Asianet Suvarna News Asianet Suvarna News

Kannada Sahitya Sammelana: ಪರ್ಯಾಯ ಸಮ್ಮೇಳನ ನಡೆಸೋರು ಹಾವೇರಿ ವಿರೋಧಿಗಳು: ಮಹೇಶ್ ಜೋಷಿ

- ಕನ್ನಡದಲ್ಲೇ ಕಾನೂನು ಸುಗ್ರೀವಾಜ್ಞೆಗೆ ಪಟ್ಟು ಹಿಡಿಯುತ್ತೇವೆ.
- ಬಿಜೆಪಿಗೆ ಓಟು ಹಾಕಿ ಅನ್ನೋ ಮಾತಿಗೂ ತಡೆ ಹಾಕ್ತೀನಿ.
- ಈ ಬಾರಿ ಅತ್ಯಧಿಕ 11 ಮಂದಿ ಮುಸ್ಲಿಂ ಸಾಹಿತಿಗಳು ಸಮ್ಮೇಳನದಲ್ಲಿದ್ದಾರೆ.
 

Dr Mahesh Joshi Interview Speaks On 86th Haveri Kannada Sahitya Sammelana gvd
Author
First Published Jan 6, 2023, 3:06 PM IST

ಜೋಗಿ

1. ನೀವು ಕಸಾಪ ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮೊದಲ ಸಾಹಿತ್ಯ ಸಮ್ಮೇಳನವಿದು. ಏನಿದರ ವಿಶೇಷ?
ಇದು 86ನೇ ಸಾಹಿತ್ಯ ಸಮ್ಮೇಳನ. ದೈವ ಸಂಕಲ್ಪವೋ ಏನೋ ಮುಖ್ಯಮಂತ್ರಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಒಂದೇ ಜಿಲ್ಲೆಯವರು. 107 ವರ್ಷಗಳ ಕನ್ನಡ ಸಾಹಿತ್ಯ ಪರಿಷತ್ ಇತಿಹಾಸದಲ್ಲಿ ಹೀಗಾಗ್ತಿರೋದು ಇದೇ ಮೊದಲು. ಆಹ್ವಾನ ಪತ್ರಿಕೆಯಲ್ಲಿ ಮೊದಲ ಬಾರಿಗೆ ಪರಿಷತ್ತಿನ ನಿರ್ಮಾತೃಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಈ ಮೂವರ ಛಾಯಾಚಿತ್ರ ಇದೆ. ಸಾಹಿತ್ಯ ಪರಿಷತ್ತಿನ ಆಧಾರ ಸ್ತಂಭಗಳು ಯಾರು ಅಂತ ಜನರಿಗೆ ಗೊತ್ತಾಗಬೇಕು ಅಂತ ಈ ಪ್ರಯತ್ನ.

* ಬಹಳ ಮುಖ್ಯವಾಗಿ ಈಗ ನಡೆಯುತ್ತಿರುವ ಸಮ್ಮೇಳನ ಸಾಮರಸ್ಯದ ಭಾವ, ಕನ್ನಡದ ಜೀವ ಎನಿಸಿಕೊಂಡ ಹಾವೇರಿಯಲ್ಲಿ. ಸಮಾನತೆ ಸಾರಿದ ಕನಕದಾಸರು, ಸಂತ ಶಿಶುನಾಳ ಶರೀಫರು, ಕ್ರಾಂತಿಕಾರಿ ಸರ್ವಜ್ಞರು, ಪಂಚಾಕ್ಷರಿ ಗವಾಯಿ, ಹಾನಗಲ್ಲ ಕುಮಾರ ಸ್ವಾಮಿಗಳು, ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪ ಮೊದಲಾದರ ನಾಡು ಈ ಹಾವೇರಿ. ಜಿಲ್ಲೆಯ ಈ ಎಲ್ಲ ಮಹನೀಯರ ಹೆಸರನ್ನು ಸಮ್ಮೇಳನದಲ್ಲಿ ಬಳಸಿಕೊಳ್ಳಲಾಗುತ್ತದೆ.

