ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ, ಇಬ್ಬರು ಮನೆ ಮಾಲೀಕರು ಕಾರ್ಮಿಕರನ್ನು ಬಳಸಿ ಅಕ್ರಮವಾಗಿ ಮಲಗುಂಡಿ ಸ್ವಚ್ಛಗೊಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಕೆಲಸವನ್ನು ನಿಲ್ಲಿಸಿ, ಕಾರ್ಮಿಕರನ್ನು ರಕ್ಷಿಸಿ, ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಹಾವೇರಿ(ಜ.20) ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕುಸನೂರು ಗ್ರಾಮದಲ್ಲಿ ಮಲಗುಂಡಿ ಸ್ವಚ್ಛಗೊಳಿಸುವ ಅನಿಷ್ಟ ಪದ್ಧತಿ ಮರುಕಳಿಸಿದೆ. ಯಂತ್ರಗಳ ಕಾಲದಲ್ಲೂ ಮನುಷ್ಯರೇ ಮಲವನ್ನ ಬಾಚುವ ಮೂಲಕ ಕಾನೂನು ಉಲ್ಲಂಘನೆ ಮಾಡಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಿಷೇಧಿಸಿದ್ದರೂ ಕಾರ್ಮಿಕರನ್ನ ಕರೆತಂದು ಕೆಲಸ

ಕುಸನೂರು ಗ್ರಾಮದ ನಿವಾಸಿಗಳಾದ ಬಸವರಾಜ ಪೂಜಾರ ಮತ್ತು ಸುರೇಶ ಪೂಜಾರ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ತಮ್ಮ ಮನೆಯ ಶೌಚಗೃಹದ ಗುಂಡಿ ತುಂಬಿದ್ದ ಕಾರಣ, ಈ ಇಬ್ಬರು ಮಾಲೀಕರು ಕಾನೂನಿನ ಭಯವಿಲ್ಲದೆ ಕಾರ್ಮಿಕರನ್ನು ಕರೆಸಿ ಮಲವನ್ನ ತೆರವುಗೊಳಿಸಿದ್ದಾರೆ. ಸಾತೇನಹಳ್ಳಿ ಮೂಲದ ಇಬ್ಬರು ಕಾರ್ಮಿಕರು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಈ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.

ಸ್ಥಳಕ್ಕೆ ತಹಶೀಲ್ದಾರ್ ದಿಢೀರ್ ಭೇಟಿ

ಮಲಗುಂಡಿ ಸ್ವಚ್ಛಗೊಳಿಸುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಹಾನಗಲ್ ತಹಶೀಲ್ದಾರ್ ಎಸ್ ರೇಣುಕಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಪ್ರತ್ಯಕ್ಷವಾಗಿ ನಡೆಯುತ್ತಿದ್ದ ಅಮಾನವೀಯ ಕಾರ್ಯವನ್ನು ಕಂಡು ಅಧಿಕಾರಿಗಳು ಕೂಡಲೇ ಕೆಲಸವನ್ನು ಸ್ಥಗಿತಗೊಳಿಸಿ, ಪರಿಶೀಲನೆ ನಡೆಸಿದರು.

ಕಾರ್ಮಿಕರ ಆರೋಗ್ಯ ತಪಾಸಣೆ

ಮಲಗುಂಡಿಗೆ ಇಳಿದಿದ್ದ ಇಬ್ಬರು ಕಾರ್ಮಿಕರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗುಂಡಿಯಲ್ಲಿರುವ ವಿಷಕಾರಿ ಅನಿಲ ಮತ್ತು ಬ್ಯಾಕ್ಟೀರಿಯಾಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ತಕ್ಷಣವೇ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಗಿದೆ. ಕಾರ್ಮಿಕರ ರಕ್ಷಣೆ ಹಾಗೂ ಅವರಿಗೆ ಅರಿವು ಮೂಡಿಸುವ ಕಾರ್ಯವನ್ನೂ ಅಧಿಕಾರಿಗಳು ಮಾಡಿದ್ದಾರೆ.

ಮಾಲೀಕರ ಮೇಲೆ ಎಫ್‌ಐಆರ್ ದಾಖಲು

ಮಲಗುಂಡಿ ಸ್ವಚ್ಛಗೊಳಿಸಲು ಮನುಷ್ಯರನ್ನು ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆ ಮಾಲೀಕರಾದ ಬಸವರಾಜ ಪೂಜಾರ ಮತ್ತು ಸುರೇಶ ಪೂಜಾರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಘಟನೆಯು ಜಿಲ್ಲೆಯಲ್ಲಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆಯ ಅನುಷ್ಠಾನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.