ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಹೊಸ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣವಾದರೂ, ಮಳೆಯಿಂದಾಗಿ ತೀವ್ರ ಜಲಾವೃತ ಮತ್ತು ಸಂಚಾರ ದಟ್ಟಣೆ ಮುಂದುವರೆದಿದೆ. ರಾಜಕಾಲುವೆಗಳಲ್ಲಿನ ಹೂಳು, ಕಸ ಮತ್ತು ಅಪೂರ್ಣ ಕಾಮಗಾರಿಗಳು ಈ ಸಮಸ್ಯೆಗೆ ಕಾರಣವಾಗಿದೆ.

ಬೆಂಗಳೂರು (ಮೇ.30): ಸಿಲಿಕಾನ್ ಸಿಟಿಯ ವಾಹನ ಸವಾರರು ಹಾಗೂ ಪಾದಚಾರಿಗಳ ಪಾಲಿಗೆ, ಮಳೆ ಬಂತೆಂದರೆ ಸಾಕು ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತೊಮ್ಮೆ ಭೀಕರ ಸಂಚಾರ ದಟ್ಟಣೆ ದುರ್ಗಮ ಸ್ಥಳವಾಗಿ ಮಾರ್ಪಟ್ಟಿದೆ. ನಗರದ ಅತ್ಯಂತ ಬಿಡುವಿಲ್ಲದ ಐಟಿ ಕಾರಿಡಾರ್‌ನಲ್ಲಿ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಅತ್ಯಂತ ಅದ್ಧೂರಿಯಾಗಿ ಉದ್ಘಾಟನೆಗೊಂಡಿದ್ದ ‘ಡಬಲ್ ಡೆಕ್ಕರ್ ಫ್ಲೈಓವರ್’ (Double-decker Flyover) ವಾಹನ ಸವಾರರ ಸಂಕಷ್ಟವನ್ನು ದೂರ ಮಾಡುತ್ತದೆ ಎಂದು ನಂಬಲಾಗಿತ್ತು. ಆದರೆ, ಪ್ರತಿ ಬಾರಿ ಮಳೆ ಸುರಿದಾಗಲೂ ಇಲ್ಲಿ ಸೃಷ್ಟಿಯಾಗುತ್ತಿರುವ ತೀವ್ರ ಜಲಾವೃತ ಬಿಕ್ಕಟ್ಟು ಸವಾರರು ಮತ್ತೊಮ್ಮೆ ಜಂಕ್ಷನ್‌ಗೆ ಶಾಪ ಹಾಕುವಂತೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣದ ಸಮೀಪದ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ಮಾರ್ಪಟ್ಟಿತ್ತು. ಇದರಿಂದಾಗಿ ಪೀಕ್ ಅವರ್ (Peak-hour) ಟ್ರಾಫಿಕ್‌ನಲ್ಲಿ ವಾಹನಗಳು ಮಂಡಿಯುದ್ದ ನೀರಲ್ಲೇ ಹರಿದಾಡುವಂತಾಯಿತು. ಗುರುವಾರ ಸಂಜೆ ಕೂಡ ಇದೇ ರೀತಿಯ ದೃಶ್ಯ ಕಂಡುಬಂದಿದ್ದು, ಗಂಟೆಗಟ್ಟಲೆ ಬಂಪರ್-ಟು-ಬಂಪರ್ ಟ್ರಾಫಿಕ್ ಜ್ಯಾಮ್‌ನಲ್ಲಿ ಸಿಲುಕಿ ಸವಾರರು ತೀವ್ರ ಹತಾಶೆ ಅನುಭವಿಸಿದರು.

ಬೆಂಗಳೂರಿಗರಿಗೆ ಈ ಕಥೆ ಹೊಸದೇನಲ್ಲ, ಪ್ರತಿ ವರ್ಷವೂ ಇದು ಸಾಮಾನ್ಯ ಎನ್ನುವಂತಾಗಿದೆ. ಕಳೆದ ವರ್ಷದ ಮೇ ತಿಂಗಳಿನಲ್ಲೂ ಮುಂಗಾರು ಪೂರ್ವ ಮಳೆಗೆ ಈ ಪ್ರಮುಖ ಜಂಕ್ಷನ್ ಮತ್ತು ಸುತ್ತಮುತ್ತಲಿನ ರಸ್ತೆಗಳು ಜಲಾವೃತಗೊಂಡಿದ್ದವು. ಆಗ ಮಳೆನೀರು ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣದ ಒಳಗೂ ನುಗ್ಗಿತ್ತು. ಆ ಸಮಯದಲ್ಲಿ ಬಿಬಿಎಂಪಿ (ಪ್ರಸ್ತುತ ಜಿಬಿಎ - GBA) ಅಧಿಕಾರಿಗಳು ನಮ್ಮ ಮೆಟ್ರೋ ಕಾಮಗಾರಿ ಮತ್ತು ರಾಜಕಾಲುವೆಗಳ ಬ್ಲಾಕ್ ಆಗಿರುವುದೇ ಮಳೆನೀರಿನ ನೈಸರ್ಗಿಕ ಹರಿವಿಗೆ ಅಡ್ಡಿಯಾಗಿದೆ ಎಂದು ದೂಷಿಸಿದ್ದರು. ಮುಂದಿನ ಮುಂಗಾರು ಬರುವಷ್ಟರಲ್ಲಿ ಹೂಳು ತೆಗೆದು, ಪ್ರವಾಹ ನಿಯಂತ್ರಣ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ವರ್ಷ ಕಳೆದರೂ ಪರಿಸ್ಥಿತಿ ಕಿಂಚಿತ್ತೂ ಬದಲಾಗಿಲ್ಲ ಎಂದು ಸವಾರರು ಆಕ್ರೋಶ ಹೊರಹಾಕಿದ್ದಾರೆ.