* ಈವರೆಗೆ ಸಾಹಿತ್ಯ ಪರಿಷತ್‌ನಲ್ಲಿ ಭುವನೇಶ್ವರಿಯ ಪುತ್ಥಳಿ ಇರಲಿಲ್ಲ. ಎರಡು ತಿಂಗಳ ಕೆಳಗೆ ಅದನ್ನು ಪ್ರತಿಷ್ಠಾಪಿಸಲಾಯಿತು. ಅದನ್ನೂ ಆಹ್ವಾನ ಪತ್ರಿಕೆಯಲ್ಲಿ ಸೇರಿಸಲಾಗಿದೆ. ಕನ್ನಡ ಧ್ವಜದ ಪ್ರತಿಬಿಂಬ, ಹಾವೇರಿಯ ಅಸ್ಮಿತೆ ಸಾರುವ ಹಳದಿ ಕೆಂಪು ಬಣ್ಣದಲ್ಲಿ ಆಹ್ವಾನ ಪತ್ರಿಕೆ ಇರುತ್ತದೆ. ಮೊದಲನೇ ಬಾರಿ ಪ್ರಧಾನ ವೇದಿಕೆಗೆ ಕನಕ, ಶರೀಫ, ಸರ್ವಜ್ಞ ಈ ಮೂವರ ಹೆಸರನ್ನು ಇಡಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪಡೆದ ವಿ ಕೃ ಗೋಕಾಕ್, ಮೈಲಾರ ಮಹಾದೇವ, ಅಂಬಿಗರ ಚೌಡಯ್ಯ ಮೊದಲಾದವರ ಹೆಸರನ್ನು ಸಮಾನಾಂತರ ವೇದಿಕೆಗೆ ಇಡಲಾಗಿದೆ. ಸಾಹಿತಿಗಳಾದ ಪಾಟೀಲ್ ಪುಟ್ಟಪ್ಪ ಹಾಗೂ ಚಂದ್ರಶೇಖರ್ ಪಾಟೀಲ್ ಹೆಸರನ್ನ ಎರಡನೇ ವೇದಿಕೆಗೆ ಇಡಲಾಗಿದೆ. ಹಾವೇರಿಯ ಅಸ್ಮಿತೆಯನ್ನು ಜ್ಞಾಪಿಸುವ ಕೆಲಸ ಮಾಡಲಾಗುತ್ತಿದೆ.

Kannada Sahitya Sammelana: ಪರ್ಯಾಯ ಸಮ್ಮೇಳನ ಅವರ ಹಕ್ಕು: ಎಚ್.ಎಸ್.ವೆಂಕಟೇಶಮೂರ್ತಿ

* ಸಮ್ಮೇಳನ ಕನ್ನಡಿಗರ ಹಬ್ಬ. ಎಲ್ಲ ಕನ್ನಡಿಗರು ಇಲ್ಲಿ ಸಮಾನ ಗೌರವಕ್ಕೆ ಪಾತ್ರರು. ಇಲ್ಲಿ ಕನ್ನಡವೇ ದೊಡ್ಡದು. ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿ ಸವೋಚ್ಚ ನ್ಯಾಯಾಲಯದ ಆದೇಶವನ್ನು ಗೌರವಿಸಿ ಸಂಜೆ 7 ರಿಂದ  11 ಗಂಟೆಯವರೆಗೆ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತದೆ. ಇದರ ಜೊತೆಗೆ ಆಹ್ವಾನ ಪತ್ರಿಕೆಯಲ್ಲಿ ವೇಳೆಯನ್ನು ಸೇರಿಸಲಾಗಿದೆ. ಶಿಸ್ತಿನ ಸಮಯ ಪಾಲನೆ ಮಾಡುವ ಹಿನ್ನೆಲೆಯಲ್ಲಿ ಈ ಕ್ರಮ.

* ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 86 ಸಾಧಕರಿಗೆ ಸನ್ಮಾನವಿರುತ್ತದೆ. ಇದು ಸಾಹಿತಿಗಳಿಗೆ ಮಾತ್ರ ಅಲ್ಲ, ಕನ್ನಡದ ಸಾಧಕರಿಗಾಗಿ ಮಾಡುತ್ತಿರುವ ಸನ್ಮಾನ. ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯದ ಪರಿಷತ್ತಲ್ಲ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಎಲ್ಲವನ್ನೂ ಒಳಗೊಂಡದು. ಫೀಲ್ಡ್ ಮಾರ್ಷೆಲ್ ಕಾರ್ಯಪ್ಪ ಅವರ ಮಗ, ಕಿಟ್ಟೆಲ್ ಅವರ ಮರಿ ಮೊಮ್ಮಗ ಮೊದಲಾದವರಿಗೆ ಸನ್ಮಾನವಿರುತ್ತದೆ.

