ಶೇಷಮೂರ್ತಿ ಅವಧಾನಿ

ಕಲಬುರಗಿ(ಜು.14):  ದೇಶದಲ್ಲೇ ಕೊರೋನಾ ಸೋಂಕಿಗೆ ಮೊದಲ ಸಾವು (ಮಾ.10) ಸಂಭವಿಸಿರುವ ಕಲಬುರಗಿಯಲ್ಲಿ ಹೆಮ್ಮಾರಿ ಉಪಟಳ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಮಾ.10ರಿಂದ ಇಲ್ಲಿಯವರೆಗೂ ಸೋಂಕು- ಸಾವಿನ ಸರಣಿ ಏರುತ್ತಲೇ ಸಾಗಿದ್ದು ನಗರ/ ಜಿಲ್ಲೆಯಲ್ಲಿ ಭೀತಿ ಮಡುಗಟ್ಟಿದೆ.

ಏತನ್ಮಧ್ಯೆ ಕೋವಿಡ್‌ ನಿಗದಿತ ಆಸ್ಪತ್ರೆ ಜಿಮ್ಸ್‌, ಇಎಸ್‌ಐಸಿಯಲ್ಲಿ ಐಸಿಯು, ವೆಂಟಿಲೇಟರ್‌ ಕೊರತೆ ಕಾಡುವ ಭೀತಿಯೂ ತಲೆದೋರಿದೆ. ಕೊರೋನಾ ಗಮನದಲ್ಲಿಟ್ಟುಕೊಂಡೇ ಆರಂಭಿಸಲಾಗಿರುವ ಹೈ ಡಿಪೆಂಡೆನ್ಸಿ ಯೂನಿಟ್‌ನ ಎಲ್ಲಾ ಹಾಸಿಗೆಗಳು ರೋಗಿಗಳಿಂದ ಭರ್ತಿಯಾ    ಗಿದ್ದು ಸಂಕೀರ್ಣ ತೊಂದರೆಯ ಕೊರೋನಾ ರೋಗಿ ಬಂದಲ್ಲಿ ಮುಂದೇನು ಎಂಬ ಚಿಂತೆ ಜಿಲ್ಲಾಡಳಿತವನ್ನು ಕಾಡಲಾರಂಭಿಸಿದೆ.

ವೈದ್ಯರು-ಹಾಸಿಗೆ ಕೊರತೆ:

ಕೋವಿಡ್‌ ರೋಗಿಗಳಿಗೆಂದು ಮೀಸಲಿಟ್ಟಿರುವ ಜಿಮ್ಸ್‌ ಆಸ್ಪತ್ರೆಯಲ್ಲಿರುವ 28 ಹಾಸಿಗೆಗಳು ಭರ್ತಿಯಾಗಿವೆ, ಇಎಸ್‌ಐಸಿಯಲ್ಲಿರುವ 29 ಹಾಸಿಗೆಗಳ ಪೈಕಿ 24 ಭರ್ತಿ. ಬಾಕಿ ಇರೋದು ಕೇವಲ 5 ಹಾಸಿಗೆಗಳು ಮಾತ್ರ. ಜಿಮ್ಸ್‌ನಲ್ಲಿರುವ ಹೈ ಡಿಪೆಂಡನ್ಸಿ ಯೂನಿಟ್‌ನ 47 ಹಾಸಿಗೆಗಳ ಪೈಕಿ 43 ಭರ್ತಿ. ಖಾಲಿ ಇರೋದು 4 ಮಾತ್ರ!! ಇಎಸ್‌ಐಸಿ ಆಸ್ಪತ್ರೆಯನ್ನು ಯಾದಗಿರಿ ಕೋವಿಡ್‌ ರೋಗಿಗಳಿಗೆ ಮೀಸಲಿಡುವಂತೆ ಸರ್ಕಾರ ಸೂಚಿಸಿದ್ದರಿಂದ ಕಲಬುರಿಗ ರೋಗಿಗಳಿಗೆ ಬರುವ ದಿನಗಳಲ್ಲಿ ಹಾಸಿಗೆ ಕೊರತೆ ಕಾಡುವ ಸಾಧ್ಯತೆಗಳೇ ಹೆಚ್ಚೆಂದು ಜಿಲ್ಲಾಡಳಿತ ತನ್ನ ವರದಿಯಲ್ಲಿ ಸರ್ಕಾರದ ಗಮನ ಸೆಳೆದಿದೆ.

