ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಅಭಿಮಾನಿಗಳು ನಟರಾದ ಡಾ.ರಾಜ್‌ಕುಮಾರ್ ಮತ್ತು ಡಾ.ಪುನೀತ್ ರಾಜಕುಮಾರ್ ಅವರಿಗಾಗಿ ದೇಗುಲ ನಿರ್ಮಿಸಿದ್ದಾರೆ. ಜ.22 ರಂದು ಪುನೀತ್ ಅವರ ಪತ್ನಿ ಅಶ್ವಿನಿ ಅವರಿಂದ ಲೋಕಾರ್ಪಣೆಗೊಳ್ಳಲಿದ್ದಾರೆ.

ಭದ್ರಾವತಿ (ಜ.21): ಅಭಿಮಾನಿಗಳ ವತಿಯಿಂದ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಟರಾದ ಡಾ.ರಾಜ್‌ಕುಮಾರ್ ಮತ್ತು ಡಾ.ಪುನೀತ್ ರಾಜಕುಮಾರ್ ಅವರ ದೇಗುಲ ನಿರ್ಮಿಸಲಾಗಿದ್ದು, ಜ.22ರಂದು ಲೋಕಾರ್ಪಣೆಯಾಗಲಿದೆ.

ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಿ.ಕೆ.ಸಂಗಮೇಶ್ವರ್, ನಗರದ ಚಾಮೇಗೌಡ ಏರಿಯಾ ಡಾ.ರಾಜಕುಮಾರ್ ರಸ್ತೆಯ (ಬಿ.ಎಚ್ ರಸ್ತೆ) ನಗರಸಭೆ ಮಾರುಕಟ್ಟೆ ವಾಣಿಜ್ಯ ಸಂಕೀರ್ಣ ಬಳಿ ಅವರ ಅಭಿಮಾನಿಗಳ ಸಂಘದಿಂದ ನಿರ್ಮಿಸಿರುವ ರಾಜಕುಮಾರ್ ಮತ್ತು ಪುನೀತ್ ಅವರ ದೇಗುಲ ಹಾಗೂ ಕಂಚಿನ ಪ್ರತಿಮೆಗಳನ್ನು ಜ.22 ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಲೋಕಾರ್ಪಣೆ ಮಾಡಲಾಗುವುದು ಎಂದರು.

ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಅವರು ದೇಗುಲ ಲೋಕಾರ್ಪಣೆಗೊಳಿಸಲಿದ್ದಾರೆ. ಇಬ್ಬರ ಪ್ರತಿಮೆಗೆ ತಲಾ ₹5 ಲಕ್ಷ, ದೇಗುಲ ಕಟ್ಟಡ ನಿರ್ಮಾಣಕ್ಕೆ ₹25 ಲಕ್ಷ ಸೇರಿ ಒಟ್ಟು ₹35 ಲಕ್ಷ ವೆಚ್ಚವಾಗಿದೆ ಎಂದು ತಿಳಿದುಬಂದಿದೆ.

ರಾಜ್‌ಕುಮಾರ್ ಮತ್ತು ಪುನೀತ್ ರಾಜಕುಮಾರ್‌ ಅವರು ಚಿತ್ರರಂಗ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆ ಅನನ್ಯವಾಗಿದೆ. ಈ ಇಬ್ಬರು ಮಹಾನ್ ವ್ಯಕ್ತಿಗಳನ್ನು ನಾಡಿನ ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇವರ ಹೆಸರಿನಲ್ಲಿ ಅಭಿಮಾನಿಗಳು ನಿರ್ಮಿಸಿರುವ ದೇಗುಲ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.

ಸಚಿವ ಎಸ್.ಮಧುಬಂಗಾರಪ್ಪ, ನಗರಸಭೆ ಹಿರಿಯ ಸದಸ್ಯ ಬಿ.ಕೆ.ಮೋಹನ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದ್ದಾರೆ.