Asianet Suvarna News Asianet Suvarna News

Doddarangegowda: ಎಡಪಂಥ ಬಲಪಂಥ ಗೊತ್ತಿಲ್ಲ, ನನ್ನದು ಮಾನವ ಪಂಥ: ದೊಡ್ಡರಂಗೇಗೌಡ

  • ಮುಚ್ಚಿರುವ ಸರ್ಕಾರಿ ಶಾಲೆಗಳಿಗೆ ಮರುಜೀವ ನೀಡಿ
  • ಸಮ್ಮೇಳನದಲ್ಲಿ ಕವಿತೆ ಹಾಡಬಾರದು ಎಂದರೆ ವಿರೋಧಿಸುತ್ತೇನೆ
  • ಜನ ಸಾಹಿತ್ಯ ಸಮ್ಮೇಳನವನ್ನು ಒಂದು ಪಂಥದ ಸಮ್ಮೇಳನ ಅನ್ನಬಹುದು
  • ವಿಮರ್ಶೆ ಇವತ್ತು ಗುಂಪುಗಾರಿಕೆಯಿಂದ ಕೂಡಿದೆ

 

I dont know left or right mine is humanity says dr doddarangegowda rav
Author
First Published Jan 6, 2023, 2:57 PM IST

- ಗಿರಿ

ಸಂದರ್ಶನ: ದೊಡ್ಡರಂಗೇಗೌಡ,

ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷರು

-------------------------------------

ಸಮ್ಮೇಳನ ಅಧ್ಯಕ್ಷರಾಗಿರುವ ನಿಮ್ಮ ಭಾಷಣದ ಆಶಯ ಅಥವಾ ಥೀಮ್ ಏನು?

ತಂಬಾ ಸರಳವಾಗಿ ಹೇಳಬೇಕು ಎಂದರೆ ಕನ್ನಡ, ಕರ್ನಾಟಕ ಮತ್ತು ಕನ್ನಡಿಗನ ಸಮಗ್ರ ಏಳಿಗೆಗಾಗಿ ನನ್ನ ಭಾಷಣ ಮತ್ತು ಚಿಂತನೆ ಹಾಗೂ ನಿಲುವು ಇರುತ್ತದೆ. ಆ ನಿಟ್ಟಿನಲ್ಲಿ ನನ್ನ ಉಪನ್ಯಾಸಗಳು ಸಮ್ಮೇಳನದಲ್ಲಿ ಮೂಡಿ ಬರಲಿವೆ.

ನೀವು ಹೇಳುವ ಕನ್ನಡಿಗನ ಆ ಸಮಗ್ರ ಏಳ್ಗೆಗಾಗಿ ಏನೆಲ್ಲ ಕೆಲಸಗಳು ಆಗಬೇಕಿದೆ?

