Asianet Suvarna News Asianet Suvarna News

Kannada sahitya sammelana: ಊಟೋಪಚಾರಕ್ಕೆ ಸಾಹಿತ್ಯಾಭಿಮಾನಿಗಳು ಖುಷ್‌; Mobile Network ಇಲ್ಲದೆ ಪರದಾಟ!

: ಊಟ ಭಾಳ ಚಲೋ ಇತ್ರೀ....ಬೆಳಿಗ್ಗೆ ಟಿಫಿನ್‌ ಕೂಡ ರುಚಿಯಾಗಿತ್ರೀ..ಭಾಳ ಮಂದಿ ಇದ್ರೂ ಊಟಕ್ಕೇನೂ ತೊಂದ್ರೆ ಆಗಲಿಲ್ಲಿ ಬಿಡ್ರೀ...ಆರಾಮಾಗಿ ಕುಂತ್‌ ಉಂಡೀವ್‌ ನೋಡ್ರೀ..ಅಂತ ಹೇಳಿದ ಸಾಹಿತ್ಯಾಭಿಮಾನಿಗಳು. ಆದರೆ ಮೊಬೈಲ್ ನೆಟ್ವರ್ಕ್ ಇಲ್ಲದೆ ಪರದಾಡಿದ ಘಟನೆಯೂ ನೆಡೆಯಿತು.

Kannada Sahitya Sammelna Literary lovers are happy for the catering at dharwad rav
Author
First Published Jan 7, 2023, 7:27 AM IST

ಕೆ.ಎಂ.ಮಂಜುನಾಥ್‌

 ಹಾವೇರಿ (ಜ.7) : ಊಟ ಭಾಳ ಚಲೋ ಇತ್ರೀ....ಬೆಳಿಗ್ಗೆ ಟಿಫಿನ್‌ ಕೂಡ ರುಚಿಯಾಗಿತ್ರೀ..ಭಾಳ ಮಂದಿ ಇದ್ರೂ ಊಟಕ್ಕೇನೂ ತೊಂದ್ರೆ ಆಗಲಿಲ್ಲಿ ಬಿಡ್ರೀ...ಆರಾಮಾಗಿ ಕುಂತ್‌ ಉಂಡೀವ್‌ ನೋಡ್ರೀ.... ಸಾಮರಸ್ಯದ ಬೀಡು ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದವರು ಊಟದ ವ್ಯವಸ್ಥೆ ಕುರಿತು ಹೀಗೆ ಮೆಚ್ಚುಗೆಯ ನುಡಿಗಳನ್ನಾಡಿದರು.

ಒಂದುವರೆ ಲಕ್ಷ ಜನರಿಗೆ ಭೂರಿ ಭೋಜನ:

ಸಾಹಿತ್ಯ ಸಮ್ಮೇಳನಕ್ಕಾಗಿ ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಜನ ಕನ್ನಡಪ್ರಿಯರಿಗೆ ಉಪಹಾರ ಹಾಗೂ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಒಂದುವರೆ ಲಕ್ಷ ಜನರಿಗೆ ಊಟ ಹಾಗೂ 75 ಸಾವಿರ ಜನರಿಗೆ ಉಪಹಾರ ವ್ಯವಸ್ಥೆ ಇತ್ತು. ಸಮ್ಮೇಳನದ ಮೊದಲ ದಿನವಾದ ಶುಕ್ರವಾರ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಬೆಳಗಿನ ಉಪಹಾರ ಸವಿದರು. ಬೆಳಿಗ್ಗೆ 7 ಗಂಟೆಯಿಂದಲೇ ಉಪಹಾರ ವಿತರಣೆ ಶುರುವಾಗಿತ್ತು. ಕೇಸರಿಬಾತ್‌, ಉಪ್ಪಿಟ್ಟು ಜೊತೆಗೆ ಬೆಲ್ಲದ ಚಹಾ ನೀಡಲಾಯಿತು.