ಕಲಬುರಗಿಯಲ್ಲಿ 2 ಸಾವಿರ ಗಡಿ ದಾಟಿದ ಕೇಸ್‌: ಕೊರೋನಾ ಸೋಂಕಿನ ಮೂಲವೇ ನಿಗೂಢ!

55 ವೈದ್ಯರನ್ನು ಸರತಿಯಂತೆ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ನಿಯೋಜನೆ ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿನ ವೈದ್ಯರ, ದಾದಿಯರೂ ಸೋಂಕಿತರಾಗುತ್ತಿರೋದರಿಂದ ರೋಗಿಗಳ ಸಂಖ್ಯೆ ಹೆಚ್ಚಿದಲ್ಲಿ ವೈದ್ಯ ಸಂಪನ್ಮೂಲ ಕೊರತೆ ಕಾಡುವ ಸಾಧ್ಯತೆಗಳಿವೆ, ಗುಣಮಟ್ಟದ ಚಿಕಿತ್ಸೆಯೇ ಮರೀಚಿಕೆಯಾಗುವ ಭೀತಿಯನ್ನು ತಳ್ಳಿ ಹಾಕಲಾಗದೆಂದು ಜಿಲ್ಲಾಡಳಿತ ಆತಂಕ ಹೊರಹಾಕಿದೆ. ಕಲಬುರಗಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಖಾಸಗಿ ಆಸ್ಪತ್ರೆಗಳಿಲ್ಲದ ಕಾರಣ ಇರೋ ಕೆಲವು ಆಸ್ಪತ್ರೆಗಳನ್ನೇ ಸಂಪರ್ಕಿಸಿರುವ ಜಿಲ್ಲಾಡಳಿತಕ್ಕೆ ಅಲ್ಲಿಂದ ಶೇ. 50 ರಷ್ಟುವೈದ್ಯರು, ದಾದಿಯರ ನೆರವಿನ ಭರವಸೆ ಮಾತ್ರ ದೊರಕಿದೆ.

ಲಾಕ್‌ಡೌನ್‌ ಅವಧಿಯಲ್ಲಿ 280 ಸೋಂಕು, 7 ಸಾವಾದರೆ, ಅನ್‌ಲಾಕ್‌ ಅವಧಿಯಲ್ಲಿ 1800 ಸೋಂಕು, 29 ಸಾವು ವರದಿಯಾಗಿರೋದು ಗಮನಿಸಿದರೆ ಶೇಕಡಾವಾರು ಮರಣ ಪ್ರಮಾಣ ಅನ್‌ಲಾಕ್‌ ಅವಧಿಯಲ್ಲೇ ಅಧಿಕ. ಗ್ರಾಮೀಣಕ್ಕಿಂತ ನಗರದಲ್ಲೇ ಸೋಂಕು- ಸಾವು ಹೆಚ್ಚು ಸಂಭವಿಸಿರೋದು ಆತಂಕಕಾರಿ ಬೆಳವಣಿಗೆ.

ಕೊರೋನಾ ಸಾವು-ನೋವು ನೋಟ

ಕಲಬುರಗಿ ನಗರ:

ಲಾಕ್‌ಡೌನ್‌: ಸೋಂಕು- 85, ಸಾವು-6
ಅನ್‌ಲಾಕ್‌: ಸೋಂಕು- 493, ಸಾವು- 17

ಕಮಲಾಪುರ:

ಲಾಕ್‌ಡೌನ್‌: ಸೋಂಕು- 18, ಸಾವಿಲ್ಲ
ಅನ್‌ಲಾಕ್‌: ಸೋಂಕು- 214, ಸಾವು- 1

ಆಳಂದ:

