ರಾಜ್ಯ ಸರ್ಕಾರವು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ದರಗಳನ್ನು ದಿಢೀರ್ ಏರಿಕೆ ಮಾಡಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಬಡವರ ಮೇಲೆ ಆರ್ಥಿಕ ಹೊರೆ ಹಾಕಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟೀಕಿಸಿದ್ದಾರೆ.
ಬೆಂಗಳೂರು (ನ.4): ಬಡ ಜನರ, ಸಾಮಾನ್ಯ ವರ್ಗದ ಹಿತಕಾಯಬೇಕಿದ್ದ ಸರ್ಕಾರವೇ ಜನರ ಕತ್ತು ಹಿಸುಕಲು ಆರಂಭಿಸಿದಾಗ ಮಾತ್ರವೇ ಈ ಮಟ್ಟದ ಬೆಲೆ ಏರಿಕೆ ಕಾಣಬಹುದು. ಕೆಲ ದಿನಗಳ ಹಿಂದೆ ಹಾಲು, ಮೊಸಲು ಹಾಗೂ ಡೈರಿ ಉತ್ಪನ್ನಗಳ ಬೆಲೆಯನ್ನು ಮನಸೋಇಚ್ಛೆ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಈಗ ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ದರಗಳನ್ನು ಮನಸ್ಸಿಗೆ ಬಂದಂತೆ ಏರಿಕೆ ಮಾಡಿದೆ. ಬಿಎಂಟಿಸಿಯಲ್ಲಿ ಬೆಲೆ ಏರಿಕೆಯ ಸರಾಸರಿ ಬರೋಬ್ಬರಿ ಶೇ.32 ರಿಂದ 35ರಷ್ಟಿದ್ದರೆ, ಕೆಎಸ್‌ಆರ್‌ಟಿಸಿಯಲ್ಲಿ ದರ ಏರಿಕೆಯು ಶೇಕಡಾವಾರು 243ರಷ್ಟಿದೆ.ಇನ್ನು ಉತ್ತರ ಕರ್ನಾಟಕದ ಕಲಬುರಗಿಯ ಜನ ಬೆಂಗಳೂರಿಗೆ ಬರಬೇಕೆಂದರೆ ಸಾಮಾನ್ಯ ಬಸ್‌ನಲ್ಲೇ ಬರೋಬ್ಬರಿ 1 ಸಾವಿರ ರೂಪಾಯಿಯ ಟಿಕೆಟ್ ಖರೀದಿಸಬೇಕಾಗಿದೆ.
ರಾಜ್ಯ ಸರ್ಕಾರದ ಬೆಲೆ ಏರಿಕೆ ಪ್ರಹಾರದ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿಜನರು ಹಿಡಿಶಾಪ ಹಾಕಿದ್ದು, ಬಡ ಜನರ ಮೇಲೆ ಗ್ಯಾರಂಟಿ ಬಸ್ ಹತ್ತಿಸಿದ ಸರ್ಕಾರ ಎಂದು ಟೀಕಾಪ್ರಹಾರ ಮಾಡಿದ್ದಾರೆ. ಇನ್ನು ಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಮಾಡಿದರೆ ನಾವು ಕೂಡ ಬಸ್ ದರ ಇಳಿಸಲು ಸಿದ್ದ ಎಂದು ಹೇಳುವ ಮೂಲಕ ಬಸ್ ದರ ಏರಿಕೆಯನ್ನೂ ಕೇಂದ್ರ ಸರ್ಕಾರದ ಹೆಗಲಿಗೆ ಕಟ್ಟಿದ್ದಾರೆ. ಆದರೆ, ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ರಾಜ್ಯ ಸರ್ಕಾರವೇ ಹೆಚ್ಚುವರಿ 3 ರೂಪಾಯಿ ಸೆಸ್‌ಅನ್ನು 2024ರಲ್ಲಿ ಹೇರಿದ್ದನ್ನು ಮರೆತುಬಿಟ್ಟಿದ್ದಾರೆ.
ಕೆಎಸ್‌ಆರ್‌ಟಿಸಿಯ ಬಸ್‌ಗಳ ಮೇಲೆ 'ಪ್ರಾಣಿಗಳ ಮೇಲೆ ದಯೆ ಇರಲಿ' ಎನ್ನುವ ಲೈನ್ ಕಾಣುತ್ತದೆ. ಇದನ್ನೇ ಬದಲಾಯಿಸಿರುವ ಕೆಲ ನೆಟ್ಟಿಗರು, ಬೆಲೆ ಏರಿಕೆಯನ್ನು ಸೂಚ್ಯವಾಗಿಟ್ಟುಕೊಂಡು 'ಪ್ರಯಾಣಿಕರ ಮೇಲೆ ದಯೆ ಇರಲಿ' ಎಂದು ಬದಲಾಯಿಸುವುದು ಒಳಿತು ಎಂದಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಒಬ್ಬರು, 'ಪ್ರಾಣಿಗಳ ಮೇಲಿನ ಕರುಣೆ ಮೆಚ್ಚುವಂತಹದ್ದು. ಆದರೆ ಆ ಕರುಣೆ ಕೇವಲ ಪ್ರಾಣಿಗಳಿಗೆ ಸೀಮಿತವಾಗಬಾರದು. ಪ್ರಯಾಣಿಕರ ಜೇಬಿಗೂ, ಅಕ್ಕಪಕ್ಕದ ವಾಹನ ಸವಾರರ ಸುರಕ್ಷತೆಗೂ, ರಸ್ತೆಯಲ್ಲಿ ನಡೆದುಹೋಗುವ ಪಾದಚಾರಿಗಳ ಜೀವಕ್ಕೂ ಇರಲಿ. ದಯೆ ತೋರಿಸುವ ಭರದಲ್ಲಿ ಬೇರೆಯವರ ನೆಮ್ಮದಿ ಮತ್ತು ಸುರಕ್ಷತೆಯನ್ನು ಬಲಿಕೊಡಬೇಡಿ' ಎಂದು ಬರೆದಿದ್ದಾರೆ.