* ಒಟ್ಟು 32 ಗೋಷ್ಠಿಗಳಿವೆ. ಇಷ್ಟು ಗೋಷ್ಠಿ ಈವರೆಗೆ ಆಗಿಲ್ಲ. 154 ಜನ ಗಣ್ಯರು ಭಾಗವಹಿಸುತ್ತಿದ್ದಾರೆ. ಇಷ್ಟು ಸಂಖ್ಯೆ ಮಹನೀಯರು ಭಾಗವಹಿಸುತ್ತಿರುವುದೂ ಇದೇ ಮೊದಲು. ಕವಿಗೋಷ್ಠಿಯಲ್ಲಿ ಹೊಸ ಪೀಳಿಗೆಯ ಕವಿಗಳಿಗೆ ಅವಕಾಶ ನೀಡಲಾಗುತ್ತಿದೆ. 31ಜಿಲ್ಲೆಗಳು, 8 ಹೊರನಾಡ ಕನ್ನಡಿಗರ ಭಾಗವಹಿಸುವಿಕೆ ಇದೆ.

* ‘ಕನ್ನಡದಲ್ಲಿ ಕಾನೂನು’ ಎಂಬ ವಿಷಯದಲ್ಲಿ ವಿಶೇಷ ಚರ್ಚೆ ನಡೆಯಲಿದೆ. ‘ಕನ್ನಡದಲ್ಲಿ ಸಮಗ್ರ ಕಾನೂನು’ ಎಂಬ ವಿಧೇಯಕ ಬರುತ್ತಿದೆ. ಅದು ಕಾನೂನಾಗುವ ನಂಬಿಕೆ ಇದೆ. ಅದರಲ್ಲಿ ಜಿಲ್ಲಾ ಮಟ್ಟದ ನ್ಯಾಯಾಲಯಗಳವರೆಗೆ ತೀರ್ಪುಗಳೆಲ್ಲ ಕನ್ನಡದಲ್ಲೇ ಇರಬೇಕು ಅಂತಿದೆ. ಅದಕ್ಕೋಸ್ಕರ ನ್ಯಾಯಾಧೀಶರು  ಮತ್ತು ನ್ಯಾಯವಾದಿಗಳನ್ನಿಟ್ಟುಕೊಂಡು ಈ ಗೋಷ್ಠಿ ಮಾಡಲಾಗುತ್ತಿದೆ.

* ಸಮ್ಮೇಳನಾಧ್ಯಕ್ಷರ ಜೊತೆಗಿನ ಮಾತು ಮಂಥನದಲ್ಲಿ ಸಮಾಜದ ಎಲ್ಲ ಸ್ತರದವರಿಗೆ ಮಹತ್ವ ಕೊಟ್ಟಿದ್ದೇವೆ. ಸಮ್ಮೇಳಾಧ್ಯಕ್ಷರ ಸಾಧನೆ ನೋಡುತ್ತೇವೆ. ಕೃಷಿಕರ ನೈಜ ಸ್ಥಿತಿಯ ಜೊತೆಗೆ ಕೃಷಿ ವಿಶ್ವ ವಿದ್ಯಾಲಯಗಳು ನೀಡಬಹುದಾದ ಕೊಡುಗೆ ಬಗ್ಗೆ ಚರ್ಚೆ ಮಾಡಲಿದ್ದೇವೆ. ‘ವರ್ತಮಾನದ ಮಹಿಳೆ’ ಗೋಷ್ಠಿಯಲ್ಲಿ ಸಾಹಿತ್ಯಿಕ, ಔದ್ಯೋಗಿಕ, ಕೃಷಿ ಕ್ಷೇತ್ರದಲ್ಲಿನ ಮಹಿಳೆಯರ ಸಾಧನೆಯ ಕುರಿತಾದ ವಿಚಾರ ಮಂಡನೆ ನಡೆಯಲಿದೆ. ದಮನಿತ ಲೋಕದ ಸಬಲೀಕರಣ ಹೇಗಾಗಬೇಕು ಅನ್ನೋದರ ಬಗೆಗೆ ಸಕಾರಾತ್ಮಕ ಚರ್ಚೆ ನಡೆಯಲಿದೆ. ಕನ್ನಡ ಸಾಹಿತ್ಯದ ವೈವಿಧ್ಯತೆ, ಜಿಲ್ಲಾ ದರ್ಶನದ ಕುರಿತ ಗೋಷ್ಠಿಗಳಿವೆ. ಅನೇಕ ಕನ್ನಡ ಸಾಧಕರ ಶತಮಾನೋತ್ಸವ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿಯೂ ಗೋಷ್ಠಿ ನಡೆಯಲಿದೆ. ‘ವಿದೇಶದಲ್ಲಿ ಕನ್ನಡಿಗರ ಡಿಂಡಿಮ’ ಗೋಷ್ಠಿಯಲ್ಲಿ ವಿದೇಶದಲ್ಲಿರುವ ಕನ್ನಡಿಗರು ಭಾಗವಹಿಸಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಎಸ್ ಎಲ್ ಭೈರಪ್ಪ ಅವರು ‘ಜಯ ಭಾರತ ಜನನಿಯ ತನುಜಾತೆ’ ಎಂಬ ನಾಡಗೀತೆಯ ಅಸ್ಮಿತೆಯ ಬಗ್ಗೆ ವಿಶೇಷ ಭಾಷಣ ಮಾಡುತ್ತಾರೆ.