ಸಮಗ್ರ ಭಾಷಾ ಅಭಿವೃದ್ಧಿಗೆ ಶೀಘ್ರ ಕಾನೂನು ಸ್ವರೂಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮಧ್ಯಾಹ್ನ 1.30ರ ಹೊತ್ತಿಗೆ ಊಟ ವಿತರಣೆ ಆರಂಭಿಸಲಾಯಿತು. ಊಟ ವಿತರಣೆ ವೇಳೆ ಯಾವುದೇ ಗದ್ದಲ-ಗೋಜು ಆಗಬಾರದು ಎಂಬ ಕಾರಣಕ್ಕಾಗಿ ಹೆಚ್ಚಿನ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಸಮ್ಮೇಳನ ಮುಖ್ಯ ವೇದಿಕೆಯ ಬಳಿಯೇ ಊಟದ ಕೌಂಟರ್‌ಗಳನ್ನು ತೆರದಿದ್ದರಿಂದ ಸಮ್ಮೇಳನಕ್ಕೆ ಆಗಮಿಸಿದ್ದವರು ಮುಖ್ಯವೇದಿಕೆಯಲ್ಲಿ ಜರುಗಿದ ಸಮ್ಮೇಳನ ಉದ್ಘಾಟನಾ ಸಮಾರಂಭದ ಬಳಿಕ ನೇರವಾಗಿ ಊಟದ ಕೌಂಟರ್‌ಗಳ ಕಡೆ ಹೆಜ್ಜೆ ಹಾಕಿದರು. 56 ಕೌಂಟರ್‌ಗಳನ್ನು ಉಪಹಾರಕ್ಕೆ ಹಾಗೂ ಊಟ ವಿತರಣೆಗೆ 277 ಕೌಂಟರ್‌ಗಳನ್ನು ನಿರ್ಮಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿದ್ದ ಕೌಂಟರ್‌ಗಳಿಂದ ಊಟ ವಿತರಣೆಗೂ ಯಾವುದೇ ಸಮಸ್ಯೆಯಾಗಲಿಲ್ಲ. ಮಧ್ಯಾಹ್ನದ ಊಟಕ್ಕೆ ಶೇಂಗಾ ಹೋಳಿಗೆ, ಖಡಕ್‌ ರೊಟ್ಟಿ, ಬದನೆಕಾಯಿಪಲ್ಯೆ, ಚಪಾತಿ, ಅನ್ನ, ಸಾಂಬರ್‌, ಉಪ್ಪಿನಕಾಯಿ, ಶೇಂಗಾ ಚಟ್ನಿ, ಮೊಸರು ನೀಡಲಾಯಿತು.

ಶನಿವಾರದ ಊಟದ ಮೆನು

ಲಡಗಿಪಾಕ್‌, ಚಪಾತಿ, ಖಡಕ್‌ ಜೋಳ, ಸಜ್ಜೆ ರೊಟ್ಟಿ. ಮಿಕ್ಸ್‌ ಬಾಜಿ, ಚಟ್ನಿ, ಬಿರಿಯಾನಿ ರೈಸ್‌, ಅನ್ನಸಾಂಬರ್‌, ಮೊಸರು, ಮಜ್ಜಿಗೆ. ಉಪಹಾರಕ್ಕೆ ರವಾಉಂಡೆ, ವೆಜ್‌ ಪಲಾವ್‌, ಬೆಲ್ಲದ ಟೀ

