ಬೆಂಗಳೂರು :  ಮೇಖ್ರಿ ವೃತ್ತದಿಂದ ಹೆಬ್ಬಾಳದವರೆಗೆ ಕಾಂಕ್ರೀಟ್‌ ಮೇಲ್ಸೇತುವೆ ಕೈಬಿಟ್ಟು ಎಲಿವೇಟೆಡ್‌ ಕಾರಿಡಾರ್‌ ಅನ್ನು ನಿರ್ಮಿಸಲು ಸರ್ಕಾರ ಒಲವು ತೋರಿದೆ. ಈ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ನಡುವೆ ಗುದ್ದಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ತೆರೆ ಎಳೆದಿದೆ.

ಹೆಬ್ಬಾಳದ ಬಾಪ್ಟಿಸ್ಟ್‌ ಆಸ್ಪತ್ರೆಯಿಂದ ಮೇಖ್ರಿ ವೃತ್ತದ ಮಾರ್ಗವಾಗಿ ಸೆಂಟ್ರಲ್‌ ಸಿಲ್‌್ಕ ಬೋರ್ಡ್‌ವರೆಗೆ ಮೊದಲ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲಿ ಮುಂದುವರೆಸಲು ತೀರ್ಮಾನಿಸಿದೆ. ಆದರೆ, ಹೆಬ್ಬಾಳದ ಎಸ್ಟೀಂ ಮಾಲ್‌ನಿಂದ ಮೇಖ್ರಿ ವೃತ್ತ ಮಾರ್ಗವಾಗಿ ಚಾಲುಕ್ಯ ವೃತ್ತದ ವರೆಗೆ ನಿರ್ಮಿಸಲು ಉದ್ದೇಶಿಸಿದ್ದ ಕಾಂಕ್ರೀಟ್‌ ಮೇಲ್ಸೇತುವೆಯನ್ನು ಚಾಲುಕ್ಯ ವೃತ್ತದಿಂದ ಮೇಖ್ರಿ ವೃತ್ತದವರೆಗೆ ಮಾತ್ರ ನಿರ್ಮಿಸಲು ನಿರ್ಧರಿಸಿದೆ.

ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಈ ಹಿಂದೆ ಸ್ಟೀಲ್‌ ಬ್ರಿಜ್‌ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದ ಹಿಂದಿನ ಕಾಂಗ್ರೆಸ್‌ ಸರ್ಕಾರ, ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಕೈಬಿಟ್ಟಿತ್ತು. ನಂತರ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರ ಈ ಮಾರ್ಗದಲ್ಲಿ ಸ್ಟೀಲ್‌ ಬ್ರಿಜ್‌ ಬದಲು ಕಾಂಕ್ರೀಟ್‌ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾಪ ಮಾಡಿತ್ತು. ಜೊತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಬಾರಿಯ ಬಜೆಟ್‌ನಲ್ಲಿ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯನ್ನೂ ಘೋಷಿಸಿದ್ದರು.

ಈ ವೇಳೆ, ಒಂದೇ ಮಾರ್ಗದಲ್ಲಿ ಎರಡೂ ಯೋಜನೆಗಳ ಪ್ರಸ್ತಾಪ ಬಂದಿದ್ದರಿಂದ ಒಂದು ಯೋಜನೆ ಕೈಬಿಡಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿತ್ತು. ಆದರೆ, ಕೆಆರ್‌ಐಡಿಎಲ್‌ ಮೂಲಕ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸಲು ಹೊರಟಿದ್ದ ಲೋಕೋಪಯೋಗಿ ಇಲಾಖೆಯಾಗಲಿ, ಬಿಡಿಎ ಮೂಲಕ ಕಾಂಕ್ರೀಟ್‌ ಮೇಲ್ಸೇತುವೆ ನಿರ್ಮಿಸುವ ಉದ್ದೇಶ ಹೊಂದಿದ್ದ ನಗರಾಭಿವೃದ್ಧಿ ಇಲಾಖೆಯಾಗಲಿ ತಮ್ಮ ಯೋಜನೆಯನ್ನು ಮೇಖ್ರಿ ವೃತ್ತಕ್ಕೆ ಮೊಟಕುಗೊಳಿಸಲು ಸಿದ್ಧವಿರಲಿಲ್ಲ.