* ಮೆರವಣಿಗೆಯಲ್ಲಿ ಎಲ್ಲ ಜಿಲ್ಲೆಗಳ ಜನಪದ, ಸಾಂಸ್ಕೃತಿಕ, ವಾದ್ಯಗೋಷ್ಠಿಯ 97 ಕಲಾತಂಡಗಳು ಭಾಗವಹಿಸಲಿವೆ. ಬಹಿರಂಗ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುತ್ತೆ. ಈ ಬಾರಿ ಕಡಿಮೆ ನಿರ್ಣಯಗಳಿರುತ್ತವೆ. ಅದನ್ನು ಅನುಷ್ಠಾನಕ್ಕೆ ತರುವ ಭಗೀರಥ ಪ್ರಯತ್ನ ಮಾಡುತ್ತೇವೆ. ಸಮಾರೋಪದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಕನ್ನಡಿಗರನ್ನು ಆಹ್ವಾನಿಸಲಾಗಿದೆ. ಎಚ್ ಡಿ ದೇವೇಗೌಡ, ಪ್ರಹ್ಲಾದ ಜೋಷಿ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯದ ವಿರೋಧ ಪಕ್ಷದ ನಾಯಕರು ಬರುತ್ತಾರೆ. ಸಮಾರೋಪ ಭಾಷಣವನ್ನು ಬಿ ಎ ವಿವೇಕ ರೈ ಅವರು ಮಾಡುತ್ತಾರೆ. ಮೂರು ರಾಜಕೀಯ ಪಕ್ಷದ ಅಧ್ಯಕ್ಷರು ಬರುತ್ತಾರೆ.

2. ಸಾಹಿತ್ಯ ಪರಿಷತ್ತಿಗೆ ಹೊಸ ರೂಪ ಕೊಡಲು ಪ್ರಯತ್ನಿಸುತ್ತಿದ್ದೀರಿ, ಅದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿ ಆಗಿದ್ದೀರಿ?
ಮತದಾರರು ನನ್ನನ್ನು ದಾಖಲೆಯ ಮತ ನೀಡಿ ಗೆಲ್ಲಿಸಿದ್ದಾರೆ. ನನ್ನ ವಿರುದ್ಧ ನಿಂತಿದ್ದ 20 ಅಭ್ಯರ್ಥಿಗಳ ಠೇವಣಿ ಹೋಯ್ತು. ಇದು ಕಸಾಪ ಇತಿಹಾಸದಲ್ಲೇ ಮೊದಲು. ನಾನು ನನ್ನ ಪ್ರಣಾಳಿಕೆಯಲ್ಲಿ ೫ ವರ್ಷಗಳ ಅವಧಿಯಲ್ಲಿ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತಾಗಿ ಮಾಡುತ್ತೇನೆ ಎಂದಿದ್ದೇನೆ. ಜೊತೆಗೆ ಜನಸಾಮಾನ್ಯರೂ ಸಾಹಿತ್ಯ ಪರಿಷತ್ ಸದಸ್ಯರಾಗಬೇಕು ಅನ್ನುವ ನಿಟ್ಟಿನಲ್ಲಿ 1000 ರು. ಇದ್ದ ಸದಸ್ಯತ್ವ ಶುಲ್ಕವನ್ನು 250 ರು.ಗೆ ಇಳಿಸಿದ್ದೇನೆ. ಮನೆ ಮನೆಯಲ್ಲಿ ಕೂತು ಆ್ಯಪ್ ಮೂಲಕ ಸದಸ್ಯರಾಗಬಹುದು ಅಂದಿದ್ದೆ. ಆ ಕೆಲಸವನ್ನೂ ಮಾಡಿದ್ದೇನೆ. ಮುಂದಿನ ಚುನಾವಣೆ ವೇಳೆ ಮನೆಯಲ್ಲೇ ಕೂತು ಆ್ಯಪ್ ಮೂಲಕ ಸದಸ್ಯರು ಮತ ಚಲಾಯಿಸಬಹುದು. ಕಸಾಪಕ್ಕೆ ಒಂದು ಕೋಟಿ ಸದಸ್ಯತ್ವ ಮಾಡುತ್ತೇನೆ ಅಂದಿದ್ದೆ. ಆ ಪ್ರಯತ್ನ ನಡೆಯುತ್ತಿದೆ. ವಿದೇಶಗಳಲ್ಲೂ ಕಸಾಪ ಘಟಕ ಆರಂಭಿಸಬೇಕು ಅನ್ನುವ ಮಾತು ಹೇಳಿದ್ದೆ. 

