ಅಯ್ಯಯ್ಯೋ ಪೊಲೀಸರೇ ನಮ್ಮ ಮನೆಯ ಬಳಿ ಯಾವುದೇ ಹೆಣ ಬಿದ್ದಿರಬೇಕು. ಕೊಳೆತು ಗಬ್ಬು ವಾಸನೆ ಬರ್ತಿದೆ ಒಮ್ಮೆ ಬಂದುಹೋಗಿ ಎಂದು ಮಹಿಳೆ ಕರೆ ಮಾಡಿದ್ದಾರೆ. ಪೊಲೀಸರು ಹೋಗಿ ನೋಡಿದರೆ ಅಲ್ಲಿ ಸತ್ತು ಬಿದ್ದಿದ್ದು ಹೆಗ್ಗಣ ಎನ್ನುವುದು ಗೊತ್ತಾಗಿದೆ. ಮುಂದೇನಾಯ್ತು ನೀವೇ ನೋಡಿ.

ಕಲಬುರಗಿ (ಮೇ 24): ಸಮಾಜದಲ್ಲಿ ಯಾವುದೇ ಅನಾಹುತ ನಡೆದು ಹೆಣ ಬಿದ್ದರೂ ಪೊಲೀಸರೇ ಬರಬೇಕು.. ಕೊನೆಗೆ ಮನೆ ಮುಂದೆ ಹೆಗ್ಗಣ ಸತ್ತು ಬಿದ್ದರೂ ಆ ಹೆಗ್ಗಣ ಎತ್ತಲು ಪೊಲೀಸರೇ ಬರಬೇಕು! - ಇದು ಸದ್ಯ ಕಲಬುರಗಿ ನಗರದಲ್ಲಿ ಸಾರ್ವಜನಿಕರು ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ, ಪೊಲೀಸರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿರುವ ಪರಿ. ಮಹಾನಗರ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ ಮಾಡಬೇಕಿದ್ದ ಕೆಲಸವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ ಪೊಲೀಸ್ ಸಿಬ್ಬಂದಿಯ ಮಾನವೀಯ ನಡೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

Add Asianetnews Kannada as a Preferred SourcegooglePreferred

ಮೂರು ದಿನಗಳಿಂದ ನಾರುತ್ತಿದ್ದ ಹೆಗ್ಗಣ, ಪಾಲಿಕೆಯ ಅತಿಯಾದ ನಿರ್ಲಕ್ಷ್ಯ!

ಕಲಬುರಗಿ ನಗರದ ಖಾದ್ರಿ ಚೌಕ್ ಬಳಿಯ ಮನೆಯೊಂದರ ಮುಂದೆ ಕಳೆದ ಮೂರು ದಿನಗಳ ಹಿಂದೆ ದೊಡ್ಡ ಹೆಗ್ಗಣವೊಂದು ಸತ್ತು ಬಿದ್ದಿತ್ತು. ಬಿಸಿಲಿನ ತಾಪಕ್ಕೆ ಸತ್ತ ಹೆಗ್ಗಣ ಸಂಪೂರ್ಣವಾಗಿ ಕೊಳೆತು ಹೋಗಿ, ಇಡೀ ಬಡಾವಣೆಯ ತುಂಬಾ ಅಸಹನೀಯ ವಾಸನೆ ಹರಡಿತ್ತು. ಇದರಿಂದ ಕಂಗಾಲಾದ ಆ ಮನೆಯ ಮಹಿಳೆ ತಕ್ಷಣವೇ ಕಲಬುರಗಿ ಮಹಾನಗರ ಪಾಲಿಕೆಯ (Mahanagara Palike) ಸಂಬಂಧಪಟ್ಟ ಅಧಿಕಾರಿ ಹಾಗೂ ಸ್ವಚ್ಛತಾ ಸಿಬ್ಬಂದಿಗೆ ಕರೆ ಮಾಡಿ ಸತ್ತ ಜೀವಿ ಇರುವುದನ್ನು ವಿಲೇವಾರಿ ಮಾಡುವಂತೆ ತಿಳಿಸಿದ್ದರು. ಆದರೆ, ಅಧಿಕಾರಿಗಳು ಮಾತ್ರ 'ಇವತ್ತು ಬರ್ತೀವಿ, ನಾಳೆ ಬರ್ತೀವಿ' ಎನ್ನುತ್ತಾ ಮೂರು ದಿನಗಳ ಕಾಲ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ.

ಕೊನೆಗೆ '112' ಸಹಾಯವಾಣಿಗೆ ಕರೆ ಮಾಡಿದ ಮಹಿಳೆ!