ಇನ್ನೂ ಕೆಲವರು ಸರ್ಕಾರದ ದರ ಏರಿಕೆಯನ್ನು ಖಾಸಗಿ ಬಸ್ ದರ ಏರಿಕೆಯಲ್ಲಿ ಹೋಲಿಸಿದ್ದಾರೆ. ಬೆಂಗಳೂರು-ಕಲಬುರಗಿ ನಡುವೆ ಸಾಮಾನ್ಯ ದಿನಗಳಲ್ಲಿ ಸ್ಲೀಪರ್ ಬಸ್‌ಗಳ ಬೆಲೆಯೇ 760 ರಿಂದ 850 ರೂಪಾಯಿ ಇರುತ್ತದೆ. ಹೀಗಿರುವಾಗ ಕೆಎಸ್‌ಆರ್‌ಟಿಸಿಯಲ್ಲಿ ಕುಳಿತುಕೊಂಡು ಹೋಗುವ ಸೀಟ್‌ಗೆ ಯಾರಾದರೂ 1 ಸಾವಿರ ರೂಪಾಯಿ ಯಾಕೆ ಕೊಡ್ತಾರೆ ಅನ್ನೋದನ್ನಾದರೂ ಯೋಚನೆ ಮಾಡಬೇಕಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
'ಕಾಂಗ್ರೆಸ್ ನವರು ಕಿವಿಯಲ್ಲಿ 'ಹೂ' ಇಟ್ಕೊಂಡು ಪ್ರೊಟೆಸ್ಟ್ ಮಾಡಿದಾಗ್ಲೆ ಅನ್ಕೋಬೇಕಿತ್ತು..ಆ 'ಹೂ' ಕೊನೆಗೆ ಜನರ ಕಿವಿಗೇ ಬೀಳೋದು ಅಂತ' ಎಂದು ಕರ್ನಾಟಕ ಅಪ್‌ಡೇಟ್ಸ್ ಎಕ್ಸ್ ಪೇಜ್ ಪೋಸ್ಟ್ ಮಾಡಿದೆ. ಇನ್ಜೂ ಕೆಲವರು ಈ ಬಸ್ ದರ ಏರಿಕೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಯನ್ನು ಲಾಭದ ಕಡೆಗೆ ತಳ್ಳುವ ಬದಲಿಗೆ ಇನ್ನಷ್ಟು ನಷ್ಟಕ್ಕೆ ಕಾರಣ ಮಾಡಲಿದೆ. ಬೇಕಿದ್ದರೆ ಇದನ್ನು ಸವಾಲ್ ಆಗಿಯೇ ತೆಗೆದುಕೊಳ್ಳಿ ಎಂದು ಮತ್ತೊಬ್ಬರು ಚಾಲೆಂಜ್ ಮಾಡಿದ್ದಾರೆ.
ರಾಜ್ಯ ಸರ್ಕಾರ ದಿನದಿನತ್ಯದ ಅಗತ್ಯ ವಸ್ತುಗಳ ಮೇಲೆ ಮಾಡಿರುವ ಭಾರೀ ಪ್ರಮಾಣದ ಬೆಲೆ ಏರಿಕೆ, ಸಾಮಾನ್ಯ ಜನ ಬೇರೆ ಬ್ರ್ಯಾಂಡ್‌ನತ್ತ ಗಮನ ಕೊಡಲು ಕಾರಣವಾಗುತ್ತದೆ. ಈಗಾಗಲೇ ಸಾಮಾನ್ಯ ಜನ ಮಾರುಕಟ್ಟೆಯಲ್ಲಿ ಇರುವ ಬೇರೆ ಬ್ರ್ಯಾಂಡ್‌ನ ಹಾಗೂ ಕಡಿಮೆ ಬೆಲೆಯ ಹಾಲಿನತ್ತ ಮುಖ ಮಾಡುತ್ತಿರುವುದು ಕಂಡಿದೆ. ಅದೇ ರೀತಿಯಲ್ಲಿ ಪುರುಷ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬದಲಿಗೆ ಪ್ರಯಾಣಿಕರು ಬೇರೆ ಮಾರ್ಗಗಳನ್ನು ಕಂಡುಕೊಳ್ಳಲಿದ್ದಾರೆ' ಎಂದು ಮತ್ತೊಬ್ಬರು ಬರೆದಿದ್ದಾರೆ.
'ಕಾಂಗ್ರೆಸ್ ಅಂದರೆ ಅಭಿವೃದ್ಧಿ ಎಂದ ದಡ್ಡರು ಈಗ ಎಲ್ಲಿದ್ದಾರೆ. ಬಹುಶಃ ಈಗ ಅವರಿಗೆ ಗೊತ್ತಾಗಿರಬೇಕು. ಬಿಟ್ಟಿ ಘೋಷಣೆ ಮಾಡಿ ಚುನಾವಣೆ ಗೆದ್ದರೆ ಅದು ದೀರ್ಘಕಾಲ ಉಳಿಯೋದಿಲ್ಲ. ಕನಿಷ್ಠ ವಿದ್ಯಾರ್ಥಿ ಬಸ್ ಪಾಸ್ ಫ್ರೀ ಆಗಿ ಬಿಟ್ಟಿದ್ದಾರೆ. ಅಷ್ಟು ಸಾಕು' ಎಂದು ವಿದ್ಯಾರ್ಥಿಯೊಬ್ಬರು ಬರೆದುಕೊಂಡಿದ್ದಾರೆ.