ಲಾಕ್‌ಡೌನ್‌: ಸೋಂಕು- 23, ಸಾವು- 1
ಅನ್‌ಲಾಕ್‌: ಸೋಂಕು- 162, ಸಾವು- 2

ಅಫಜಲ್ಪುರ:

ಲಾಕ್‌ಡೌನ್‌: ಸೋಂಕು- 5. ಸಾವಿಲ್ಲ
ಅನ್‌ಲಾಕ್‌: ಸೋಂಕು- 103, ಸಾವಿಲ್ಲ

ಜೇವರ್ಗಿ: ಯಡ್ರಾಮಿ:

ಲಾಕ್‌ಡೌನ್‌: ಸೋಂಕು- 22, ಸಾವಿಲ್ಲ
ಅನ್‌ಲಾಕ್‌: ಸೋಂಕು- 67, ಸಾವಿಲ್ಲ

ಸೇಡಂ:

ಲಾಕ್‌ಡೌನ್‌: ಸೋಂಕು- 4. ಸಾವಿಲ್ಲ
ಅನ್‌ಲಾಕ್‌: ಸೋಂಕು- 109, ಸಾವು- 1

ಚಿತ್ತಾಪುರ/ ಕಾಳಗಿ/ ಶಹಾಬಾದ್‌:

ಲಾಕ್‌ಡೌನ್‌: ಸೋಂಕು- 116, ಸಾವಿಲ್ಲ
ಅನ್‌ಲಾಕ್‌: ಸೋಂಕು- 462, ಸಾವು- 1

ಚಿಂಚೋಳಿ:

ಲಾಕ್‌ಡೌನ್‌: ಸೋಂಕು- 7, ಸಾವಿಲ್ಲ
ಅನ್‌ಲಾಕ್‌: ಸೋಂಕು- 120, ಸಾವು- 1

1) ಕಲಬುರಗಿ ನಗರದಲ್ಲಿ 165 ಕಂಟೈನ್ಮೆಂಟ್‌ ಝೋನ್‌ ಸೃಷ್ಟಿ
2) ರಾರ‍ಯಂಡಂ ಟೆಸ್ಟ್‌ನಲ್ಲಿ 52 ಕ್ಕೂ ಹೆಚ್ಚು ಜನರಿಗೆ ಸೋಂಕು ಧೃಢ
3) ಲಾಕ್ಡೌನ್‌ 123 ದಿನದಲ್ಲಿ 18 ಸಾವಾದರೆ, ಜುಲೈ 9 ದಿನದಲ್ಲೇ 16 ಸಾವು
4) ಪೊಲೀಸರಿಗೂ ಕಾಡುತ್ತಿರೋ ಸೋಂಕು-6 ಠಾಣೆ ಸೀಲ್‌ಡೌನ್‌
5) ದೇಶದ ಅನ್ಯ ರಾಜ್ಯಗಳಿಂದ ಜಿಲ್ಲೆಗೆ ವಲಸೆ ಬಂದವರು ಒಟ್ಟು 45 ಸಾವಿರ ಮಂದಿ
6) ಮಾಸ್ಕ್‌ ಧರಿಸದೆ, ನಿಯಮ ಪಾಲಿಸದ ಜಿಲ್ಲೆಯ ಜನ, ಸೋಂಕು ಗಣನೀಯ ಹೆಚ್ಚಳ- ಹೆಚ್ಚಿದ ಆತಂಕ
7) ಕಲಬುರಗಿ ಗ್ರಾಮೀಣ ಪ್ರದೇಶಕ್ಕಿಂತಲೂ ನಗರ ಪ್ರದೇಶದಲ್ಲೇ ಸೋಂಕು- ಸಾವಿನ ಹೆಚ್ಚಳ- ಆತಂಕ
8) ಅನೇಕ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಲ್ಲಿ ಸೋಂಕು, ಆಳಂದ, ಅಫಜಲ್ಪುರ ತಹಸೀಲ್‌ ಕಚೇರಿ ಸೀಲ್‌ಡೌನ್‌