ತುಂಬಾ ಕೆಲಸಗಳು ಆಗಬೇಕಿದೆ. ಒಂದು ಉದಾಹರಣೆ ಕೊಡುವುದಾದರೆ ಕನ್ನಡಕ್ಕಾಗಿ ಹಲವು ಕಾನೂನುಗಳನ್ನು ಮಾಡಿದ್ದಾರೆ. ಅವು ನಮ್ಮ ಸರ್ಕಾರದಲ್ಲಿ ಯಾವುದಕ್ಕೂ ಅನ್ವಯ ಆಗುತ್ತಿಲ್ಲ. ಕನ್ನಡದ ಅಭಿವೃದ್ಧಿಗೆ ಮತ್ತು ಕನ್ನಡಿಗನ ಏಳ್ಗೆಗಾಗಿ ಇರುವ ಕಾನೂನುಗಳು ಅನ್ವಯ ಆಗಬೇಕು. ಅವುಗಳನ್ನು ಆಚರಣೆಗೆ ತರುವ ನಿಟ್ಟಿನಲ್ಲಿ ಒತ್ತು ಕೊಡಿ. ಹೊರಗಿನಿಂದ ಕರ್ನಾಟಕಕ್ಕೆ ಬರುವ ಅಧಿಕಾರಿಗಳು ಅಂದರೆ ಐಎಎಸ್, ಐಪಿಎಸ್‌ನಂತಹ ಆಡಳಿತಾತ್ಮಕ ಅಧಿಕಾರಿಗಳಿಗೆ ಮೂರು ತಿಂಗಳು ಕನ್ನಡದ ಪ್ರಶಿಕ್ಷಣವನ್ನು ಕೊಡಬೇಕು. ಅವರ ಬಿಡುವಿನ ಸಮಯವನ್ನು ನೋಡಿಕೊಂಡು ಅವರಿಗೆ ಭಾಷೆಯ ಕಲಿಕೆಗೆ ವೇದಿಕೆ ಅಥವಾ ವ್ಯವಸ್ಥೆ ಮಾಡಬೇಕು. ದಿನಕ್ಕೆ ಎರಡು ಅಥವಾ ಮೂರು ಗಂಟೆಗೆ ಭಾಷೆಯನ್ನು ಕಲಿಯುವುದಕ್ಕೆ ಮೀಸಲಿಡಬೇಕು. ಇದನ್ನು ಕಡ್ಡಾಯ ಮಾಡಬೇಕು.

ಮರಾಠಿಗರಿಗೆ ಒಂದಂಗುಲ ನೆಲ ಬಿಟ್ಟುಕೊಡುವುದಿಲ್ಲ; ಇದು ಕನ್ನಡಿಗರ ಶಪಥ: ಡಾ.ದೊಡ್ಡರಂಗೇಗೌಡ

ಇದು ಸಾಧ್ಯವೇ?

ಫ್ರಾನ್ಸ್ ಅಥವಾ ಜರ್ಮನಿ ತೆಗೆದುಕೊಳ್ಳಿ. ಅಲ್ಲಿ ಇಂಗ್ಲಿಷ್ ಇಲ್ಲ. ಯಾರೇ ಅಲ್ಲಿಗೆ ಕೆಲಸಕ್ಕೆ ಹೋದರೂ ಮೊದಲು ಆ ದೇಶದ ಸ್ಥಳೀಯ ಭಾಷೆಯನ್ನು ಕಲಿಯಬೇಕು. ಹೀಗೆ ತಮ್ಮ ಭಾಷೆ ಕಲಿಸಿ ಕೊಡುವುದಕ್ಕೆ ಅಲ್ಲಿ ವ್ಯವಸ್ಥೆಗಳು ಇವೆ. ಭಾಷೆ ಕಲಿತ ಮೇಲೆ ಒಂದು ಪ್ರಮಾಣ ಪತ್ರ ಕೂಡ ಕೊಡುತ್ತಾರೆ. ಅದರ ಆಧಾರದ ಮೇಲೆ ಆ ದೇಶಗಳು ತಮ್ಮ ನೆಲದ ಕಡೆ ಬಂದವರಿಗೆ ಉದ್ಯೋಗಗಳನ್ನು ಕೊಡುವ ಪದ್ಧತಿ ಇದೆ. ಇದೇ ವ್ಯವಸ್ಥೆ ನಮ್ಮ ರಾಜ್ಯದಲ್ಲಿ ಯಾಕೆ ಇಲ್ಲ, ಯಾಕೆ ಮಾಡಲು ಆಗಲ್ಲ ಹೇಳಿ? ಒಬ್ಬ ಅಧಿಕಾರಿ ಇಲ್ಲಿನ ಆಡಳಿತಾತ್ಮಕ ಹುದ್ದೆಯಲ್ಲಿ ಇಪ್ಪತ್ತೈದು ವರ್ಷ ಇರ್ತಾರೆ. ಆದರೂ ಇಲ್ಲಿನ ಭಾಷೆಯಾದ ಕನ್ನಡ ಕಲಿಯಲ್ಲ ಅಂದರೆ ಏನು ಅರ್ಥ?