ಒರಿಸ್ಸಾ-ಯುಪಿ-ಆಂಧ್ರದಿಂದ ಬಾಣಸಿಗರು

ಸಮ್ಮೇಳನಕ್ಕೆ ಬರುವ ಕನ್ನಡ ಸಾಹಿತ್ಯ ಪ್ರಿಯರಿಗೆ ರುಚಿರುಚಿಯಾದ ಅಡುಗೆ ತಯಾರಿಸಲೆಂದೇ ಹಾವೇರಿ, ಧಾರವಾಡ, ಹುಬ್ಬಳ್ಳಿಯ ಬಾಣಸಿಗರ ಜೊತೆಗೆ ಆಂಧ್ರಪ್ರದೇಶ, ಒರಿಸ್ಸಾ, ಉತ್ತರ ಪ್ರದೇಶದ ಬಾಣಸಿಗರು ಆಗಮಿಸಿದ್ದರು. ಉಪಹಾರ ಹಾಗೂ ಊಟವನ್ನು ವಿತರಣೆ ಮಾಡುವುದಕ್ಕಾಗಿಯೇ ನೂರಾರು ಕಾರ್ಮಿಕರನ್ನು ನಿಯೋಜಿಸಿಕೊಳ್ಳಲಾಗಿತ್ತು. 1200 ಜನರು ಬಾಣಸಿಗರು ಹಾಗೂ 1300 ಜನರನ್ನು ಆಹಾರ ವಿತರಣೆ ಕೆಲಸಕ್ಕೆಂದು ತೆಗೆದುಕೊಂಡಿದ್ದೇವೆ ಎಂದು ಊಟದ ವ್ಯವಸ್ಥೆಯ ಜವಾಬ್ದಾರಿ ಹೊತ್ತಿದ್ದ ಹುಬ್ಬಳ್ಳಿಯ ಭೈರು ಕ್ಯಾಟರ ​ರ್‍ಸ್ನ ರತನ್‌ ಪ್ರಜಾಪಥ್‌ ಹಾಗೂ ಜೀವರಾಜ್‌ ಕನ್ನಡಪ್ರಭಕ್ಕೆ ತಿಳಿಸಿದರು.

ಮೊದಲ ದಿನದ ಮಧ್ಯಾಹ್ನದ ಅನ್ನ ತಯಾರಿಕೆಗಾಗಿ 15 ಟನ್‌ ಅಕ್ಕಿ, 40 ಕ್ವಿಂಟಲ್‌ ತೊಗರಿ ಬೇಳೆಯನ್ನು ಬಳಕೆ ಮಾಡಲಾಗಿದೆ. ಶನಿವಾರ ಹಾಗೂ ಭಾನುವಾರ ಆಹಾರ ತಯಾರಿಕೆ ಯ ಪ್ರಮಾಣವನ್ನು ಹೆಚ್ಚಳ ಮಾಡಲಾಗುವುದು. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವುದರಿಂದ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಜನರಿಗೆ ಅಡುಗೆ ತಯಾರಿಸಲು ನಿರ್ಧರಿಸಲಾಗಿದೆ ಎಂದು ಭೋಜನಾಲಯ ವ್ಯವಸ್ಥಾಪಕರು ಹೇಳಿದರು.

ಅಂಗವಿಕಲರು, ಮಹಿಳೆಯರಿಗೆ ಪ್ರತ್ಯೇಕ ಕೌಂಟರ್‌:

ಸಮ್ಮೇಳನಕ್ಕೆ ಆಗಮಿಸಿದ್ದ ಅಂಗವಿಕಲರು ಹಾಗೂ ಮಹಿಳೆಯರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಪ್ರತ್ಯೇಕ 8 ಕೌಂಟರ್‌ಗಳನ್ನು ತೆರೆಯಲಾಗಿತ್ತು. ಒಂದೊಂದು ಕೌಂಟರ್‌ಗೂ ಓರ್ವ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ನಾಲ್ಕು ಕೌಂಟರ್‌ಗಳನ್ನು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ನಿಗದಿಗೊಳಿಸಲಾಗಿತ್ತು. ಇವರ ಗುರುತಿಸುವಿಕೆಗಾಗಿ ಪ್ರತ್ಯೇಕ ಬ್ಯಾಡ್ಜ್‌ ನೀಡಲಾಗಿತ್ತು. ಊಟ ವಿತರಣೆ ಬಳಿಯೇ ಬೃಹತ್‌ ಶಾಮಿಯಾನಗಳನ್ನು ನಿರ್ಮಿಸಲಾಗಿತ್ತು. ಹೀಗಾಗಿ ಬಹುತೇಕರು ನೆಲದಲ್ಲಿ ಆರಾಮವಾಗಿ ಕುಳಿತು ಊಟ ಮಾಡುವ ದೃಶ್ಯ ಕಂಡು ಬಂತು. ಊಟ ತಯಾರಿಕೆ ಸ್ಥಳ ಸೇರಿದಂತೆ ಪ್ರತಿ ಕೌಂಟರ್‌ಗಳಿಗೆ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.