ಈ ಮೂಲಕ ವಿಶ್ವದಲ್ಲಿಯ ಕನ್ನಡಿಗರು ಒಂದಾಗಬೇಕು ಅನ್ನುವ ನಿರೀಕ್ಷೆ ನನ್ನದು. ಇನ್ನೂ ಅನೇಕ ಹೊಸ ಹೊಸ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗುತ್ತಿದ್ದೇನೆ. ಸಮ್ಮೇಳನದಲ್ಲಿ ಅನೇಕ ನಿರ್ಣಯಗಳಾಗುತ್ತವೆ. ಅದರ ಅನುಷ್ಠಾನ ಆಗಲ್ಲ ಅನ್ನುವ ಮಾತಿದೆ. ಆ ನಿರ್ಣಯಗಳ ಅನುಷ್ಠಾನಕ್ಕೆ ಪ್ರಯತ್ನ ಮಾಡುತ್ತೇನೆ. ಕನ್ನಡ ಶಾಲೆಗಳು ಯಾವುದೇ ಕಾರಣಕ್ಕೆ ಮುಚ್ಚಬಾರದು. ಕನ್ನಡಿಗರಿಗೆ ಉದ್ಯೋಗಾವಕಾಶ ಸಿಗಬೇಕು ಎನ್ನುವುದು. ಈ ಎರಡು ಅಂಶಗಳು ವಿಧಾನ ಸಭೆಯಲ್ಲಿ ಮಂಡನೆ ಮಾಡಿರುವ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕದಲ್ಲಿ ಇವೆ. ಶಿಕ್ಷಣದಲ್ಲಿ ಕನ್ನಡ, ಉದ್ಯೋಗದಲ್ಲಿ ಕನ್ನಡ, ವ್ಯಾಪಾರದಲ್ಲಿ ಕನ್ನಡ, ಬೋರ್ಡ್‌ಗಳಲ್ಲಿ ಕನ್ನಡ, ನ್ಯಾಯಾಂಗದಲ್ಲಿ ಕನ್ನಡ, ಯಾರು ಈ ನಿಯಮಗಳನ್ನು ಪಾಲಿಸುವುದಿಲ್ಲೋ ಅವರಿಗೆ ಶಿಕ್ಷೆ ವಿಧಿಸುವ ಅಂಶವೂ ಈ ವಿಧೇಯಕದಲ್ಲಿದೆ. ಇದು ಅನುಷ್ಠಾನ ಆಗಬೇಕು, ಕಾನೂನು ಆಗಬೇಕು.ಇದನ್ನು ಅನುಷ್ಠಾನ ಮಾಡದಿದ್ದರೆ ಕಸಾಪ ಇನ್ನು ಐದು-ಹತ್ತು ವರ್ಷಗಳಲ್ಲಿ ಮುಚ್ಚಿ ಹೋಗುತ್ತದೆ. ಕನ್ನಡ ಪತ್ರಿಕೆ, ವಾಹಿನಿಗಳೆಲ್ಲ ಮುಚ್ಚಿ ಹೋಗಬಹುದು. ನಾನು ಒಂದು ವರ್ಷದಲ್ಲಿ ಮಾಡಿರುವ ಸಾಧನೆಗಳನ್ನು ಮಾಡಲು ಬೇರೆಯವರಿಗೆ 10 ವರ್ಷ ಬೇಕಾಗಬಹುದು. ದಾಖಲೆ ಅಂತರದಲ್ಲಿ ನಿಬಂಧನೆಯ ತಿದ್ದುಪಡಿ ಮಾಡಿದ್ದೇನೆ.

