಟ್ನೆಸ್‌ಗೆ ಒಳಗಾಗಿದ್ದು, ಈ ಟೆಸ್ಟ್‌ನಲ್ಲಿ ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಘೋಷಿಸಲಾಗಿದೆ.

ವಿಂಡೀಸ್ ಸರಣಿಯಲ್ಲಿ ಪ್ರಸಿದ್ಧ್‌ಗೆ ಗಾಯ

ಕಳೆದ ಸೆಪ್ಟೆಂಬರ್‍‌ನಲ್ಲಿ ಭಾರತ ತಂಡವು ವೆಸ್ಟ್‌ ವಿಂಡೀಸ್ ವಿರುದ್ಧ ಏಕದಿನ ಪಂದ್ಯಗಳನ್ನ ಆಡಿತ್ತು. ಅಂತೆಯೇ ಸೆಪ್ಟೆಂಬರ್‍ನಲ್ಲಿ ನಡೆದ ಪಂದ್ಯದ ವೇಳೆ ಪ್ರಸಿದ್ಧ್ ಮುಂಡಿರಜ್ಜು ಗಾಯಕ್ಕೆ ಒಳಗಾದರು. ಅದಾದ ನಂತರ ಯಾವುದೇ ಪಂದ್ಯಗಳನ್ನೂ ಆಡಿರಲಿಲ್ಲ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು. ಆಯ್ಕೆ ಆದರೂ ಸಹ ಅವರು ಆಡುವುದು ಫಿಟ್ನೆಸ್ ಮೇಲೆ ಅವಲಂಬಿತ ಆಗಿರುತ್ತದೆ ಎಂದು ಬಿಸಿಸಿಐ ತಿಳಿಸಿತ್ತು.

ಈಗಾಗಲೇ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಸರೀಸ್‌ನಲ್ಲಿ ಬೌಲಿಂಗ್ ವಿಭಾಗದಲ್ಲಿ ಎಡವಿದೆ. ಟಿ-20 ಪಂದ್ಯಗಳಲ್ಲಿ ಬೌಲಿಂಗ್ ವಿಭಾಗ ಸಂಪೂರ್ಣ ಫೇಲ್ ಆಗಿದೆ. ಈ ಮಧ್ಯೆ ನಾಳೆಯಿಂದ ಶುರುವಾಗುತ್ತಿರುವ ಏಕದಿನ ಪಂದ್ಯಗಳಿಗೂ ಅದೇ ಭಯ ಶುರುವಾಗಿದೆ. ಯಾಕೆಂದರೆ.. ತಂಡದಲ್ಲಿ ಬೌಲಿಂಗ್ ವಿಭಾಗದಲ್ಲಿ ಅನುಭವಿಗಳು ಯಾರೂ ಇಲ್ಲ. ಮೊಹ್ಮದ್ ಸಿರಾಜ್ ತಂಡದಲ್ಲಿದ್ದರೂ ಅವರು ಐದು ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳಿಗೆ ಮಾತ್ರ ಲಭ್ಯರಾಗಲಿದ್ದಾರೆ. ಇನ್ನುಳಿದಂತೆ ಉಳಿದೆಲ್ಲ ಬೌಲರ್‍‌ಗಳಿಗೆ ಹೆಚ್ಚು ಪಂದ್ಯಗಳನ್ನ ಆಡಿ ಅನುಭವ ಇಲ್ಲ.