ಕನ್ನಡದ ಜಾತ್ರೆಗೆ ಹಳ್ಳಿ ಜನರು ರೊಟ್ಟಿಕಳಿಸಿಕೊಟ್ಟರು

ಸಾಹಿತ್ಯ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿಯೇ ನಡೆಯುತ್ತಿದೆ. ನಾವು ಸಹ ಏನಾದರೂ ಸೇವೆ ಮಾಡಬೇಕು ಎಂದು ಜಿಲ್ಲೆಯ ಅನೇಕ ಹಳ್ಳಿಗಳ ಜನರು ಸಮ್ಮೇಳನಕ್ಕೆ ಜೋಳದರೊಟ್ಟಿಯನ್ನು ಕಳಿಸಿಕೊಟ್ಟಿದ್ದಾರೆ. ಕೆಲವರು ನೇರವಾಗಿ ಸಮ್ಮೇಳನಕ್ಕೆ ರೊಟ್ಟಿನೀಡಿದರೆ, ಬಹುತೇಕರು ಮಠ-ಮಾನ್ಯಗಳ ಮೂಲಕ ಸಮ್ಮೇಳನಕ್ಕೆ ರೊಟ್ಟಿಯನ್ನು ಕಳಿಸಿಕೊಟ್ಟಿದ್ದಾರೆ. ಸಮ್ಮೇಳನಕ್ಕೆ ಒಟ್ಟು 4 ಲಕ್ಷ ಖಡಕ್‌ ರೊಟ್ಟಿಗಳನ್ನು ತಯಾರಿಸಲಾಗಿದ್ದು, ಈ ಪೈಕಿ ಬಹುತೇಕ ರೊಟ್ಟಿಗಳು ಹಳ್ಳಿಹಳ್ಳಿಗಳಿಂದ ಜನರು ಸಮ್ಮೇಳನದ ಪ್ರೀತಿಗಾಗಿ ಮಾಡಿ ಕಳಿಸಿದ ರೊಟ್ಟಿಗಳು ಎಂದು ಊಟದ ವ್ಯವಸ್ಥಾಪಕರು ತಿಳಿಸಿದರು.

ಸಮ್ಮೇಳನದಾಗ ಅಡುಗೆ ಮಾಡೋದೂ ಖುಷೀರಿ...ನಾವು ನಿತ್ಯ ಮದುವೆ, ಗೃಹಪ್ರವೇಶ ಮತ್ತಿತರ ಶುಭ ಸಮಾರಂಭಗಳಿಗೆ ಅಡುಗೆ ಮಾಡ್ಲಿಕ್ಕ ಹೋಗ್ತೀವ್ರೀ. ಆದರೆ, ಅಲ್ಲಿ ಕೂಲಿ ಕೊಡ್ತಾರಾಂತ ಹೋಗ್ತೀವ್ರಿ. ಆದರೆ, ಇಲ್ಲಿಗೆ ಬಂದದ್ದು ಪುಣ್ಯದ ಕೆಲಸ ಮಾಡೋಣಂತರೀ...ಸಾಹಿತ್ಯ ಸಮ್ಮೇಳನದಾಗ ಅಡುಗೆ ಮಾಡಿ ನಮ್‌ ಕನ್ನಡ ಜನ್ರೀಗೆ ಹಸಿವು ನೀಗಿಸೋದು ಪುಣ್ಯದ ಕೆಲಸವೇನಲ್ರೀ...ಹೀಗೆ ಪ್ರಶ್ನಿಸಿದರು ಸಮ್ಮೇಳನದ ಅಡುಗೆ ಸಹಾಯಕರಾದ ಲಕ್ಷ್ಮಿ, ಮೀನಾ ಹಾಗೂ ಜ್ಯೋತಿ. ಸಮ್ಮೇಳನದ ಅಡುಗೆ ತಯಾರಕರಿಗೆ ಸಹಾಯಕ್ಕೆಂದು ನಿಯೋಜನೆಗೊಂಡಿದ್ದ ಮಹಿಳೆಯರು ತಾವು ಮಾಡುತ್ತಿರುವ ಬರೀ ಅಡುಗೆ ಕೆಲಸವಲ್ಲ. ನಾವೂ ಸಹ ಕನ್ನಡದ ಕೆಲಸ ಮಾಡುತ್ತಿದ್ದೇವೆ. ಹಸಿದು ಬಂದವರಿಗೆ ಊಟ ಹಾಕುವ ಪುಣ್ಯದ ಕೆಲಸದಲ್ಲಿ ನಾವೂ ಭಾಗಿಯಾಗಿದ್ದೇವೆ ಎಂದು ಹೇಳಿದರು.