3. ಪರ್ಯಾಯ ಸಮ್ಮೇಳನ ಮಾತು ಬಂದಿದೆ..!
ಇದೆಲ್ಲ ನನಗೆ ಗೊತ್ತಾಗಿದ್ದು ಸಾಮಾಜಿಕ ಜಾಲತಾಣದ ಮೂಲಕ. ಅದರಲ್ಲಿ ‘ಶಹಭಾಷ್ ಮಹೇಶ್ ಜೋಷಿ, ಹಾವೇರಿ ಸಮ್ಮೇಳದಲ್ಲಿ ೮೩ ಸಾಧಕರಿಗೆ ಸನ್ಮಾನ, ಒಬ್ಬ ಮುಸ್ಲಿಂ ಸಾಧಕನೂ ಇಲ್ಲ’ ಅನ್ನೋದಿತ್ತು. ಅವರಿಗೆ ನನ್ನ ನೇರ ಪ್ರಶ್ನೆ - ೮೩ ಸಂಖ್ಯೆ ನಿಮಗೆ ಎಲ್ಲಿಂದ ಸಿಕ್ಕಿತು? ಅಧ್ಯಯನವನ್ನೇ ಮಾಡಿಲ್ಲ ನೀವು. 86 ಸಾಧಕರಿಗೆ ನಾವಿಲ್ಲಿ ಸನ್ಮಾನ ಮಾಡುತ್ತಿದ್ದೇವೆ. ಇದು ೮೬ನೇ ಸಮ್ಮೇಳನ. ರಾಜಾ ಸಾಬ್ ನಡಾಫ್ ಅಂತ ಪತ್ರಕರ್ತರು, ಖಾಜಾ ಸಾಬ್ ಅಮೀರ್ ಸಾಬ್ ದೊಡ್ಡ ಮನಿ ಅನ್ನೋ ಇನ್ನೊಬ್ಬ ಸಾಧಕರ ಹೆಸರು ಸನ್ಮಾನಿತರ ಪಟ್ಟಿಯಲ್ಲಿದೆ. ಇದು ಬೇಜವಾಬ್ದಾರಿಯ, ಮತೀಯ ಕಲಹ ಹುಟ್ಟು ಹಾಕುವ ಕುಚೇಷ್ಠೆ ಮತ್ತು ಸ್ಕೀಮ್ ಹಾಕಿಕೊಂಡು ಮಾಡಿದ್ದು. 11 ಜನ ಮುಸ್ಲಿಂ ಸಮುದಾಯದವರು ಈ ಬಾರಿ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಕಲ್ಬುರ್ಗಿಯಲ್ಲಿ ಅವಕಾಶ ಕೊಟ್ಟಿದ್ದು 10 ಮುಸ್ಲಿಮ್ ಗಣ್ಯರಿಗೆ. ರಾಯಚೂರು, ಶ್ರವಣ ಬೆಳಗೊಳದಲ್ಲಿ ಕೇವಲ 5 ಜನ ಮುಸ್ಲಿಮರಿಗೆ ಅವಕಾಶ ಸಿಕ್ಕಿದ್ದು. ನಾವು ಅತೀ ಹೆಚ್ಚು ಜನರಿಗೆ ಅವಕಾಶ ನೀಡಿದ್ದೇವೆ.