 ಆದರೆ, ಕನ್ನಡದ ಸರ್ಕಾರಿ ಶಾಲೆಗಳನ್ನೇ ಮುಚ್ಚುತ್ತಿದ್ದಾರಲ್ಲ?

ಈ ಬಗ್ಗೆ ನನಗೆ ಮಾತ್ರವಲ್ಲ, ಪ್ರತಿಯೊಬ್ಬ ಕನ್ನಡಿಗನಿಗೂ ಸಿಟ್ಟು- ಕೋಪ ಇದೆ. ಒಂದು ಸಾವಿರ ಕನ್ನಡ ಶಾಲೆಗಳನ್ನು ಮುಚ್ಚಿದ್ದಾರೆ. ಯಾವುದೋ ಸರ್ಕಾರ, ಯಾವುದೋ ಕಾರಣಕ್ಕೆ ಆಗ ಶಾಲೆಗಳನ್ನು ಮುಚ್ಚಿದೆ ಎಂದೇ ಇಟ್ಟುಕೊಳ್ಳೋಣ. ನಂತರ ಬರುವ ಸರ್ಕಾರ ಅದನ್ನು ಹಾಗೆ ಮುಂದುವರಿಸುವುದು ಎಷ್ಟು ಸರಿ ಎಂಬುದು ನನ್ನ ಪ್ರಶ್ನೆ. ಕನ್ನಡ ಭಾಷೆ, ಕನ್ನಡಿಗನ ಏಳ್ಗೆ ಎಂಬುದು ಕನ್ನಡ ಶಾಲೆಗಳ ಉಳಿವು ಆಗುತ್ತದೆ. ದಯವಿಟ್ಟು ರಾಜ್ಯದಲ್ಲಿ ಮುಚ್ಚಿರುವ ಒಂದು ಸಾವಿರ ಸರ್ಕಾರಿ ಕನ್ನಡ ಶಾಲೆಗಳಿಗೆ ಮರು ಜೀವ ನೀಡಿ. ಅದರ ಪುನರುತ್ಥಾನಕ್ಕೆ ಗಮನ ಕೊಡಿ ಎಂಬುದು ನನ್ನ ಅಗ್ರಹ. ಕನ್ನಡ ಮೇಸ್ಟ್ರು ಆಗಿಯೂ ಇದು ನನ್ನ ಮನವಿ ಕೂಡ. ನಮ್ಮಲ್ಲಿ ಶಿಕ್ಷಣವನ್ನು ವ್ಯಾಪರದ ದೃಷ್ಟಿಯಿಂದ ನೋಡುತ್ತಿದ್ದೇವೆ. ಶಿಕ್ಷಣ ವ್ಯಾಪಾರದ ದೃಷ್ಟಿಕೋನದಲ್ಲಿ ನೋಡಬೇಕಿಲ್ಲ. ಶಿಕ್ಷಣ ಎಂಬುದು ಸೇವಾ ವಲಯ. ಅಂದರೆ ನಮ್ಮ ರೈಲ್ವೆ, ಕೆಎಸ್‌ಆರ್‌ಟಿಸಿ ಸೇವೆಗಳು ಇದ್ದಂತೆ. ಈ ಸೇವಾ ವಲಯಗಳು ಹುಟ್ಟಿಕೊಂಡಿರುವುದು ಸಾರ್ವಜನಿಕರಿಗೆ ಅನುಕೂಲ ಮಾಡುವ ಕೈಂಕಾರ್ಯಕ್ಕೆ ಹೊರತು, ಲಾಭದಾಯಕ ಉದ್ಯಮಕ್ಕಾಗಿ ಅಲ್ಲ .

ಕನ್ನಡಕ್ಕಾಗಿ ಆಗಬೇಕಾದ ಕೆಲಸಗಳೇನು?