ವಾಸನೆ ತಡೆಯಲಾರದೆ ಹಾಗೂ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಬೇಸತ್ತ ಮಹಿಳೆ, ಕೊನೆಗೆ ಯಾವುದೇ ದಾರಿ ಕಾಣದೆ ತಕ್ಷಣವೇ ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆ ಆರ್.ಎಸ್.ಎಸ್ 112 (ERSS 112) ಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಇನ್ಸಿಡೆಂಟ್ ರಿಪೋರ್ಟ್ ಆದ ತಕ್ಷಣವೇ ಕಾರ್ಯಾಚರಣೆಗೆ ಇಳಿಯುವ 112 ಸಿಬ್ಬಂದಿ, ಕರೆಯ ಜಾಡು ಹಿಡಿದು ಖಾದ್ರಿ ಚೌಕ್‌ನ ಸದರಿ ಮಹಿಳೆಯ ಮನೆಗೆ ದೌಡಾಯಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರಿಗೆ ಕಾದಿತ್ತು ದೊಡ್ಡ ಶಾಕ್!

ಯಾವುದೋ ದೊಡ್ಡ ಗಲಾಟೆ ಅಥವಾ ಗಂಭೀರ ಪ್ರಕರಣ ಇರಬಹುದೆಂದು ಸೈರನ್ ಹಾಕಿಕೊಂಡು ಬಂದ ಪೊಲೀಸರಿಗೆ ಸ್ಥಳಕ್ಕೆ ಬಂದಾಗ ಅಸಲಿ ಶಾಕ್ ಕಾದಿತ್ತು. ಅಲ್ಲಿ ಯಾವುದೇ ಅಪರಾಧ ನಡೆದಿರಲಿಲ್ಲ, ಬದಲಾಗಿ ಮೂರು ದಿನಗಳಿಂದ ಸತ್ತು ಕೊಳೆಯುತ್ತಿದ್ದ ಹೆಗ್ಗಣ ಬಿದ್ದಿತ್ತು. ತುರ್ತು ಸೇವೆಗೆ ಬರುವ ಪೊಲೀಸರಿಗೆ ಇದು ತಮ್ಮ ವ್ಯಾಪ್ತಿಯ ಕೆಲಸವಲ್ಲದಿದ್ದರೂ, ಸ್ಥಳದಲ್ಲಿದ್ದ ಮಹಿಳೆಯ ಅಸಹಾಯಕತೆ ಮತ್ತು ಕಷ್ಟವನ್ನು ಕಂಡು ಅವರು ಸುಮ್ಮನೆ ಮರಳಲಿಲ್ಲ.

'ಯಾರೋ ಮಾಡಿದ ತಪ್ಪಿಗೆ ಈ ಜನ ಕಷ್ಟಪಡಬಾರದು, ಹೆಂಗೂ ಸ್ಥಳಕ್ಕೆ ಬಂದಾಯ್ತಲ್ಲ ಮಹಿಳೆಯ ಕಷ್ಟ ನಿವಾರಣೆ ಮಾಡೋಣ' ಎಂದು ಯೋಚಿಸಿದ ಸಿಬ್ಬಂದಿ, ತಾವೇ ಖುದ್ದಾಗಿ ಮುನ್ನಡೆದು ಆ ಸತ್ತ ಹೆಗ್ಗಣವನ್ನು ಎತ್ತಿ, ಸುರಕ್ಷಿತವಾಗಿ ಡಿಸ್ಪ್ಯಾಚ್ (ವಿಲೇವಾರಿ) ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪಾಲಿಕೆಗೆ ಧಿಕ್ಕಾರ, ಪೊಲೀಸರಿಗೆ ಜಯಕಾರ!

ತಮ್ಮದಲ್ಲದ ಕೆಲಸವಾಗಿದ್ದರೂ ಸಾರ್ವಜನಿಕರ ಆರೋಗ್ಯ ಮತ್ತು ನೆಮ್ಮದಿಯ ದೃಷ್ಟಿಯಿಂದ ತಾವೇ ಮುಂದೆ ನಿಂತು ಸತ್ತ ಹೆಗ್ಗಣ ಎತ್ತಿದ ಪೊಲೀಸರ ಈ ಅದ್ಭುತ ಕಾರ್ಯಕ್ಕೆ ಇಡೀ ಕಲಬುರಗಿ ಜನತೆ ಪ್ರಶಂಸೆಗಳ ಸುರಿಮಳೆಗೈದಿದೆ. ಇದೇ ವೇಳೆ, ಸಾರ್ವಜನಿಕರಿಂದ ತೆರಿಗೆ ವಸೂಲಿ ಮಾಡಿ, ಸಣ್ಣದೊಂದು ಸತ್ತ ಪ್ರಾಣಿಯನ್ನು ವಿಲೇವಾರಿ ಮಾಡಲಾಗದ ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಖಾಕಿ ಪಡೆಯ ಈ ಜನಸ್ನೇಹಿ ನಡೆ ಇಲಾಖೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.