4. ಇವರಿಗೆ ಪ್ರಧಾನ ವೇದಿಕೆಯಲ್ಲಿ ಅವಕಾಶ ಸಿಕ್ಕಿಲ್ಲ ಅನ್ನುವ ಮಾತಿಗೆ ನಿಮ್ಮ ಪ್ರತಿಕ್ರಿಯೆ?
ಮೂರೂ ವೇದಿಕೆಗಳೂ ಸಮಾನ ವೇದಿಕೆಗಳೇ. ಪ್ರಧಾನ ವೇದಿಕೆಯ ಚರ್ಚೆಗೆ ಮಾತ್ರ ಬೆಲೆಯೇ ಹಾಗಾದರೆ? ಎರಡು, ಮೂರನೇ ವೇದಿಕೆಯ ಚರ್ಚೆಗಳಿಗೆ ಬೆಲೆಯೇ ಇಲ್ಲವೇ? ಅಲ್ಲೂ ಬಹಳ ಮುಖ್ಯ ಚರ್ಚೆ, ಗೋಷ್ಠಿಗಳು ನಡೆಯುತ್ತಿವೆಯಲ್ಲಾ? ಜನ ಬರುವ ಸಂಖ್ಯೆಯನ್ನು ನೋಡಿ ನಾವು ಗೋಷ್ಠಿಗಳನ್ನು ಬೇರೆ ಬೇರೆ ವೇದಿಕೆಗೆ ಹಂಚುತ್ತೇವೆ. ಈ ಥರ ಆರೋಪ ಮಾಡುವವರು ಮೊಸರಲ್ಲಿ ಕಲ್ಲು ಹುಡುಕುವ ಮನಸ್ಥಿತಿಯವರು. ಅವರಿಗೆ ಎಲ್ಲ ಕಡೆ ದೋಷಗಳೇ ಕಾಣುತ್ತವೆ.

5. ಹಾವೇರಿಯ ಸಾಹಿತ್ಯದ ವಾತಾವರಣದ ಬಗ್ಗೆ ಹೇಳೋದಾದರೆ?
ಗಳಗನಾಥ, ಸಕ್ರಿ ಬಾಳಾಚಾರ್, ಗೋಕಾಕ್‌ರಿಂದ ಶುರುವಾದ ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣ ಇಂದೂ ಇದೆ. ಮುಂಚೆಯಿಂದ ಹಾವೇರಿಗೆ ಸಮ್ಮೇಳನ ಸಿಗಬಾರದು ಅಂತ ಪಟ್ಟಭದ್ರಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಈಗ ಪರ್ಯಾಯ ಸಮ್ಮೇಳನ ಮಾಡ್ತೀವಿ ಅನ್ನೋರೂ ಹಾವೇರಿಯ ವಿರೋಧಿಗಳು. ಸಮ್ಮೇಳನ ಕೆಡಿಸುವ ಕುತಂತ್ರಿಗಳು ಅಂತ ಅಲ್ಲಿನ ಜನ  ಮಾತಾಡುತ್ತಿದ್ದಾರೆ.

6. ಈ ಬಾರಿ ಗೋಷ್ಠಿಗಳಲ್ಲಿ ಬಹಳ ಮಂದಿ ಹೊಸಬರಿದ್ದಾರೆ. ಆಯ್ಕೆಯಲ್ಲಿ ನೀವು ಬಳಸಿದ ಮಾನದಂಡಗಳು?
ದೂರದರ್ಶನದಲ್ಲಿರುವಾಗಿಂದಲೇ ನಾನು ಹೊಸಬರಿಗೆ ಮಣೆ ಹಾಕುತ್ತಾ ಬಂದವನು. ನಾನು ಕನ್ನಡ ಶಾಲೆ ಇದ್ದ ಹಾಗೆ. ೩೫ ಪರ್ಸೆಂಟ್ ತೆಗೆದವರನ್ನು ಶಾಲೆಗೆ ಸೇರಿಸಿಕೊಂಡು ಅವರು ೬೦ ಪರ್ಸೆಂಟ್ ಮಾರ್ಕ್ಸ್ ತೆಗೆಯೋ ಹಾಗೆ ಮಾಡಿದ ಸಾಧನೆ ನನ್ನದು.  ಕಮಿಟಿಗಳ ಮೂಲಕ ಕೆಲವೊಂದು ಮಾನದಂಡಗಳನ್ನಿಟ್ಟು ಗೋಷ್ಠಿಗೆ ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ನಡೆದಿದೆ. ಹೊಸಬರಿಗೆ ಅವಕಾಶ ಕೊಟ್ಟರಷ್ಟೇ ಕನ್ನಡದ ಬೆಳವಣಿಗೆ.