ನಮ್ಮ ರಾಜ್ಯದಲ್ಲಿ ಈಗ ಸಾಕಷ್ಟು ವಿಶ್ವವಿದ್ಯಾಲಯಗಳು ಇವೆ. ಎಲ್ಲ ವಿವಿಗಳಲ್ಲೂ ಪ್ರಸಾರಂಗಗಳು ಇವೆ. ಈ ಪ್ರಸಾರಂಗಗಳ ಉದ್ದೇಶ ಒಳ್ಳೆಯದು. ಆದರೆ ಒಬ್ಬರು ಮಾಡಿದ್ದನ್ನೇ ಇನ್ನೊಬ್ಬರು ಮಾಡುತ್ತಿದ್ದಾರೆ.  ಒಬ್ಬ ಮಹಾನ್ ವ್ಯಕ್ತಿ ಕುರಿತು ಸಂಪುಟಗಳನ್ನು ಪ್ರಕಟಿಸುತ್ತಾರೆ. ಅದೇ ವ್ಯಕ್ತಿ ಬಗ್ಗೆ ಬೇರೆ ವಿವಿಗಳಲ್ಲೂ ಸಂಪುಟಗಳು ಪ್ರಕಟವಾಗುತ್ತದೆ. ಎಲ್ಲ ವಿವಿಗಳ ಪ್ರಸಾರಂಗಗಳ ನಿರ್ದೇಶಕರು ಆರು ತಿಂಗಳಿಗೊಮ್ಮೆ ಸಭೆ ಸೇರಿ ಯಾವ ವಿವಿಯಲ್ಲಿ ಯಾವ ಸಂಪುಟ ತರುತ್ತಿದ್ದಾರೆ, ಯಾರು ಯಾವುದರ ಕುರಿತು ಪುಸ್ತಕ- ಕೃತಿ ಪ್ರಕಟಿಸಬಹುದು ಎಂಬುದನ್ನು ಮಾತನಾಡಿಕೊಂಡರೆ ಕನ್ನಡದ ಸಾಹಿತ್ಯ ಚೇತನಗಳ ವ್ಯಕ್ತಿಗಳ ಸಂಪುಟಗಳು ಹೆಚ್ಚು ಹೆಚ್ಚು ಬರುತ್ತವೆ. ಹೆಚ್ಚು ಓದುಗರಿಗೆ ತಲುಪುತ್ತವೆ.

ಪ್ರಕಾಶನ ಉದ್ಯಮದಲ್ಲಿ ಏನಾಗುತ್ತಿದೆ?

ನನ್ನ ಆಶಯ ಭಾಷಣದ ಬಹು ಮುಖ್ಯವಾದ ಅಂಶ ಈ ಬಗ್ಗೆಯೇ ಇದೆ.  ಪುಸ್ತಕ ಪ್ರಕಾಶಕರಿಗೆ ಯಾವುದೇ ರೀತಿಯ ಸೌಲಭ್ಯಗಳು ಇಲ್ಲ. ಇರುವುದು ಒಂದೇ ಏಕಗವಾಕ್ಷಿ. ೩ ಕೋಟಿ ಮೀಸಲಿಡುತ್ತಾರೆ. ಆರು ತಿಂಗಳು, ವರ್ಷ, ಎರಡು ವರ್ಷ ಆದರೂ ಸರ್ಕಾರ ಗ್ರಂಥಾಲಯ ಇಲಾಖೆಗೆ ಈ ಹಣವನ್ನು ಸಂದಾಯ ಮಾಡಲ್ಲ. ಗ್ರಂಥಾಲಯ ಇಲಾಖೆಗಳು ಪುಸ್ತಕಗಳನ್ನು ಆಯ್ಕೆ ಮಾಡಿ ಬಿಡುತ್ತದೆ. ಪ್ರಕಾಶಕರು ಅಥವಾ ಲೇಖರು ಕೂಡ ಆಯ್ಕೆ ಆದ ಪುಸ್ತಕಗಳ ಬಿಲ್ಲುಗಳನ್ನೂ ಸಹ ಕೊಟ್ಟಿರುತ್ತಾರೆ. ಆದರೆ, ಯಾವ ಬಿಲ್ಲು ಪಾವತಿ ಆಗಿರಲ್ಲ. ಇದರಿಂದ ಅವರು ಎಷ್ಟು ಬಡ್ಡಿ ಕಟ್ಟಬೇಕಾಗುತ್ತದೆ. ಪ್ರಕಾಶಕರಿಗೆ ಅನ್ಯಾಯ ಆಗುತ್ತಿದೆ. ಆಯಾ ವರ್ಷ ಬಿಲ್ಲುಗಳು ಆಯಾ ವರ್ಷವೇ ಪ್ರಕಾಶಕರಿಗೆ, ಲೇಖರಿಗೆ ಸೇರುವಂತೆ ಕ್ರಮ ಕೈಗೊಳ್ಳಬೇಕು.