 

Kannada Sahitya Sammelana: ಪರ್ಯಾಯ ಸಮ್ಮೇಳನ ನಡೆಸೋರು ಹಾವೇರಿ ವಿರೋಧಿಗಳು: ಮಹೇಶ್ ಜೋಷಿ

ಪದವಿ ವಿದ್ಯಾರ್ಥಿಗಳ ಪಾರ್ಚ್‌ಟೈಮ್‌ ಕೆಲಸ ಸಾಹಿತ್ಯ ಸಮ್ಮೇಳನದ ಊಟ ವಿತರಣೆ, ಬಾಣಸಿಗರಿಗೆ ಸಹಾಯ ಸೇರಿದಂತೆ ಇತರೆ ಕೆಲಸಗಳಿಗೆ ಹಾವೇರಿ, ಹುಬ್ಬಳ್ಳಿ ಹಾಗೂ ಧಾರವಾಡದ ಅನೇಕ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ನಾವು ಯಾವುದೇ ಊಟ ತಯಾರಿಕೆ, ಸಹಾಯಕ ಕೆಲಸಕ್ಕೆ ಹೋಗುತ್ತೇವೆ. ಇದು ನಮಗೆ ಪಾರ್ಚ್‌ಟೈಮ್‌ ಕೆಲಸ. ಇದರಿಂದ ಬಂದ ಹಣದಲ್ಲಿ ಶೈಕ್ಷಣಿಕ ಶುಲ್ಕ ಭರಿಸುವುದು ಸೇರಿದಂತೆ ಇತರೆ ಖರ್ಚುಗಳನ್ನು ನಿಭಾಯಿಸುತ್ತೇವೆ. ಕೆಲವರು ಪದವಿ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿದ್ದೇವೆ. ಈ ರೀತಿಯ ಸಂದರ್ಭಗಳಲ್ಲಿ ಒಂದೆರೆಡು ದಿನ ಕೂಲಿ ಕೆಲಸಕ್ಕೆ ಬಂದು ಹೋಗುತ್ತೇವೆ ಎಂದು ಸ್ನಾತಕೋತ್ತರ ವಿದ್ಯಾರ್ಥಿಗಳಾದ ರವಿಕುಮಾರ್‌, ಮಹೇಶ್‌ ಹಾಗೂ ರಾಜಣ್ಣ ತಿಳಿಸಿದರು. 

