ಐಟಿ ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂಬ ಹೋರಾಟಗಾರರ ನಡೆಯನ್ನು ಉದ್ಯಮಿ ಮೋಹನ್ ದಾಸ್ ಪೈ ಪ್ರಶ್ನಿಸಿದ್ದರು. ಕನ್ನಡಿಗರ ಆಶಯಗಳ ವಿರುದ್ಧ ಮಾತನಾಡಿರುವ ಅವರು ತಮಗೆ ನೀಡಿರುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ವಾಪಸ್ ನೀಡಬೇಕು ಎಂದು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಆಗ್ರಹಿಸಿದ್ದಾರೆ.
ಬೆಂಗಳೂರು: ನಿನಗೆ ಮಾನ ಮರ್ಯಾದೆ ಸ್ವಾಭಿಮಾನ ಅನ್ನೋದು ಇದ್ರೆ ನಿನಗೆ ಕೊಟ್ಟಿರೋ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಯನ್ನು ಈ ಕೂಡಲೇ ಸರ್ಕಾರಕ್ಕೆ ವಾಪಸ್ ನೀಡು ಎಂದು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಉದ್ಯಮಿ ಮೋಹನ್ ದಾಸ್ ಪೈ ಅವರಿಗೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರೂಪೇಶ್ ರಾಜಣ್ಣ, ಮೋಹನ್ ದಾಸ್ ಪೈ ಅವರನ್ನು ಟ್ಯಾಗ್ ಮಾಡಿದ್ದಾರೆ. ನಿನಗೆ ಮಾನ ಮರ್ಯಾದೆ ಸ್ವಾಭಿಮಾನ ಅನ್ನೋದು ಇದ್ರೆ ನಿನಗೆ ಕೊಟ್ಟಿರೋ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಯನ್ನು ಈ ಕೂಡಲೇ ಸರ್ಕಾರಕ್ಕೆ ವಾಪಸ್ ನೀಡು. ಕನ್ನಡಿಗರ ಭಿಕ್ಷೆ ತಿಂದು ಬದುಕುತ್ತಿರುವ ಕನ್ನಡ ದ್ರೋಹಿ ನೀನು.. ಕನ್ನಡಿಗರ ಆಶಯಗಳ ವಿರುದ್ದ ಸದಾ ವಿಷ ಕಾರುವ ನೀನು ಕನ್ನಡದ ಅನ್ನ ತಿನ್ನಲು ಯೋಗ್ಯನಲ್ಲ. ತತ್ ಎಂದು ಎಕ್ಸ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋಹನ್ ದಾಸ್ ಪೈ ವಿರುದ್ಧ ಆಕ್ರೋಶ ಯಾಕೆ?
ಇತ್ತೀಚೆಗೆ ಕನ್ನಡ ಪರ ಹೋರಾಟಗಾರರ ನಡೆಯನ್ನು ಮೋಹನ್ ದಾಸ್ ಪೈ ಅವರು ಪ್ರಶ್ನೆ ಮಾಡಿದ್ದರು. ಅದಕ್ಕೆ ಕನ್ನಡಿಗರು ತಿರುಗೇಟು ಕೊಡುತ್ತಿದ್ದಾರೆ. ಅಂತೆಯೇ ಕನ್ನಡ ಪರ ಹೋರಾಟಗಾರರು ತಮ್ಮ ಆಕ್ರೋಶವನ್ನು ತೀವ್ರಗೊಳಿಸಿದ್ದಾರೆ. ಆಗಿದ್ದೇನು ಅಂತಾ ನೋಡೋದಾದರೆ.. ಕರ್ನಾಟಕ ರಕ್ಷಣಾ ವೇದಿಕೆಯು ಬೆಂಗಳೂರಿನ ಐಟಿ ಬಿಟಿಯಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶ ನೀಡಬೇಕು. ಜೊತೆಗೆ ಕಂಪನಿಗಳಲ್ಲಿ ಮಾಡುವ ತಾರತಮ್ಯ ನೀತಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದವು.
ಕನ್ನಡಿಗರಿಗೆ ಉದ್ಯೋಗ ಇಲ್ಲ ಅಂದ್ರೆ ನಾವು ಸುಮ್ನೆ ಬಿಡ್ತೀವಾ? ನಮ್ಮವರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಐಟಿ, ಬಿಟಿ ಕಂಪನಿಗಳಿಗೆ ಮನವಿ ಮಾಡಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮೋಹನ್ ದಾಸ್ ಪೈ, ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಇದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ಸ್ವಯಂ ಘೋಷಿತ ಕಾನೂನು ಪಾಲಕರ ಗುಂಪುಗಳು ಆಡಳಿತ ನಡೆಸುವಂತಿಲ್ಲ. ಇದಕ್ಕೆಲ್ಲ ಕರ್ನಾಟಕ ಸರ್ಕಾರ ಅವಕಾಶ ಕೊಡಬಾರದು. ಇಂಥ ಪ್ರವೃತ್ತಿ ನಿಲ್ಲಬೇಕು ಎಂದು ಆಗ್ರಹಿಸಿದ್ದರು. ಜೊತೆಗೆ ಈ ಟ್ವೀಟ್ ಅನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟ್ಯಾಗ್ ಮಾಡಿದ್ದರು.
ಮೋಹನ್ ದಾಸ್ ಪೈ ಅವರ ಈ ಟ್ವೀಟ್ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಕನ್ನಡ ಪರ ವಿವಿಧ ಸಂಘಟನೆಗಳು ಪೈ ವಿರುದ್ಧ ಕೆಂಡಕಾರಿದ್ದಾರೆ. ಇದೀಗ ರೂಪೇಶ್ ರಾಜಣ್ಣ ಅವರು ರಾಜ್ಯೋತ್ಸವ ಪ್ರಶಸ್ತಿಯನ್ನ ವಾಪಸ್ ನೀಡುವಂತೆ ಆಗ್ರಹಿಸಿದ್ದಾರೆ.






