ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್ ಅವರನ್ನು ಮೈಸೂರು ಜೈಲಿಗೆ ವರ್ಗಾಯಿಸಿದ್ದ ಕೆಳಹಂತದ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ನೈಸರ್ಗಿಕ ನ್ಯಾಯತತ್ವಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟ ಪೀಠ, ಪಾಟೀಲ್ ಅವರನ್ನು ತಕ್ಷಣವೇ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಮರಳಿ ಸ್ಥಳಾಂತರಿಸಲು ಆದೇಶಿಸಿದೆ.
ಕಲಬುರಗಿ: ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ (ಆರ್‌ಡಿ ಪಾಟೀಲ್) ಅವರನ್ನು ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೈಸೂರು ಜೈಲಿಗೆ ವರ್ಗಾಯಿಸುವ ಕುರಿತು ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್‌ನ ಕಲಬುರಗಿ ಪೀಠ ರದ್ದುಗೊಳಿಸಿದೆ. ಇದರೊಂದಿಗೆ ಆರ್‌ಡಿ ಪಾಟೀಲ್ ಮತ್ತೆ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಮರಳುವಂತಾಗಿದೆ. ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2026ರ ಜನವರಿ 27ರಂದು ಆರ್‌ಡಿ ಪಾಟೀಲ್ ಅವರನ್ನು ಮೈಸೂರು ಜೈಲಿಗೆ ವರ್ಗಾಯಿಸಲು ಅನುಮತಿ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಅವರ ಪತ್ನಿ ಶೋಭಾ ಹೈಕೋರ್ಟ್‌ಗೆ ಮೊರೆ ಹೋಗಿ ರಿಟ್ ಅರ್ಜಿ ಸಲ್ಲಿಸಿದ್ದರು.
ಭದ್ರತಾ ಕಾರಣ ನೀಡಿರುವುದಕ್ಕೆ ಅಸಮಾಧಾನ
ಈ ಅರ್ಜಿಯನ್ನು ವಿಚಾರಿಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ, ವಿಚಾರಣಾಧೀನ ಕೈದಿಯನ್ನು ವರ್ಗಾವಣೆ ಮಾಡುವ ಮುನ್ನ ಆತನಿಗೆ ತನ್ನ ಆಕ್ಷೇಪಣೆಗಳನ್ನು ಸಲ್ಲಿಸಲು ಅಥವಾ ವಾದ ಮಂಡಿಸಲು ಅವಕಾಶ ನೀಡದಿರುವುದು ನೈಸರ್ಗಿಕ ನ್ಯಾಯತತ್ವಗಳ ಉಲ್ಲಂಘನೆ ಎಂದು ಸ್ಪಷ್ಟಪಡಿಸಿದೆ. ಜಿಲ್ಲಾ ನ್ಯಾಯಾಲಯ ಯಾವುದೇ ಸ್ಪಷ್ಟ ಹಾಗೂ ಸಮರ್ಪಕ ಕಾರಣಗಳನ್ನು ನೀಡದೆ ಕೇವಲ ‘ಭದ್ರತಾ ಕಾರಣ’ ಎಂಬ ಸಾಮಾನ್ಯ ಪದ ಬಳಸಿ ಆದೇಶ ಹೊರಡಿಸಿರುವುದನ್ನೂ ಹೈಕೋರ್ಟ್ ತೀವ್ರವಾಗಿ ಟೀಕಿಸಿದೆ.
ಅರ್ಜಿದಾರರ ಪರ ವಕೀಲರು, ವಿಚಾರಣಾಧೀನ ಕೈದಿಯ ಹಕ್ಕುಗಳನ್ನು ಕಡೆಗಣಿಸಿ ಅವನನ್ನು ವರ್ಗಾವಣೆ ಮಾಡಲಾಗಿದೆ ಎಂದು ವಾದಿಸಿದ್ದರು. ಈ ವಾದವನ್ನು ಪರಿಗಣಿಸಿದ ಹೈಕೋರ್ಟ್, ವಿಚಾರಣಾಧೀನ ವ್ಯಕ್ತಿಗೆ ಕೇಳುವ ಹಕ್ಕು ನೀಡದೇ ತೆಗೆದುಕೊಂಡ ನಿರ್ಧಾರ ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟಿದೆ. ಇನ್ನೊಂದೆಡೆ, ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೈಲಿನ ಭದ್ರತೆಯ ದೃಷ್ಟಿಯಿಂದ ಈ ವರ್ಗಾವಣೆ ಅಗತ್ಯವಾಗಿತ್ತು ಎಂದು ವಾದಿಸಿದರು. ಆದರೆ, ವರ್ಗಾವಣೆ ಆದೇಶ ಹೊರಡಿಸುವ ಮೊದಲು ಆರೋಪಿ ತನ್ನ ಅಭಿಪ್ರಾಯ ಮಂಡಿಸಲು ಅವಕಾಶ ನೀಡಲಾಗಿಲ್ಲ ಎಂಬುದನ್ನು ಅವರು ಒಪ್ಪಿಕೊಂಡರು.
ಮೈಸೂರು ಜೈಲಿನಿಂದ ಕಲಬುರಗಿ ಕೇಂದ್ರ ಕಾರಾಗೃಹ
ಈ ಎಲ್ಲ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ, ತಕ್ಷಣವೇ ಆರ್‌ಡಿ ಪಾಟೀಲ್ ಅವರನ್ನು ಮೈಸೂರು ಜೈಲಿನಿಂದ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಮರು ವರ್ಗಾವಣೆ ಮಾಡುವಂತೆ ಸೂಚಿಸಿದೆ. ಆದಾಗ್ಯೂ, ನ್ಯಾಯಾಲಯ ತನ್ನ ಆದೇಶದಲ್ಲಿ ಒಂದು ಮಹತ್ವದ ವಿಷಯವನ್ನು ಸ್ಪಷ್ಟಪಡಿಸಿದ್ದು, ಜೈಲು ಅಧಿಕಾರಿಗಳು ಕಾನೂನುಬದ್ಧ ವಿಧಾನಗಳನ್ನು ಅನುಸರಿಸಿ, ಸಮರ್ಪಕ ಕಾರಣಗಳನ್ನು ನೀಡುವ ಮೂಲಕ ಮುಂದಿನ ದಿನಗಳಲ್ಲಿ ವರ್ಗಾವಣೆ ಮಾಡಲು ಬಯಸಿದರೆ ಅದಕ್ಕೆ ಅವಕಾಶವಿದೆ ಎಂದು ಹೇಳಿದೆ.
ಒಟ್ಟಿನಲ್ಲಿ, ಹೈಕೋರ್ಟ್ ತೀರ್ಪು ವಿಚಾರಣಾಧೀನ ಕೈದಿಗಳ ಹಕ್ಕುಗಳ ರಕ್ಷಣೆಯ ಮಹತ್ವವನ್ನು ಮತ್ತೊಮ್ಮೆ ಒತ್ತಿಹೇಳಿದ್ದು, ನ್ಯಾಯಾಂಗ ಪ್ರಕ್ರಿಯೆಯಲ್ಲಿ ನೈಸರ್ಗಿಕ ನ್ಯಾಯತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಸಂದೇಶವನ್ನು ನೀಡಿದೆ. ಈ ತೀರ್ಪಿನಿಂದ ಆರ್‌ಡಿ ಪಾಟೀಲ್ ಅವರ ಕುಟುಂಬಕ್ಕೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ.