 ಈ ಹಿಂದೆ ನಾನು ಒಬ್ಬ ಮುಖ್ಯ ಅಧಿಕಾರಿಯನ್ನು ಭೇಟಿ ಮಾಡಿದ್ದೆ. ಅವರು ಪುಸ್ತಕಕ್ಕೆ ಅಂತ ಮಂಜೂರು ಮಾಡಿದ ಹಣವನ್ನು ನಾವು ಕಸ ಎತ್ತಕ್ಕೆ ಬಳಕೆ ಮಾಡಿದ್ದೇವೆ ಎಂದರು. ಅಂದರೆ ಪುಸ್ತಕ ಇವರ ಅಗತ್ಯಅಲ್ಲ. ಪುಸ್ತಕಕ್ಕೆ ಅಂತ ಮಂಜೂರಾದ ಹಣವನ್ನು ನೀವು ಕಸ ವಿಲೇವಾರಿಗೆ ಹೇಗೆ ಬಳಸುತ್ತೀರಿ, ಇದನ್ನು ನಾನು ಪ್ರತಿಭಟಣೆ ಮಾಡುತ್ತೇನೆ ಎಂದೆ.

ಬೇರೆ ಬೇರೆ ರಾಜ್ಯಗಳಲ್ಲಿ ಲೇಖಕ ಹಾಗೂ ಪ್ರಕಾಶಕರನ್ನು ಪ್ರೋತ್ಸಾಹಿಸುವಿಕೆ ಹೇಗಿದೆ?

 ಕೇರಳದಲ್ಲಿ ಒಬ್ಬ ಲೇಖಕನ ೫೦೦ ಪ್ರತಿ ಕೊಂಡುಕೊಳ್ಳುತ್ತಾರೆ. ತಮಿಳುನಾಡಿನಲ್ಲಿ ೧೦೦೦ ಸಾವಿರ ಪ್ರತಿಗಳನ್ನು ಕೊಳ್ಳಲಾಗುತ್ತದೆ. ಆಂಧ್ರದಲ್ಲೂ ಹೀಗೆ ಇದೆ. ಆದರೆ, ನಮ್ಮಲ್ಲಿ ೩೦೦ ಪ್ರತಿಗಳು ಕೊಳ್ಳುತ್ತಾರೆ. ಈ ೩೦೦ ಪ್ರತಿಗಳಿಗೆ ಕೊಡಬೇಕಾದ ಗೌರವಧನ ಎರಡು ವರ್ಷಗಳಿಂದ ಬಂದಿಲ್ಲ. ಯಾವುದೋ ತಾತನ ಕಾಲದಲ್ಲಿ ಒಂದು ಪುಟಕ್ಕೆ ೭೦ ಪೈಸೆ ಬೆಲೆ ನಿಗದಿ ಮಾಡಿದ್ದಾರೆ. ಅದೇ ಈಗಲೂ ಮುಂದುವರಿಯುತ್ತಿದೆ.

