ಗಾಂಜಾ, ಅಫೀಮು ಇಂದು ಸಮಾಜಕ್ಕೆ ಪಿಡುಗಾಗಿವೆ. ಚಹಾ ಅಂಗಡಿ ಸೇರಿ ಸಣ್ಣಪುಟ್ಟ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು (ಏ.01): ಚಹಾ ಅಂಗಡಿ ಸೇರಿ ಸಣ್ಣಪುಟ್ಟ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಕಳವಳ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಗಾಂಧಿ ಭವನದಲ್ಲಿ ಆಯೋಜಿಸಿದ್ದ 2023, 2024 ಹಾಗೂ 2025 ನೇ ಸಾಲಿನ ‘ಸಂಯಮ’ ವಾರ್ಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಾಂಜಾ, ಅಫೀಮು ಇಂದು ಸಮಾಜಕ್ಕೆ ಪಿಡುಗಾಗಿವೆ. ಯುವಜನತೆ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆಯೂ ಮದ್ಯಪಾನ ಸಂಯಮ ಮಂಡಳಿ ಚಿಂತಿಸಿ ಕಾರ್ಯೋನ್ಮುಖವಾಗಬೇಕಿದೆ. ಚಹಾ ಅಂಗಡಿ ಸೇರಿ ಸಣ್ಣಪುಟ್ಟ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರಿಂದ ಮದ್ಯಮಾರಾಟ ಮಳಿಗೆಗಳಿಗೆ ಸಂಬಂಧಿಸಿದಂತೆ ಮಂಡಳಿಗೆ ಬರುವ ದೂರುಗಳನ್ನು ಲೋಕಾಯುಕ್ತಕ್ಕೆ ನೀಡಬೇಕು ಎಂದು ಸಲಹೆ ನೀಡಿದರು.

ಮದ್ಯ ಮಾರಾಟ ಕುರಿತ ದೂರು ಲೋಕಾಗೆ ನೀಡಬೇಕು

ಇಂದು ಮಾನವೀಯ ಮೌಲ್ಯಗಳು ನಶಿಸುತ್ತಿದ್ದು ಪ್ರೀತಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಉನ್ನತ ತಂತ್ರಜ್ಞಾನ ಹೊಂದಿರುವ ದೇಶಗಳು ಯುದ್ಧೋನ್ಮಾದದಲ್ಲಿ ತೊಡಗಿವೆ. ಮತ್ತೊಂದೆಡೆ, ಅಕ್ರಮ ಆಸ್ತಿ ಸಂಪಾದನೆ ವಿಪರೀತ ಹೆಚ್ಚಳವಾಗಿದೆ. ಈ ಬಗ್ಗೆ ಗಾಂಧಿವಾದಿಗಳು ಧ್ವನಿ ಎತ್ತಬೇಕು. ಇಲ್ಲದಿದ್ದರೆ ದೇಶಕ್ಕೆ ಸಂಕಷ್ಟ ಉಂಟಾಗಲಿದೆ ಎಂದು ಎಚ್ಚರಿಸಿದರು.

ಮದ್ಯ ನಿಷೇಧವಾಗಲಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ವಿದೇಶಗಳಲ್ಲಿ ನಾವು ಭಾರತೀಯರು ಎಂದು ಹೇಳಿದಾಕ್ಷಣ, ಓಹ್‌ ಗಾಂಧೀಜಿಯವರ ದೇಶದವರಾ ಎಂದು ಪ್ರತಿಕ್ರಿಯಿಸುತ್ತಾರೆ. ಗಾಂಧೀಜಿಯವರು ಅಷ್ಟೊಂದು ಜನಪ್ರಿಯರಾಗಿದ್ದಾರೆ. ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಮದ್ಯ ಮಾರಾಟ ನಿಷೇಧ ಮಾಡಿದರೆ ಸಾಲದು, ರಾಷ್ಟ್ರಮಟ್ಟದಲ್ಲಿ ಮದ್ಯ ಮಾರಾಟ ನಿಷೇಧವಾಗಬೇಕು ಎಂದು ಅಭಿಪ್ರಾಯಪಟ್ಟರು.

ಮಂಡಳಿಯ ಅಧ್ಯಕ್ಷ ಶರಣಪ್ಪ ಸಲದಾಪುರ ಮಾತನಾಡಿ, ಮಂಡಳಿಗೆ ನೀಡುವ ಅನುದಾನದಲ್ಲಿ ಬಹುಪಾಲು ಸಿಬ್ಬಂದಿಯ ಸಂಬಳಕ್ಕೇ ವೆಚ್ಚವಾಗುತ್ತದೆ. ಉಳಿದಿದ್ದರಲ್ಲಿ ಪೋಸ್ಟರ್‌ ಅಂಟಿಸುವುದು, ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಬೀದಿ ನಾಟಕ ಪ್ರದರ್ಶಿಸುವುದಕ್ಕೆ ವೆಚ್ಚವಾಗುತ್ತದೆ. ಕೆಲವೆಡೆ ದೇವಸ್ಥಾನಗಳು, ಪುಣ್ಯಪುರುಷರ ಪ್ರತಿಮೆಗಳ ಸಮೀಪವೇ ಮದ್ಯದ ಮಳಿಗೆಗಳು ಇವೆ. ಹೀಗಾಗಿ ಅಬಕಾರಿ ಇಲಾಖೆಯು ಕಾನೂನುಗಳನ್ನು ಬಿಗಿಗೊಳಿಸಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್‌.ಪಾಟೀಲ್‌, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್‌.ಪಾಟೀಲ್‌, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಅವರಿಗೆ ಇದೇ ಸಂದರ್ಭದಲ್ಲಿ ‘ಸಂಯಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸರ್ಕಾರದ ಕಾರ್ಯದರ್ಶಿ ಬಿ.ಬಿ.ಕಾವೇರಿ ಮತ್ತಿತರರು ಉಪಸ್ಥಿತರಿದ್ದರು.