ಸಮಸ್ಯೆ ಏನು? ಪರಿಹಾರವೇನು?

ಅಧಿಕಾರಿಗಳ ಪ್ರಕಾರ, ಮಡಿವಾಳ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಕೆರೆಗಳಿಂದ ಹರಿದು ಬರುವ ಮಳೆನೀರು ಸಿಲ್ಕ್ ಬೋರ್ಡ್ ಜಂಕ್ಷನ್ ತಲುಪುತ್ತದೆ. ಪ್ರಸ್ತುತ ಇರುವ ರಾಜಕಾಲುವೆ (Stormwater Drain) ಜಾಲಕ್ಕೆ ಇಷ್ಟು ಭಾರಿ ಪ್ರಮಾಣದ ನೀರನ್ನು ತಡೆದುಕೊಳ್ಳುವ ಸಾಮರ್ಥ್ಯವಿಲ್ಲ. ಇದಕ್ಕೆ ಪರಿಹಾರವಾಗಿ, ಜಿಬಿಎ (GBA) ಸ್ಟೀಲ್ ಗಿರ್ಡರ್‌ಗಳನ್ನು ಬಳಸಿ ಕಾಲುವೆಯ ಅಗಲವನ್ನು 1.5 ಮೀಟರ್‌ನಿಂದ 3.5 ಮೀಟರ್‌ಗೆ ವಿಸ್ತರಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಏಪ್ರಿಲ್‌ನಲ್ಲಿ ಪ್ರಾರಂಭವಾಗಿರುವ ಈ ಯೋಜನೆಯನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿಗಳು ಹೊಂದಿದ್ದಾರೆ.

ಜಿಬಿಎ ಯೋಜನಾ ಜಾರಿಯ ಮುಖ್ಯ ಎಂಜಿನಿಯರ್ ಎಸ್.ವಿ. ರಾಜೇಶ್, 'ರಾಜಕಾಲುವೆಗಳಲ್ಲಿ ಟನ್‌ಗಟ್ಟಲೆ ಕಸ ಬಂದು ಸಿಲುಕಿಕೊಳ್ಳುತ್ತಿರುವುದು ಪ್ರವಾಹದ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಸಿಲ್ಕ್ ಬೋರ್ಡ್ ಸಮೀಪದ ಡ್ರೈನ್‌ಗಳಿಂದ ಪ್ಲಾಸ್ಟಿಕ್ ಬಾಟಲಿಗಳು, ಬಟ್ಟೆಗಳು ಮತ್ತು ಘನತ್ಯಾಜ್ಯ ಸೇರಿದಂತೆ ಬರೋಬ್ಬರಿ 40 ಟನ್‌ಗಿಂತಲೂ ಹೆಚ್ಚು ಕಸವನ್ನು ಹೊರತೆಗೆಯಲಾಗಿದೆ..' ಎಂದಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರವಾಹ ತಡೆಯಲು ನೀರನ್ನು ಎಚ್‌ಎಸ್‌ಆರ್ ಲೇಔಟ್ ಕಡೆಗೆ ತಿರುಗಿಸಲು ಎಲ್-ಆಕಾರದ (L-shaped) ಕಲ್ವರ್ಟ್ ನಿರ್ಮಿಸಲಾಗುತ್ತಿದೆ. ಆದರೆ, ಈ ನಡೆಯುತ್ತಿರುವ ಕಾಮಗಾರಿಯಿಂದಾಗಿ ರಸ್ತೆ ಮುಚ್ಚಿರುವುದು ಮತ್ತು ಟ್ರಾಫಿಕ್ ಡೈವರ್ಷನ್‌ಗಳು ಸವಾರರ ಕೋಪವನ್ನು ಮತ್ತಷ್ಟು ಹೆಚ್ಚಿಸಿವೆ.