7. ವೈ ಕೆ ಮುದ್ದುಕೃಷ್ಣ ಅವರು ಸುಗಮ ಸಂಗೀತಕ್ಕೆ ಅವಕಾಶ ಇಲ್ಲ ಅನ್ನುತ್ತಿದ್ದಾರೆ?
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅದಕ್ಕೆ ಅವಕಾಶ ಇದೆಯಲ್ಲಾ.. ಹಾಡೋದು ಬೇಡ ಅಂದಿಲ್ಲ, ಕವಿಗೋಷ್ಠಿಯಲ್ಲಿ ಹಾಡೋದು ಬೇಡ ಅಂದಿದ್ದಷ್ಟೇ. ಅನುಭವದ ಹಿನ್ನೆಲೆಯಲ್ಲಿ ಹೇಳೋದಾದ್ರೆ ಒಂದು ಸಾಲನ್ನು ಐದು ಸಲ ರಿಪೀಟ್ ಮಾಡ್ತಾರೆ. ಒಬ್ಬ ಹಾರ್ಮೋನಿಯಂ ತಂದು ಶ್ರುತಿ ಸೇರಿಸೋದಕ್ಕೆ ಏಳು ನಿಮಿಷ ತಗೊಂಡಿದ್ದಾನೆ. ಅಂಥವರಿಗೆ ಏನು ಹೇಳೋದು? ಕವಿಗೋಷ್ಠಿಯಲ್ಲಿ ಕವಿತೆ ವಾಚನ ಮಾಡಬೇಕು.

Haveri: ಧ್ವಜಾರೋಹಣದ ಮೂಲಕ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

8. ಕವಿಗೋಷ್ಠಿಯ ಅಧ್ಯಕ್ಷತೆಯಿಂದ ಒಬ್ಬರು ಹಿಂದೆ ಹೋದ್ರು?
ಹಿಂದೆ ಹೋಗೋದು, ಮುಂದೆ ಬರೋದು ಎಲ್ಲ ಸಹಜ ಪ್ರಕ್ರಿಯೆ. ಅಕ್ಕ ಸತ್ರೆ ಅಮವಾಸ್ಯೆ ನಿಲ್ಲಲ್ಲ, ಮತ್ತೊಬ್ರು ಬರ್ತಾರೆ ಅಷ್ಟೇ.

9. ಸಮ್ಮೇಳನ ಕೆಡಿಸುವ ಒಂದು ಸಂಗತಿ ಅಂದರೆ ಊಟದ ಅವ್ಯವಸ್ಥೆ..
ಈ ಬಾರಿ ಹಾಗಾಗಲ್ಲ. ಊಟಕ್ಕೆ 200 ಕೌಂಟರ್‌ಗಳಿವೆ. ಜರ್ಮನ್ ಟೆಂಟ್ ಹಾಕಿದ್ದೀವಿ. ಎಲ್ಲೆಲ್ಲೂ ಸ್ವಚ್ಛತೆ ಇರುತ್ತೆ. ಪ್ಲಾಸ್ಟಿಕ್ ಮುಕ್ತವಾಗಿರುತ್ತದೆ.  150 ಕೌಂಟರ್‌ಗಳು ಸಾಮಾನ್ಯರಿಗಿದೆ. 30 ಮಹಿಳೆಯರಿಗಿದೆ. 20 ವಿಶಿಷ್ಟ ಚೇತನ ವ್ಯಕ್ತಿಗಳಿಗೆ ಮತ್ತು ಹಿರಿಯರಿಗೆ.

10. ಹಾವೇರಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಇಲ್ಲ ಅನ್ನೋದಕ್ಕೆ?
ಸುಮಾರು 10,000ಜನ ಬರ್ತಿದ್ದಾರೆ. ಅವರಿಗೆ ಕಾಲೇಜು, ಶಾಲೆ, ಕಲ್ಯಾಣ ಮಂಟಪಗಳು, ಸುತ್ತಲಿನ ತಾಲ್ಲೂಕಿನಲ್ಲಿ ವ್ಯವಸ್ಥೆ ಮಾಡಿದ್ದೇವೆ. ಸವಾಲುಗಳನ್ನು ಅವಕಾಶಗಳನ್ನಾಗಿ ಮಾರ್ಪಡಿಸಿ ಈ ಸಮ್ಮೇಳನ ಮಾಡುತ್ತಿದ್ದೇವೆ.

Follow Us:
Download App:
  • android
  • ios