ಸಾಹಿತ್ಯ ಸಮ್ಮೇಳನಗಳ ಜತೆಗೆ ನಿಮ್ಮ ಒಡನಾಟ ಹೇಗಿದೆ?

ಅತ್ಯಂತ ಹಾರ್ದಿಕವಾಗಿದೆ. ನಾನು ಅತಿಥಿಯಾಗಿ, ಪ್ರೇಕ್ಷಕನಾಗಿ, ವೀಕ್ಷಕನಾಗಿ ಸಾಕಷ್ಟು ಸಮ್ಮೇಳಗಳಿಗೆ ಹೋಗಿದ್ದೇನೆ. ಮೂರು ವರ್ಷಕ್ಕೊಮ್ಮೆ ನನ್ನ ಅಹ್ವಾನಿಸುತ್ತಾರೆ. ಅಂದರೆ ಒಂದು ಬಾರಿ ಅಹ್ವಾನ ಮಾಡಿದರೆ ಮತ್ತೆ ಮೂರು ವರ್ಷ ಅಹ್ವಾನ ನೀಡಬಾರದು ಎಂಬುದು ಸಾಹಿತ್ಯ ಪರಿಷತ್ತಿನ ಲಿಖಿತ ನಿಯಮ. ಹಾಗೆ ಅಹ್ವಾನ ನೀಡದಿದ್ದಾಗ ನಾನು ಓದುಗನಾಗಿ, ಸಾಹಿತ್ಯ ಅಭಿಮಾನಿಯಾಗಿಯೂ ಹೋಗುತ್ತೇನೆ

ಕನ್ನಡ ಸಾಹಿತ್ಯ ಸಮ್ಮೇಳನ ಮೂರು ದಿನದ ಸಂಭ್ರಮವಾಗಿ ಉಳಿಯುತ್ತಾ?

ಸಂಭ್ರಮವಾಗಿರುತ್ತದೆ ಹಾಗೂ ಸಂಭ್ರಮಿಸಬೇಕು ನಿಜ. ಆದರೆ, ಕನ್ನಡ ಅರಿವು ಮೂಡುತ್ತದೆ. ಕನ್ನಡ ಬಾವುಟ, ಕನ್ನಡದ ಶಲ್ಯದ ಬಗ್ಗೆ ಅರಿವು ಮೂಡುತ್ತದೆ.ಇಂಗ್ಲಿಷು ಇತ್ಯಾದಿ ಇರಲ್ಲ. ಅಲ್ಲಿ ಕನ್ನಡದ ವಾತಾವರಣವೇ ಇರುತ್ತದೆ. ಕನ್ನಡದ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಇದು ಯುವ ಜನತೆಯ ಪಾಲಿಗೆ ಮುಖ್ಯವಾಗುತ್ತದೆ. 

ಸಮ್ಮೇಳನ ಅಂದರೆ ಜಾತ್ರೆ ಅಂತಾರೆ. ನಿಮ್ಮ ಪ್ರಕಾರ ಏನು?