ಮೊಬೈಲ್‌ ನೆಟ್‌ವರ್ಕ್ ಇಲ್ಲದೆ ಸಾಹಿತ್ಯಾಭಿಮಾನಿಗಳ ಪರದಾಟ

- ವಸಂತಕುಮಾರ ಕತಗಾಲ

ಹಲೋ ಹಲೋ....ಹಲೋ....ಊಹೂಂ ನೆಟ್‌ವರ್ಕ್ ಇಲ್ಲವೇ ಇಲ್ಲ. ಮೆಚ್ಚಿನ ಸಾಹಿತಿಗಳು, ಆಪ್ತರು, ಸ್ನೇಹಿತರೊಂದಿಗೆ ಕ್ಲಿಕ್ಕಿಸಿದ ಸೆಲ್ಫಿಯನ್ನೂ ಕಳುಹಿಸಲಾಗದೆ ಕೈಕೈ ಹಿಸುಕಿ ಕೊಂಡ ಜನರು...ಒಟ್ಟಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊಬೈಲ್‌ ನೆಟ್‌ವರ್ಕ್ ಇಲ್ಲದೆ ಎಲ್ಲರೂ ಪರದಾಡುವಂತಾಯಿತು. ಸೆಲ್ಫಿ ತೆಗೆದುಕೊಂಡ ಯುವಕ, ಯುವತಿಯರ ಸಂಭ್ರಮ ಫೋಟೋ ಕಳುಹಿಸುವಾಗ ಇರಲಿಲ್ಲ. ಗಂಟೆಗಳ ಕಾಲ ಪ್ರಯತ್ನಿಸಿದರೂ ಒಂದು ಫೋಟೋವನ್ನೂ ಕಳುಹಿಸಲು ಸಾಧ್ಯ ವಾಗಲಿಲ್ಲ.

Doddarangegowda: ಎಡಪಂಥ ಬಲಪಂಥ ಗೊತ್ತಿಲ್ಲ, ನನ್ನದು ಮಾನವ ಪಂಥ: ದೊಡ್ಡರಂಗೇಗೌಡ

ಸಮಾರಂಭಕ್ಕೆ ಆಗಮಿಸುವ ಕೆಲವು ಗಣ್ಯರಿಗೂ ನೆಟ್‌ವರ್ಕ್ ಸಮಸ್ಯೆ ಕಾಡಿತು. ಪೊಲೀಸರು ಗೇಟ್‌ ಬಳಿಯೇ ತಡೆದು ನಿಲ್ಲಿಸಿದಾಗ ಸಂಘಟಕರಿಗೆ ಕರೆ ಮಾಡಿ ಹೇಳೋಣವೆಂದರೆ ಮೊಬೈಲ್‌ ಸದ್ದೇ ಮಾಡುತ್ತಿರಲಿಲ್ಲ. ಮಾಧ್ಯಮ ಪ್ರತಿನಿಧಿಗಳು ಕೂಡ ನೆಟ್‌ವರ್ಕ್ ಇಲ್ಲದೆ ಪರಿತಪಿಸುವಂತಾಯಿತು. ಅದೆಷ್ಟೋ ಜನರು ಸಮ್ಮೇಳನಕ್ಕೆ ಬರುವಾಗ ಒಟ್ಟಿಗೆ ಬಂದರು. ಒಂದಿಬ್ಬರು ಗೋಷ್ಠಿಗೆ, ಮತ್ತಿಬ್ಬರು ಪುಸ್ತಕ ಮಳಿಗೆಗಳಿಗೆ ಹೋದರೆ ಆಮೇಲೆ ಒಬ್ಬರಿಗೊಬ್ಬರು ಸಿಗದೆ ಪ್ರತ್ಯೇಕವಾಗಿ ಮನೆಗೆ ಮರಳುವಂತಾಯಿತು. . ಸಾವಿರಾರು ಜನರು ಒಟ್ಟಿಗೆ ಸೇರಿದ್ದೂ ಮೊಬೈಲ್‌ ಟವರ್‌ ಮೇಲೆ ಅಧಿಕ ಒತ್ತಡ ಬೀಳುವಂತಾಗಿದ್ದು ಇದಕ್ಕೆ ಕಾರಣ ಎಂದು ಸಮಜಾಯಿಷಿ ಬಂತು.

Follow Us:
Download App:
  • android
  • ios