ಬಜೆಟ್‌ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳ ಉತ್ತರ ಖಂಡಿಸಿ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಈ ನಡುವೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಈ ತಿದ್ದುಪಡಿ ವಿಧೇಯಕ ಮಂಡಿಸಿದರು.

ವಿಧಾನಸಭೆ (ಮಾ.26): ಹೆಚ್ಚಿನ ತೆರಿಗೆ ಹಿನ್ನೆಲೆಯಲ್ಲಿ ನೋಂದಣಿಗಾಗಿ ಹೊರ ರಾಜ್ಯಗಳತ್ತ ಮುಖಮಾಡುತ್ತಿರುವ ವಾಹನಗಳನ್ನು ಸೆಳೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ತಂದಿರುವ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ 2026’ ಯಾವುದೇ ಚರ್ಚೆಯಿಲ್ಲದೇ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಜೆಟ್‌ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳ ಉತ್ತರ ಖಂಡಿಸಿ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಈ ನಡುವೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಈ ತಿದ್ದುಪಡಿ ವಿಧೇಯಕ ಮಂಡಿಸಿದರು. ವಿಪಕ್ಷಗಳ ಸದಸ್ಯರು ಸದನಕ್ಕೆ ವಾಪಸ್‌ ಬರುವ ವೇಳೆಗೆ ಯಾವುದೇ ಚರ್ಚೆ ಇಲ್ಲದೆ ಧ್ವನಿಮತದ ಮುಖಾಂತರ ಅಂಗೀಕಾರಗೊಂಡಿತು.

ವಿಧೇಯಕದಲ್ಲಿ ರಾಜ್ಯದಲ್ಲಿ ನೋಂದಣಿಯಾಗುವ 12ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಒಪ್ಪಂದದ ವಾಹನ ಹಾಗೂ ಸ್ಲೀಪರ್‌ ಕೋಚ್‌ ಬಸ್‌ಗಳಿಗೆ ಪ್ರತಿ ಆಸನಗಳಿಗೆ ಈಗಿರುವ ತೆರಿಗೆ ಪ್ರಮಾಣವನ್ನು ಕ್ರಮವಾಗಿ ಸಾವಿರ ರು. ಇಳಿಕೆ ಮಾಡಲಾಗಿದೆ. ಪ್ರಸ್ತುತ ಬಾಡಿಗೆಗೆ ಓಡಿಸುವ 12ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ವಾಹನಗಳಿಗೆ ಪ್ರತಿ ಆಸನಕ್ಕೆ 3,500 ರು. ಹಾಗೂ ಸ್ಲೀಪರ್‌ ಕೋಚ್‌ ಬಸ್‌ಗಳಿಗೆ ಪ್ರತಿ ಆಸನಕ್ಕೆ 4 ಸಾವಿರ ರು. ತೆರಿಗೆ ನಿಗದಿಪಡಿಸಲಾಗಿದೆ. ಈಗ ಅದನ್ನು ಕ್ರಮವಾಗಿ 2,500 ರು. ಮತ್ತು 3 ಸಾವಿರ ರು.ಗೆ ಇಳಿಸಲಾಗಿದೆ.

ತೆರಿಗೆ ತುಂಬಾ ಕಡಿಮೆ

ಕರ್ನಾಟಕಕ್ಕೆ ಹೋಲಿಕೆ ಮಾಡಿದರೆ, ಕೆಲ ಹೊರ ರಾಜ್ಯಗಳಲ್ಲಿ ವಾಹನಗಳ ನೋಂದಣಿ ಶುಲ್ಕ ಮತ್ತು ತೆರಿಗೆ ತುಂಬಾ ಕಡಿಮೆ ಇದೆ. ಹೀಗಾಗಿ ಸಾವಿರಾರು ವಾಹನಗಳು ಕಡಿಮೆ ತೆರಿಗೆ ಇರುವ ಈ ರಾಜ್ಯಗಳಲ್ಲಿ ನೋಂದಣಿ ಮಾಡಿಸಿಕೊಂಡು ಕರ್ನಾಟಕದಲ್ಲಿ ಕಾರ್ಯಾಚರಣೆ ಮಾಡುತ್ತಿರುವುದು ಹೆಚ್ಚಾಗಿದೆ. ಇದಕ್ಕೆ ಕೇಂದ್ರದ ಮೋಟಾರು ವಾಹನ ಕಾಯ್ದೆಯ ಆಲ್‌ ಇಂಡಿಯಾ ಟೂರ್‌ ಪರ್ಮಿಟ್‌ (ಎಟಿಪಿ)ಯಲ್ಲಿ ಅವಕಾಶವೂ ಇದೆ.

ಈ ನಡುವೆ ರಾಜ್ಯದಲ್ಲಿ ವಾಹನಗಳ ನೋಂದಣಿ ಗಣನೀಯವಾಗಿ ಇಳಿಕೆಯಾಗುತ್ತಿರುವುದರಿಂದ ಆದಾಯ ಕೂಡ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ತಿದ್ದುಪಡಿ ವಿಧೇಯದ ಮುಖಾಂತರ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡಿದೆ. ಈ ತಿದ್ದುಪಡಿಯಿಂದ ಸರ್ಕಾರವು 2026-27ನೇ ಸಾಲಿನಲ್ಲಿ 250 ಕೋಟಿ ರು. ಆದಾಯ ಸಂಗ್ರಹದ ನಿರೀಕ್ಷೆಯಲ್ಲಿದೆ.