ಕಾಮಗಾರಿಗಳ ಎಡವಟ್ಟು: ನೈಸರ್ಗಿಕ ಹರಿವಿಗೆ ಬಿದ್ದ ಬ್ರೇಕ್

ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಅಧಿಕಾರಿಗಳ ಪ್ರಕಾರ, ಕಳೆದ ಹಲವು ವರ್ಷಗಳಿಂದ ಇಲ್ಲಿ ನಡೆದಿರುವ ಸಾಲು ಸಾಲು ಮೂಲಸೌಕರ್ಯ ಯೋಜನೆಗಳು ಸಿಲ್ಕ್ ಬೋರ್ಡ್ ಸುತ್ತಮುತ್ತಲಿನ ನೈಸರ್ಗಿಕ ಜಲಾನಯನ ಮಾದರಿಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ. ಈ ಹಿಂದೆ ಎನ್‌ಎಚ್‌ಎಐ (NHAI) ಫ್ಲೈಓವರ್ ನಿರ್ಮಾಣವು ನೀರಿನ ಹರಿವನ್ನು ಬದಲಾಯಿಸಿತು. ಅದರ ಬೆನ್ನಲ್ಲೇ ಮೆಟ್ರೋ ಕಾಮಗಾರಿಗಳು ಮತ್ತು ಈಗ ಡಬಲ್ ಡೆಕ್ಕರ್ ಫ್ಲೈಓವರ್‌ಗಾಗಿ ನಿರ್ಮಿಸಲಾದ ಬೃಹತ್ ಪಿಲ್ಲರ್‌ಗಳು ಜಂಕ್ಷನ್ ಸುತ್ತಲಿನ ಚರಂಡಿ ಮಾರ್ಗಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿವೆ ಎಂದಿದ್ದಾರೆ.

ಜೀವ ಕೈಯಲ್ಲಿ ಹಿಡಿದು ನಡೆಯುವ ಪಾದಚಾರಿಗಳು

ರಾಜಕಾಲುವೆ ಕಾಮಗಾರಿಗಳು ಇಲ್ಲಿನ ಯೆಲ್ಲೋ ಲೈನ್ ಮೆಟ್ರೋ ನಿಲ್ದಾಣ ಮತ್ತು ಬಿಎಂಟಿಸಿ (BMTC) ಬಸ್ ನಿಲ್ದಾಣವನ್ನು ಬಳಸುವ ಸಾವಿರಾರು ಪಾದಚಾರಿಗಳಿಗೆ ಸಂಚಕಾರವಾಗಿ ಮಾರ್ಪಟ್ಟಿದೆ. ಪಾದಚಾರಿಗಳಿಗೆ ಪ್ರತ್ಯೇಕ ಮಾರ್ಗವಿಲ್ಲದ ಕಾರಣ, ಜನರು ಕೆಸರು ಮತ್ತು ಕಸದಿಂದ ತುಂಬಿದ ರಸ್ತೆಯಲ್ಲೇ ವಾಹನಗಳ ನಡುವೆ ಜೀವ ಕೈಯಲ್ಲಿ ಹಿಡಿದು ನಡೆಯಬೇಕಾಗಿದೆ.

'ಮೆಟ್ರೋ ನಿಲ್ದಾಣದಲ್ಲಿ ಇಳಿದ ನಂತರ ಬಿಎಂಟಿಸಿ ಬಸ್ ನಿಲ್ದಾಣ ತಲುಪಲು ನಾನು ಸುಮಾರು 300 ಮೀಟರ್ ನಡೆಯಬೇಕು. ಈ ಇಡೀ ರಸ್ತೆ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಪಾದಚಾರಿಗಳಿಗೆ ನಡೆಯಲು ಜಾಗವೇ ಇಲ್ಲ. ಹೂಳು ತೆಗೆದ ನಂತರ ತ್ಯಾಜ್ಯವನ್ನು ರಸ್ತೆ ಬದಿಯಲ್ಲೇ ಸುರಿಯಲಾಗಿದೆ, ಮಳೆ ಬಂದಾಗ ಅದು ರಸ್ತೆಯುದ್ದಕ್ಕೂ ಹರಡುತ್ತದೆ' ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ. 'ಜನರಲ್ಲಿ ನಾಗರಿಕ ಪ್ರಜ್ಞೆಯ ಕೊರತೆ ಮತ್ತು ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯವೇ ಸಿಲ್ಕ್ ಬೋರ್ಡ್ ಜಂಕ್ಷನ್ ಇಂದಿನ ಈ ದುಸ್ಥಿತಿಗೆ ತಲುಪಲು ಕಾರಣ..' ಎಂದು ಟೆಕ್ಕಿಯೊಬ್ಬರು ದೂಷಿಸಿದ್ದಾರೆ.

View post on Instagram