ಈ ಸಂಬಂಧ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಸ್ವತಃ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಚಾಲುಕ್ಯ ವೃತ್ತದಿಂದ ಹೆಬ್ಬಾಳದ ಎಸ್ಟೀಂ ಮಾಲ್‌ವರೆಗೆ ಸ್ಟೀಲ್‌ ಬ್ರಿಜ್‌ ಬದಲು ಕಾಂಕ್ರೀಟ್‌ ಮೇಲ್ಸೇತುವೆ ನಿರ್ಮಾಣ ಮಾಡಲು ಸರ್ಕಾರ ಉದ್ದೇಶಿಸಿದೆ. ಹಾಗಾಗಿ ಎಲಿವೇಟೆಡ್‌ ಕಾರಿಡಾರ್‌ ಅನ್ನು ಮೇಖ್ರಿ ವೃತ್ತಕ್ಕೆ ಅಂತ್ಯಗೊಳಿಸಲು ಕೆಆರ್‌ಡಿಸಿಎಲ್‌ಗೆ ಸೂಚಿಸಲಾಗಿದೆ ಎಂದು ಹೇಳಿದ್ದರು.

ಆದರೆ, ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಕಾಂಕ್ರೀಟ್‌ ಮೇಲ್ಸೇತುವೆಯನ್ನು ಮೇಖ್ರಿ ವೃತ್ತಕ್ಕೆ ಅಂತ್ಯಗೊಳಿಸುವ ಪ್ರಸ್ತಾಪ ಮಾಡಲಾಗಿದೆ. ಅಲ್ಲದೆ, ಹೆಬ್ಬಾಳ ಮೇಲ್ಸೇತುವೆಯ ಹೆಚ್ಚುವರಿ ಲೂಪ್‌ ಅನ್ನು ಬ್ಯಾಪ್ಟಿಸ್ಟ್‌ ಆಸ್ಪತ್ರೆಯ ಬಳಿ ಎಲಿವೇಟೆಡ್‌ ಕಾರಿಡಾರ್‌ಗೆ ವಿಲೀನಗೊಳಿಸಲು ಮತ್ತು ಉತ್ತರ-ದಕ್ಷಿಣ ಎಲಿವೇಟೆಡ್‌ ಕಾರಿಡಾರ್‌ ಅನ್ನು ಮೇಖ್ರಿ ವೃತ್ತದ ರಸ್ತೆಯಿಂದ ಕಾವೇರಿ ಜಂಕ್ಷನ್‌ ಕಡೆಗೆ 100 ಮೀಟರ್‌ ನಂತರ ಕೊನೆಗೊಳಿಸಲು ಹಾಗೂ ಅಲ್ಲಿಂದ ಮುಂದೆ ಬಿಡಿಎಯಿಂದ ಬಸವೇಶ್ವರ ವೃತ್ತ ಅಥವಾ ಚಾಲುಕ್ಯ ವೃತ್ತದಿಂದ ನಿರ್ಮಿಸುವ ಮೇಲ್ಸೇತುವೆಯನ್ನು ಮೇಖ್ರಿ ವೃತ್ತದಿಂದ 100 ಮೀಟರ್‌ನಲ್ಲಿ ವಿಲೀನಗೊಳಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಲಾಗಿದೆ.

ಅಲ್ಲದೆ, ಬಿಬಿಎಂಪಿ ನಿರ್ಮಿತ ರಿಚ್‌ಮಂಡ್‌ ವೃತ್ತದ ಮೇಲ್ಸೇತುವೆಗೆ ಪುನರ್‌ ಮಾದರಿ ತಯಾರಿಸಿ ಹಾಲಿ ಇರುವ ಶೋಲೆ ಸರ್ಕಲ್‌ ರಾರ‍ಯಂಪ್‌ ಮತ್ತು ಸೆಂಟ್‌ಮಾರ್ಕ್ಸ್‌ ರಸ್ತೆ ರಾರ‍ಯಂಪ್‌ಗಳನ್ನು ತೆಗೆದು ಉತ್ತರ-ದಕ್ಷಿಣ ಕಾರಿಡಾರ್‌ ಅನ್ನು ವಿಲೀನಗೊಳಿಸಲು ಕೆಆರ್‌ಡಿಸಿಎಲ್‌ಗೆ ಅನುಮೋದನೆ ನೀಡಲಾಗಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.