ಕಲಬುರಗಿಯಲ್ಲಿ ಮುಸ್ಲಿಂ ಕುಟುಂಬವೊಂದು ಬಕ್ರೀದ್ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದೆ. ತಮ್ಮ ಹಿರಿಯರ ಸ್ಮರಣಾರ್ಥ ಗೋಶಾಲೆಗೆ 25 ಸಾವಿರ ಮೌಲ್ಯದ ಮೇವು ದಾನ ಮಾಡಿ, ಪ್ರಾಣಿ ದಯೆ ಮತ್ತು ಸೌಹಾರ್ದತೆಯ ಸಂದೇಶ ಸಾರಿದ್ದಾರೆ.

ಕಲಬುರಗಿ: ದೇಶಾದ್ಯಂತ ಬಕ್ರೀದ್ ಹಬ್ಬವನ್ನು ಸಂಬ್ರಮದಿಂದ ಆಚರಿಸುತ್ತಿದ್ದು ಮುಸ್ಲಿಂ ಸಮುದಾಯದ ಕುಟುಂಬವೊಂದು ಗೋಶಾಲೆಗೆ 25 ಸಾವಿರ ಮೌಲ್ಯದ ಮೇವು ದೇಣಿಗೆ ನೀಡುವ ಮೂಲಕ ಬಕ್ರೀದ್ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ಮುಸ್ಲಿಂ ಸಮುದಾಯದ ಮುಖಂಡರಾದ ಸೈಯದ ಜಾಫರ್ ಉಲ್ ಹಸನ್ ಅವರು ತಮ್ಮ ತಂದೆ ಸೈಯದ್ ಹಫಿಸ್ ಉಲ್ ಹಸನ್, ತಾಯಿ ಸೈದಾ ಕೌಸರ್ ಆಫೀಸ್ ಹಾಗೂ ಸಹೋದರಿ ಸೆಮಿಸ್ ಬೇಗಂ ಅವರ ಪವಿತ್ರ ಸ್ಮರಣಾರ್ಥ ಗೋಶಾಲೆಗೆ ಭೇಟಿ ನೀಡಿ ಗೊವುಗಳ ಹಸಿವು ನೀಗಿಸಲು ಒಂದು ಟ್ರ್ಯಾಕ್ಟರ್‌ ಕಣಕಿಯನ್ನು ದೇಣಿಗೆ ನೀಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಂಬಳೇಶ್ವರ ಸೊಮಶೇಖರ ಶಿವಾಚಾರ್ಯರ ಹೇಳಿಕೆ

ಕಂಬಳೇಶ್ವರ ಸೊಮಶೇಖರ ಶಿವಾಚಾರ್ಯರು, ಹಬ್ಬ ಹರಿದಿನಗಳ ಹೆಸರಿನಲ್ಲಿ ಗೋವುಗಳನ್ನು ಕಡಿಯುವುದನ್ನು ಹಿಂಸಿಸುವುದನ್ನು ನಾವು ಹೆಚ್ಚಾಗಿ ನೋಡುತ್ತಿದ್ದೇವೆ. ಆದರೆ, ಇಂದಿನ ಬಕ್ರೀದ್ ಹಬ್ಬದ ಪವಿತ್ರ ದಿನದಂದು ಮುಸ್ಲಿಂ ಸಮುದಾಯದ ಸೈಯದ ಜಫರ್ ಅವರ ಕುಟುಂಬವು ತಮ್ಮ ಹಿರಿಯರ ಸ್ಮರಣಾರ್ಥ ಗೋಶಾಲೆಗೆ ಬಂದು ಗೋವುಗಳ ರಕ್ಷಣೆಗೆ ಧಾವಿಸಿರುವದು ಅವುಗಳಿಗೆ ಮೇವು ನೀಡಿರುವದು ನಿಜಕ್ಕೂ ಶ್ಲಾಘನೀಯ.

ಧರ್ಮ ಯಾವುದಾದರೂ ಮಾನವೀಯತೆ ಮತ್ತು ಪ್ರಾಣಿದಯೇ ಎಲ್ಲಕ್ಕಿಂತ ದೊಡ್ಡದು, ಸಮಾಜದಲ್ಲಿ ಇಂತಹ ಸೌಹಾರ್ದಯುತ ಚಿಂತನೆಗಳು ಹೆಚ್ಚಾಗಬೇಕು. ಗೋವುಗಳ ಕಡಿಯುವ ಕೈಗಳ ಮಧ್ಯ ಗೋವುಗಳನ್ನು ಕಾಯುವ ಮತ್ತು ಅವುಗಳ ಹಸಿವು ನೀಗಿಸುವ ಉದಾತ್ತ ಮನಸ್ಸುಗಳನ್ನು ನಾವಿಂದು ನೊಡುತ್ತಿರುವದು ಸಂತಸ ತಂದಿದೆ. ಈ ಕುಟುಂಬದ ಸತ್ಕಾರ್ಯ ಚಿತ್ತಾಪುರ ತಾಲೂಕಷ್ಟೆ ಅಲ್ಲದೇ ಇಡೀ ಸಮಾಜಕ್ಕೆ ಪ್ರೇರಣೆಯಾಗಲಿ ಎಂದು ಹರಸಿದರು.

ಈ ಸಂದರ್ಭದಲ್ಲಿ ಗೊಶಾಲೆಯ ಅಧ್ಯಕ್ಷರಾದ ರಮೇಶ ಬೊಮ್ಮನಳ್ಳಿ, ಮುಖಂಡರಾದ ಧನರಾಜ ದೇಶಪಾಂಡೆ, ಮಲ್ಲಿಕಾರ್ಜುನ ರೆಡ್ಡಿ ಇಜಾರ್, ಲಕ್ಷ್ಮೀ ಮಟ್ಟಿ, ನಟರಾಜ ಶಿಲ್ಪಿ, ಮಂಜುನಾಥ ಶಾಸ್ತ್ರೀ, ಗೋಪಾಲಕರಾದ ಚನ್ನಬಸಪ್ಪ, ಆಕಾಶ ಇದ್ದರು.