ಒಂದಿಷ್ಟು ಹಳ್ಳಿಗಳನ್ನು ಒಳಗೊಂಡಂತೆ ಒಂದು ಜಾಗದಲ್ಲಿ ವಾರಕ್ಕೊಮ್ಮೆ ಅಥವಾ ೧೫ ದಿನಕ್ಕೊಮ್ಮೆ ಸಂತೆ ನಡೆಯುತ್ತದೆ. ನಾವು ಸಂತೆಗೆ ಹೋಗುವುದು ಯಾಕೆ? ಕೆಲವು ವಸ್ತುಗಳು ಅಲ್ಲಿ ಸಿಗುತ್ತವೆ. ಕೊಂಡು ಕೊಳ್ಳುವ ವ್ಯವಸ್ಥೆ ಅಲ್ಲಿರುತ್ತದೆ. ಒಟ್ಟಿಗೆ ಎಲ್ಲವೂ ಸಿಗುವ ಜಾಗ ಆಗಿರುತ್ತದೆ. ಸಾಮಾನ್ಯ ವ್ಯಕ್ತಿ, ರೈತ ಬದುಕಿನ ತುತ್ತಿನ ದಾರಿಯೂ ಹೌದು. ಇದರ ಜತೆಗೆ ಸಂತೆಯಲ್ಲಿ ಮಕ್ಕಳಿಗೆ ಆಟದ ಸಾಮಾನುಗಳು ಇರುತ್ತವೆ. ಅವು ಮಕ್ಕಳಿಗೆ ಇಷ್ಟ. ಸಂತೆಗೆ ಹೋದಾಗ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಮಕ್ಕಳು ಸಂಭ್ರಮಿಸುತ್ತಾರೆ. ಜಾತ್ರೆ ಮಾಡುತ್ತಾರೆ. ದೊಡ್ಡವರು ತಮ್ಮ ಕೆಲಸಗಳನ್ನು ಮಾಡಿಕೊಂಡು ಬರುತ್ತಾರೆ. ಸಾಹಿತ್ಯ ಸಮ್ಮೇಳನ ಕೂಡ ಹಾಗೆಯೇ.

ನಿಮ್ಮದು ಯಾವ ಪಂಥ?

ತಂಬಾ ಚಿಕ್ಕ ವಯಸ್ಸಿನಲ್ಲೇ ಕಷ್ಟ ನೋಡಿದವನು. ಒಂದು ಹೊತ್ತಿನ ಊಟಕ್ಕೂ ಬೆಂಗಳೂರಿನಲ್ಲಿ ಪರದಾಡಿದವನು. ಆ ಕಹಿಯಾದ ಅನುಭವಗಳು ಇದ್ದುದ್ದರಿಂದಲೇ ನಾನು ಯಾವ ಪಂಥಕ್ಕೂ ಸೇರದೆ ಮಾನವಪಂಥ ಅಥವಾ ಸಮನ್ವಯ ಪಂಥಕ್ಕೆ ಸೇರಿದ್ದೇನೆ. ನನಗೆ ಈ ಹಿಂದೆ ಯಾರೋ ಕೇಳಿದ್ದರು, ‘ಯಾಕೆ ನೀವು ಸಮಾಜಕ್ಕಾಗಿ ಏನನ್ನೂ ಬರೆದಿಲ್ಲ’ ಅಂತ. ನಾನು ಆತನಿಗೆ ‘ನೀನು ನಾನು ಬರೆದಿದ್ದನ್ನು ಓದಿಲ್ಲ ಹೋಗಯ್ಯ’ ಅಂದೆ. ‘ಯುಗವಾಣಿ’ ಅಂತ ನನ್ನ ಒಂದು ಸಂಗ್ರಹ ಇದೆ. ಅದರಲ್ಲಿ ರೋಗಗ್ರಸ್ಥ ಸಮಾಜಕ್ಕೆ ಕನ್ನಡಿ ಹಿಡಿಯುವ ಸಾಮಾಜಿಕ ಕಳಕಳಿಯ ಬರಹಗಳು ಇವೆ. ನೀವು ಇದನ್ನು ಓದದೆ ನನಗೆ ಸಾಮಾಜಿಕ ಬದ್ಧತೆ ಇಲ್ಲ ಎಂದು ಹಣೆಪಟ್ಟಿ ಕಟ್ಟುವುದು ಯಾಕೆ?

Kannada Sahitya Sammelana: ಹಾವೇರಿ ಪುಣ್ಯಭೂಮಿ, ತಫೋಭೂಮಿ: ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ

Follow Us:
Download App:
  • android
  • ios